ADVERTISEMENT

ರಸ್ತೆ ವಿಸ್ತರಣೆ ಅವೈಜ್ಞಾನಿಕ: ಸ್ಥಳೀಯರ ಪ್ರತಿಭಟನೆ

ಪ್ರಭಾವಿಗಳ ಆಸ್ತಿ ಉಳಿಸಲು ಒಂದೇ ಭಾಗದಲ್ಲಿ ಕಾಮಗಾರಿ: ಆರೋಪ । ಪುರಸಭೆ ಆಸ್ತಿ ಬಳಕೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 2:20 IST
Last Updated 20 ಜನವರಿ 2026, 2:20 IST
ವಿಜಯಪುರದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಅವೈಜ್ಞಾನಿವಾಗಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಕಾಮಗಾರಿ ಸ್ಥಳದಲ್ಲಿ ಸ್ಥಳೀಯ ಪ್ರತಿಭಟನೆ ನಡೆಸಿದರು
ವಿಜಯಪುರದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಅವೈಜ್ಞಾನಿವಾಗಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಕಾಮಗಾರಿ ಸ್ಥಳದಲ್ಲಿ ಸ್ಥಳೀಯ ಪ್ರತಿಭಟನೆ ನಡೆಸಿದರು   

ವಿಜಯಪುರ (ದೇವನಹಳ್ಳಿ): ಪ್ರಸ್ತುತ ಪಟ್ಟಣದ ಪುರಸಭೆಯಿಂದ ಕೆರೆಕೋಡಿವರೆಗೂ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸರಿಪಡಿಸಬೇಕೆಂದು ಆಗ್ರಹಿಸಿ ಸೋಮವಾರ ಸ್ಥಳೀಯ ನಾಗರಿಕರು ಪ್ರತಿಭಟನೆ ನಡೆಸಿದರು.

ಇಲ್ಲಿನ ರಸ್ತೆ ಬದಿಯ ಸ್ಥಳೀಯ ನಿವಾಸಿಗಳಿಗೆ, ಅಂಗಡಿ ಮಾಲೀಕರಿಗೆ ಹಾಗೂ ಪುರಸಭೆಗೆ ರಸ್ತೆ ವಿಸ್ತರಣೆಯ ಕುರಿತು ಯಾವುದೇ ಮಾಹಿತಿ ನೀಡದೆ, ಪ್ರಭಾವಿಗಳ ಒತ್ತಡಕ್ಕೆ ಮಣಿದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿದ್ದಾರೆ. ಈ ಮೂಲಕ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈಗಿರುವ ರಸ್ತೆಯ ಮಧ್ಯೆ ಭಾಗದಿಂದ ಎರಡು ಬದಿಯ ಸಮಾನಾಂತರವಾಗಿ ರಸ್ತೆ ವಿಸ್ತರಣೆ ಮಾಡಬೇಕು. ಪ್ರಭಾವಿಗಳ ಆಸ್ತಿ ಉಳಿಸಲು ಸಲುವಾಗಿ ರಸ್ತೆಯ ವಿಸ್ತರಣೆಯನ್ನು ಒಂದು ಭಾಗಕ್ಕೆ ಮಾತ್ರ ಸೀಮಿತಗೊಳಿಸಬಾರದು. ಪುರಸಭೆಗೆ ಆದಾಯ ಬರುವಂತಹ ಆಸ್ತಿಯನ್ನು ರಸ್ತೆ ವಿಸ್ತರಣೆಗೆ ಬಳಸಬಾರದು. ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ನಾಗರಿಕರು ಒತ್ತಾಯಿಸಿದರು.

ADVERTISEMENT

ರಸ್ತೆ ಮಧ್ಯೆದಿಂದ ಎರಡು ಬದಿಯಲ್ಲಿ 65 ಅಡಿ ರಸ್ತೆ ವಿಸ್ತರಣೆ ಆಗಬೇಕು. ಈವರೆಗೆ ರಸ್ತೆ ವಿಸ್ತರಣೆಯ ಬಗ್ಗೆ ಸ್ಥಳೀಯರಿಗೆ ನೋಟಿಸ್ ನೀಡಿಲ್ಲ, ರೆಡ್ ಟ್ಯಾಪ್ ಮಾರ್ಕಿಂಗ್ ಮಾಡಿಲ್ಲ. ಬದಲಿಗೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಳು ರಸ್ತೆಯ ವಿಸ್ತರಣೆಯಲ್ಲಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ರಸ್ತೆ ವಿಸ್ತರಣೆ ಕಾಮಗಾರಿಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಸ್ಥಳೀಯ ಅಂಗಡಿ ಮಾಲೀಕ ಮನೋಹರ್ ದೂರಿದರು.

ರಸ್ತೆ ವಿಸ್ತರಣೆಯನ್ನು ನ್ಯಾಯಯುತವಾಗಿ ನಡೆದರೆ ಎಲ್ಲರಿಗೂ ಅನುಕೂಲವಾಗಲಿದೆ. ಅದರ ಬದಲಿಗೆ ಒಬ್ಬಿಬ್ಬರ ಆಸ್ತಿ ಉಳಿವಿಗಾಗಿ ಹತ್ತಾರು ಜನರು ವಾಸಿಸುತ್ತಿರುವ ಜಾಗದಲ್ಲಿ ಒಂದೇ ಬದಿಗೆ ರಸ್ತೆಯ ವಿಸ್ತರಣೆ ಮಾಡಲಾಗುತ್ತಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಬೇಜಾಬ್ದಾರಿಯಿಂದ ಕಾಮಗಾರಿ ನಡೆಸುತ್ತಿರುವುದು ಖಂಡನೀಯ ಎಂದು ಸ್ಥಳೀಯ ಮನೆ ನಿವಾಸಿ ಸುಹಾಸ್ ದೂರಿದರು.

ಎಲ್ಲರಿಗೂ ನ್ಯಾಯ ಒಂದೇ. ರಸ್ತೆ ವಿಸ್ತರಣೆ ಅವೈಜ್ಞಾನಿಕ ಕಾಮಗಾರಿ ತಡೆಯಬೇಕು. ಕಾನೂನು ಉಲ್ಲಂಘಿಸಿದರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ದೂರು ಸಲ್ಲಿಸಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಾಗರಿಕರು, ಸಾರ್ವಜನಿಕರು ಚರ್ಚೆ ನಡೆಸಿ, ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಯುವ ಮುಖಂಡ ಕಿರಣ್ ತಿಳಿಸಿದರು.

ಬಳಿಕ ಪ್ರತಿಭಟನಕಾರರು ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ್ ಅವರಿಗೆ ಮನವಿ ಸಲ್ಲಿಸಿದರು. ಪುನೀತ್, ರಮೇಶ್, ಮನು, ಮೋಹನ್, ಸುಬ್ಬಣ್ಣ, ರಾಕೇಶ್, ರಂಜಿತ್ ಮತ್ತಿತರರು ಹಾಜರಿದ್ದರು.

ಪುರಸಭೆಗೂ ಮಾಹಿತಿ ಇಲ್ಲ

ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ್ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಪುರಸಭೆಗೂ ಯಾವುದೇ ಮಾಹಿತಿ ಇಲ್ಲ. ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಪೈಪ್‍ಲೈನ್ ಕೇಬಲ್ ಚರಂಡಿ ಇರುವುದರಿಂದ ಅವುಗಳಿಗೂ ಹಾನಿಯಾದರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಈ ಸಂಬಂಧ ಪುರಸಭೆ ಅಧ್ಯಕ್ಷರು ಸದಸ್ಯರೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಜನಪ್ರತಿನಿಧಿಗಳ ಮೌನ–ಹಲವು ಅನುಮಾನ

ಒಂದೆಡೆ ಪುರಸಭೆಗೆ ಸೇರಿದ ಕೋಟ್ಯಂತರ ರೂಪಾಯಿ ಆಸ್ತಿ ರಸ್ತೆ ವಿಸ್ತರಣೆ ಕಾಮಗಾರಿಗೆ ಬಳಕೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾದರೂ ಪುರಸಭೆ ಅಧ್ಯಕ್ಷರು ಸದಸ್ಯರು ಜಾಣ ಕುರುಡು ಪ್ರದರ್ಶಿಸುತ್ತಿದದ್ದಾರೆ. ಇದರಿಂದ ಹಲವು ಅನುಮಾನ ಮೂಡಿಸಿದೆ ಸಾರ್ವಜನಿಕರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.