ADVERTISEMENT

ಹಳೆಯ ದ್ವೇಷ: ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 7:02 IST
Last Updated 17 ಮಾರ್ಚ್ 2023, 7:02 IST
ದೇವನಹಳ್ಳಿಯ ಅಣ್ಣಿಘಟ್ಟ ಗ್ರಾಮದಲ್ಲಿ ಹಲ್ಲೆ ನಡೆದ ಸ್ಥಳ ಪರಿಶೀಲನೆ ನಡೆಸುತ್ತಿರುವ ಪೊಲೀಸ್‌ ಸಿಬ್ಬಂದಿ
ದೇವನಹಳ್ಳಿಯ ಅಣ್ಣಿಘಟ್ಟ ಗ್ರಾಮದಲ್ಲಿ ಹಲ್ಲೆ ನಡೆದ ಸ್ಥಳ ಪರಿಶೀಲನೆ ನಡೆಸುತ್ತಿರುವ ಪೊಲೀಸ್‌ ಸಿಬ್ಬಂದಿ   

ದೇವನಹಳ್ಳಿ: ತಾಲ್ಲೂಕಿನ ಅಣ್ಣಿಘಟ್ಟ ಗ್ರಾಮದಲ್ಲಿ ಬುಧವಾರ ತಡರಾತ್ರಿ ಜಮೀನಿನ ರಸ್ತೆ ಮೂಲಕ ಮನೆಗೆ ತೆರಳುತ್ತಿದ್ದ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಪಿಯುಸಿ ಓದುತ್ತಿದ್ದ ಶ್ರೀಕಾಂತ್‌ (19) ತೀವ್ರ ಗಾಯಗೊಂಡವರು.

ಅಣ್ಣಿಘಟ್ಟದ ನಾರಾಯಣಸ್ವಾಮಿ ಎಂಬುವರ ಕುಟುಂಬದ ಸದಸ್ಯರು ಸಂಬಂಧಿಕರೊಬ್ಬರ ಹುಟ್ಟುಹಬ್ಬದ ಕಾರ್ಯಕ್ರಮ ಮುಗಿಸಿಕೊಂಡು ತಡರಾತ್ರಿ ಗ್ರಾಮಕ್ಕೆ ಕಾರಿನಲ್ಲಿ ಮರಳುತ್ತಿದ್ದರು. ಅವರ ಮನೆಗೆ ಸಂಪರ್ಕ ಕಲ್ಪಿಸುವ ಜಮೀನಿನ ರಸ್ತೆಗೆ ದುಷ್ಕರ್ಮಿಗಳು ಅಡ್ಡಲಾಗಿ ದೊಡ್ಡ ಕಲ್ಲುಗಳನ್ನು ಇಟ್ಟಿದ್ದಾರೆ.

ADVERTISEMENT

ಕಾರು ಮುಂದೆ ಸಾಗಲು ಕಲ್ಲುಗಳನ್ನು ಪಕ್ಕಕ್ಕೆ ಸರಿಸಲು ಕೆಳಗೆ ಇಳಿದ ವಿದ್ಯಾರ್ಥಿಯ ಮೇಲೆ ಮುಖಕ್ಕೆ ಮಾಸ್ಕ್‌ ಧರಿಸಿದ್ದ ಇಬ್ಬರು ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಎರಗಿದ್ದಾರೆ. ಆತನ ಮುಖಕ್ಕೆ ಕಾರದ ಪುಡಿ ಎರಚಿ ಕಬ್ಬಿಣದ ಸಲಾಕೆಗಳಿಂದ ಕಾಲಿನ ಮೂಳೆ ಮುರಿಯುವಂತೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು
ತಿಳಿಸಿದ್ದಾರೆ.

ಕಾರಿನಲ್ಲಿದ್ದವರು ಪ್ರಾಣ ಭಯದಿಂದ ಶ್ರೀಕಾಂತ್‌ನನ್ನು ಸ್ಥಳದಲ್ಲಿಯೇ ಬಿಟ್ಟು ಸ್ವಲ್ಪ ದೂರು ಮುಂದೆ ಸಾಗಿದ್ದಾರೆ. ಕೆಲಹೊತ್ತಿನ ಬಳಿಕ ಬಂದು ನೋಡಿದಾಗ ಶ್ರೀಕಾಂತ್‌ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.

ರಸ್ತೆ ವಿಚಾರವಾಗಿ ಗ್ರಾಮದ ನರಸಿಂಹಮೂರ್ತಿ ಎಂಬುವರ ಕುಟುಂಬ ಹಾಗೂ ನಾರಾಯಣಸ್ವಾಮಿ ಕುಟುಂಬಕ್ಕೂ ಹಳೆಯ ವೈಷಮ್ಯ ಇದೆ. ಇದೇ ಕಾರಣದಿಂದ ಹಲ್ಲೆ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.