ADVERTISEMENT

ಋಣಮುಕ್ತ ಕಾಯ್ದೆ ಮರುಪರಿಶೀಲಿಸಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 13:09 IST
Last Updated 25 ಸೆಪ್ಟೆಂಬರ್ 2019, 13:09 IST
ವಿಜಯಪುರದಲ್ಲಿ ಚಿನ್ನದ ಅಂಗಡಿ
ವಿಜಯಪುರದಲ್ಲಿ ಚಿನ್ನದ ಅಂಗಡಿ   

ವಿಜಯಪುರ: ‘ಋಣಮುಕ್ತ ಕಾಯ್ದೆಯಡಿಯಲ್ಲಿ ಪಾನ್‌ ಬ್ರೋಕರ್ಸ್ ಬಳಿಯಲ್ಲಿ ಗಿರವಿ ಇಟ್ಟಿರುವ ಒಡವೆಗಳನ್ನು ಬಿಡುಗಡೆಗೊಳಿಸುವುದಾಗಿ ಮಾಡಿರುವ ಕಾಯ್ದೆಯಿಂದ ಕೆಲವರಿಗೆ ಮಾತ್ರ ಅನುಕೂಲವಾಗಬಹುದು. ಆದರೆ, ಬಡವರು, ಮಧ್ಯಮ ವರ್ಗದವರ ಕಷ್ಟಗಳಿಗೆ ಹಣ ಸಿಗದೇ ಸಂಕಷ್ಟಕ್ಕೆ ಸಿಲುಕುವಂತಾಗಿದ್ದು ಸರ್ಕಾರ ಮರುಪರಿಶೀಲನೆ ನಡೆಸುವುದು ಸೂಕ್ತ’ ಎಂದು ರೈತ ಮುಖಂಡ ಅಶ್ವತ್ಥನಾರಾಯಣ ತಿಳಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಂಗಾರದ ಒಡವೆಗಳನ್ನು ಗಿರವಿ ಇಟ್ಟಿರುವ ಸಾಮಾನ್ಯ ಜನರು ಖಾಸಗಿ ಲೇವಾದೇವಿಗಾರರಿಂದ ಪಡೆದ ಕೈಸಾಲ ಮನ್ನಾ ಮಾಡುವ ಕಾಯ್ದೆಯಲ್ಲಿ ನೋಡಲ್ ಅಧಿಕಾರಿಗೆ 90 ದಿನಗಳಲ್ಲಿ ಮಾಹಿತಿ ನೀಡಿದರೆ ಸಾಲ ಕಟ್ಟುವಂತಿಲ್ಲ ಎಂದು ಕಾಯ್ದೆ ಜಾರಿಗೆ ತರಲಾಗಿದೆ ಎಂದರು.

ಸಾಲ ಕೊಟ್ಟವರ ಮೇಲೆ ದೂರು ಕೊಟ್ಟರೆ, ಪುನಃ ಕಷ್ಟಗಳಿಗೆ ಅವರಿಂದ ಒಂದು ನಯಾ ಪೈಸೆಯನ್ನು ಪಡೆಯಲಿಕ್ಕೆ ಸಾಧ್ಯವಾಗಲ್ಲ. ರಿಸರ್ವ್ ಬ್ಯಾಂಕಿನ ಅಡಿ ಕೆಲಸ ಮಾಡುವ ಹಣಕಾಸು ಸಂಸ್ಥೆಗಳು ಈ ಕಾಯ್ದೆಗೆ ಒಳಪಡುವುದಿಲ್ಲ. ರಿಜಿಸ್ಟರ್ಡ್‌ ಫೈನಾನ್ಸ್ ಸಂಸ್ಥೆಗಳಿಗೆ ಇದು ಅನ್ವಯ ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಸಾಕಷ್ಟು ಮಂದಿ ಬಡ ರೈತರು, ಕೃಷಿಕರು ನೋಂದಾಯಿತ ಫೈನಾನ್ಸ್ ಕಂಪನಿಗಳಲ್ಲಿ ಅಡಮಾನ ಇಟ್ಟಿದ್ದಾರೆ. ಇದರಿಂದ ಕೆಲವರಿಗೆ ಮಾತ್ರವೇ ಇದು ಅನುಕೂಲವಾಗಲಿದೆ ಎಂದು ತಿಳಿಸಿದರು.

ADVERTISEMENT

ಮುಖಂಡ ವೆಂಕಟರಮಣಪ್ಪ ಮಾತನಾಡಿ, ಭೂರಹಿತ ಕೃಷಿ ಕಾರ್ಮಿಕರು, ದುರ್ಬಲ ವರ್ಗದ ಜನರು ಮತ್ತು ಸಣ್ಣ ರೈತರ ಹಿತದೃಷ್ಟಿ ಇಟ್ಟುಕೊಂಡು ಸರ್ಕಾರ ಈ ಕ್ರಮ ಕೈಗೊಂಡಿರಬಹುದು. ಆದರೆ, ಕೆಲವೊಮ್ಮೆ ಆಸ್ತಿ, ಆಭರಣ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಅಡಮಾನ ಇಡುತ್ತಾರಾದರೂ ಬಹುತೇಕ ಸಂದರ್ಭಗಳಲ್ಲಿ ಪರಿಚಯ, ನಂಬಿಕೆ ಮೇಲೆಯೇ ಸಾಲದ ವ್ಯವಹಾರ ನಡೆಯುತ್ತದೆ ಎಂದು ಹೇಳಿದರು.

ಋಣಮುಕ್ತ ಕಾಯ್ದೆಯಡಿ ದೂರು ನೀಡಿದರೆ ಆ ಒಂದು ಬಾರಿಗೆ ಋಣಮುಕ್ತರಾಗಬಹುದು. ನಂತರ ಜೀವನ ಸಾಗಿಸಲು ದಾರಿಯೇನು. ಒಮ್ಮೆ ಸಾಲ ನೀಡಿದವರ ಮೇಲೆ ದೂರು ಕೊಟ್ಟು ಋಣಮುಕ್ತರಾದರೆ ಬೇರೆ ಯಾರೂ ತುರ್ತು ಸಂದರ್ಭದಲ್ಲಿ ಸಾಲ ಕೊಡಲು ಮುಂದಾಗುವುದಿಲ್ಲ. ಇದರಿಂದ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯದ ಸಮಸ್ಯೆ, ಮದುವೆಗಳು, ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಜನರ ನೆರವಿಗೆ ಸರ್ಕಾರ ಬರುತ್ತದೆಯೇ. ಈಗಲೂ ಕಷ್ಟಕ್ಕೆ ₹5 ಸಾವಿರ ಕೊಡಿ ಅಂದ್ರೂ ಯಾರೂ ಕೊಡಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಒಡವೆ ಇಡ್ತೀವಿ ಅಂದ್ರೂ ಗಿರವಿ ಅಂಗಡಿಗಳವರು ಒಪ್ಪುತ್ತಿಲ್ಲ. ಇದು ಶಾಶ್ವತ ಪರಿಹಾರವಲ್ಲ. ಬಂಗಾರದ ಒಡವೆಗಳ ಮೇಲೆ ತೆಗೆದುಕೊಂಡಿರುವ ಸಾಲದ ಮೊತ್ತವನ್ನು ಅವರಿಗೆ ಹಿಂತಿರುಗಿಸಿ ಬಡ್ಡಿ ಮನ್ನಾ ಮಾಡಲಿ. ಮುಂದಿನ ದಿನಗಳಲ್ಲಿ ಜನರೊಟ್ಟಿಗೆ ಉತ್ತಮ ಬಾಂಧವ್ಯದೊಂದಿಗೆ ವ್ಯವಹಾರವೂ ಚೆನ್ನಾಗಿರುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.