ADVERTISEMENT

‘ಸನ್ಮಾರ್ಗದ ಕಡೆಗೆ ಸಾಗಲು ಸತ್ಸಂಗ’

ಶ್ರೀಕೃಷ್ಣ ಸತ್ಸಂಗ ಸೇವಾ ಸಮಿತಿಯಿಂದ ಜನ್ಮಾಷ್ಟಮಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 6:36 IST
Last Updated 13 ಆಗಸ್ಟ್ 2020, 6:36 IST
ವಿಜಯಪುರದ ರಾಯಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಸತ್ಸಂಗ ಕಾರ್ಯಕ್ರಮವನ್ನು ಜೆ.ಎಸ್.ರಾಮಚಂದ್ರಪ್ಪ ಉದ್ಘಾಟನೆ ಮಾಡಿದರು
ವಿಜಯಪುರದ ರಾಯಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಸತ್ಸಂಗ ಕಾರ್ಯಕ್ರಮವನ್ನು ಜೆ.ಎಸ್.ರಾಮಚಂದ್ರಪ್ಪ ಉದ್ಘಾಟನೆ ಮಾಡಿದರು   

ವಿಜಯಪುರ: ‘ಸತ್ಸಂಗ ಎನ್ನುವ ಕಾರ್ಯಕ್ರಮ ಮನುಷ್ಯರು ಸನ್ಮಾರ್ಗದ ಕಡೆಗೆ ಸಾಗಲು ಉತ್ತಮ ಮಾರ್ಗದರ್ಶನವಾಗಿದೆ’ ಎಂದು ಸತ್ಸಂಗದ ಅಧ್ಯಕ್ಷ ಜೆ.ಎಸ್.ರಾಮಚಂದ್ರಪ್ಪ ತಿಳಿಸಿದರು.

ಇಲ್ಲಿನ ರಾಯಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಶ್ರೀಕೃಷ್ಣ ಸತ್ಸಂಗ ಸೇವಾ ಸಮಿತಿಯಿಂದ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿಂದೂ ಧರ್ಮದ ತ್ರಿಮೂರ್ತಿ ದೇವರುಗಳಲ್ಲಿ ಭಗವಾನ್‌ ವಿಷ್ಣು ಕೂಡ ಒಬ್ಬರು. ವಿಷ್ಣು ಭೂಮಿಯಲ್ಲಿ ಕಾಣಿಸಿಕೊಂಡ 9 ಅವತಾರಗಳಲ್ಲಿ ಕೃಷ್ಣನ ಅವತಾರ ಕೂಡ ಒಂದು. ಭಗವಾನ್‌ ವಿಷ್ಣುವಿನ ಅವತಾರವೇ ಶ್ರೀಕೃಷ್ಣ. ಕೃಷ್ಣನ ಲೀಲೆಗಳೇ ಪವಾಡ. ಮಕ್ಕಳು ಹೆಚ್ಚಾಗಿ ಕೃಷ್ಣನನ್ನು ಇಷ್ಟಪಡುತ್ತಾರೆ. ಕೃಷ್ಣನ ಜೀವನ ಚರಿತ್ರೆಯಿಂದ ಮಕ್ಕಳಿಗೆ ಜೀವನದ ಮೌಲ್ಯವನ್ನು ತಿಳಿಸಬಹುದು’ ಎಂದರು.

ADVERTISEMENT

‘ಕೃಷ್ಣನಿಂದ ಕಲಿಯಬೇಕಾದ ಪಾಠಗಳು ಸಾಕಷ್ಟಿವೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಹೋದಾಗ ಬದುಕು ಸಾರ್ಥಕವಾಗುತ್ತದೆ. ಆತ್ಮಕ್ಕೆ ಜನನವೂ ಇಲ್ಲ, ಮರಣವೂ ಇಲ್ಲ.ಆದರೆ ನಮ್ಮ ದೇಹ ನಶ್ವರ. ಆತ್ಮ ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಹೋಗುತ್ತದೆ. ಹಾಗಾಗಿ ಸಾವಿಗೆ ಭಯಪಡಬಾರದು ಎಂದು ಭಗವಾನ್ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ತಿಳಿಸಿದ್ದಾನೆ. ಬದಲಾವಣೆಯೇ ಜೀವನದ ನಿಯಮ. ಜೀವನದಲ್ಲಿ ಆಗುವ ಬದಲಾವಣೆಗಳನ್ನು ಕಾಲಕ್ಕೆ ತಕ್ಕಂತೆ ನಾವು ಒಪ್ಪಿಕೊಳ್ಳಲೇಬೇಕು’ ಎಂದರು.

ಸಾಹಿತಿ ವಿ.ಎನ್.ರಮೇಶ್ ಮಾತನಾಡಿ, ‘ಮಾನವನು ತನ್ನ ಸ್ವಂತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಜೀವನದಲ್ಲಿ ಗೆಲ್ಲಲೂಬಹುದು, ಸೋಲಲೂಬಹುದು. ಹಾಗಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಕರ್ಮಮಾಡಿ ಫಲವನ್ನು ಬಯಸಬಾರದು. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ, ನಮಗೆ ಮಾಡೋ ಕೆಲಸಕ್ಕೆ ಪ್ರತಿಫಲ ಸಿಗುತ್ತದೆ ಎನ್ನುವುದರಲ್ಲಿ ನಂಬಿಕೆ ಇಟ್ಟುಕೊಂಡು ಜೀವಿಸಬೇಕಾಗಿದೆ. ಸಂದೇಹದಿಂದ ನಮಗೆ ಖುಷಿ ಸಿಗುವುದಿಲ್ಲ. ಇದರಿಂದ ನಮ್ಮ ಜೀವನವೇ ಹಾಳಾಗುತ್ತದೆ. ಇದನ್ನು ಪ್ರತಿಯೊಬ್ಬರೂ ಅರಿತುಕೊಂಡು ಬಾಳಬೇಕು’ ಎಂದರು.

ಎಂ.ವಿ.ನಾಯ್ಡು ತಂಡದಿಂದ ಗೀತಗಾಯನ ನಡೆಯಿತು. ಗಾಯಕರಾದ ಮಹಾತ್ಮಾಂಜನೇಯ, ನರಸಿಂಹಪ್ಪ, ಲಕ್ಷ್ಮೀಪತಿ ಅವರು ಗಾಯನ ಮಾಡಿದರು. ಸತ್ಸಂಗದ ಉಪಾಧ್ಯಕ್ಷ ಪಿ.ನಾರಾಯಣಪ್ಪ, ಸಂಚಾಲಕರಾದ ವಿ.ಎನ್.
ವೆಂಕಟೇಶ್, ರಮೇಶ್ ಸ್ವಾಮೀಜಿ, ಲಕ್ಷ್ಮೀನಾರಾಯಣ, ಮುನಿರಾಜು, ಮುನಿಕೃಷ್ಣಪ್ಪ, ಗೋವಿಂದರಾಜು, ಶಾಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.