ADVERTISEMENT

ದೊಡ್ಡಬಳ್ಳಾಪುರ: ಜನಪ್ರತಿನಿಧಿಗಳಿಗೆ ಕಾಣದೇ ಹೋದ ನಗರದ ರಸ್ತೆಗಳ ದುಸ್ಥಿತಿ

ನಟರಾಜ ನಾಗಸಂದ್ರ
Published 1 ಜನವರಿ 2024, 8:02 IST
Last Updated 1 ಜನವರಿ 2024, 8:02 IST
ದೊಡ್ಡಬಳ್ಳಾಪುರ ನಗರದ ಚೌಕದ ಮುಖ್ಯರಸ್ತೆಯಲ್ಲಿ ಡಾಂಬರು ಇಲ್ಲದೆ ಇರುವ ಜಲ್ಲಿಕಲ್ಲಿನ ರಸ್ತೆಯಲ್ಲಿ ಜನರ ಒಡಾಟ
ದೊಡ್ಡಬಳ್ಳಾಪುರ ನಗರದ ಚೌಕದ ಮುಖ್ಯರಸ್ತೆಯಲ್ಲಿ ಡಾಂಬರು ಇಲ್ಲದೆ ಇರುವ ಜಲ್ಲಿಕಲ್ಲಿನ ರಸ್ತೆಯಲ್ಲಿ ಜನರ ಒಡಾಟ   

ದೊಡ್ಡಬಳ್ಳಾಪುರ: ನಗರದ ಹೃದಯ ಭಾಗದ ರಸ್ತೆಗಳು ಡಾಂಬರು ಕಾಣದೆ ವರ್ಷಗಳೇ ಕಳೆದಿದ್ದು, ಜಲ್ಲಿ ರಸ್ತೆಯಲ್ಲಿ ಜನ ಓಡಾಡುತ್ತ ಹಿಡಿ ಶಾಪಹಾಕುವಂತಾಗಿದೆ.

ನಗರದ ಚೌಕದ ರಸ್ತೆ, ಕೊಂಗಾಡಿಯಪ್ಪ ಮುಖ್ಯ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಪ್ರತಿ ದಿನ ಸಾವಿರಾರು ಜನ ಒಡಾಡುತ್ತಾರೆ. ನಗರದ ಪ್ರಮುಖ ವಾಣಿಜ್ಯ ಚಟುವಟಿಕೆ ನಡೆಯುವ ಹಾಗೂ ಹಾಗೆಯೇ ಬಸ್‌ ನಿಲ್ದಾಣಕ್ಕೆ ಹೋಗುವ ರಸ್ತೆಯು ಇದಾಗಿದೆ. ಈ ರಸ್ತೆಗಳು ಡಾಂಬರು ಕಂಡು ದಶಕಗಳು ಕಳೆದಿದ್ದು, ಗುಂಡಿಗಳಿಂದ ತುಂಬಿ ಹೋಗಿದ್ದವು.

ಜನರ ಸತತ ಒತ್ತಾಯಕ್ಕೆ ಮಣಿದ ನಗರಸಭೆ ಆಡಳಿತ ಅರೆಬರೆ ಇದ್ದ ಡಾಂಬರು ರಸ್ತೆಯನ್ನು ಕಿತ್ತು ಜಲ್ಲಿ ಹಾಕಲಾಯಿತು. ಜನರು ಗುಂಡಿಗಳಿಂದ ತಪ್ಪಿಸಿಕೊಂಡು ಜಲ್ಲಿ ಕಲ್ಲಿನ ಮೇಲೆ ಒಡಾಡುತ್ತಿದ್ದಾರೆ, ಇಂದು ನಾಳೆ ಎನ್ನುತ್ತಾಲೆ ತಿಂಗಳುಗಳು ಕಳೆದರು ರಸ್ತೆಗೆ ಡಾಂಬರು ಬಂದಿಲ್ಲ.

ADVERTISEMENT

ಇದು ನಗರದ ಒಂದು ಮುಖ್ಯ ರಸ್ತೆಯ ಕತೆಯಾದರೆ, ಹೊರಗಿನಿಂದ ಬಸ್‌ ನಿಲ್ದಾಣಕ್ಕೆ ಪ್ರತಿದಿನ ಬಸ್‌ಗಳು ಬರುವ ಹಾಗೂ ಹೋಗುವ ಪ್ರಮುಖ ಡಿ.ಕ್ರಾಸ್‌ ರಸ್ತೆ. ಈ ರಸ್ತೆಯಲ್ಲಿ ಒಳಚರಂಡಿ ಛೇಂಬರ್‌ ಸೇರಿದಂತೆ ಹತ್ತಾರು ಗುಂಡಿಗಳು ಬೈಕ್‌ ಸವಾರರ ಬಲಿಗಾಗಿ ಕಾದಿವೆ. ಒಳರಂಡಿ ಛೇಂಬರ್‌ ಮುಚ್ಚಳ ಹಾಗೂ ಗುಂಡಿಗಳಿಂದ ತಪ್ಪಿಸಿಕೊಳ್ಳಲು ಮುಂದೆ ಹೋಗಲು ಬೈಕ್‌ ಸವಾರರು ಸಾಹಸಪಡಬೇಕಿದೆ. ಇಲ್ಲಿ ಅಪಘಾತ ನಡೆಯುವುದು ಸಾಮಾನ್ಯವಾಗಿ ಬಿಟ್ಟಿದೆ.

ಈ ಸಮಸ್ಯೆ ಡಿ.ಕ್ರಾಸ್‌ ರಸ್ತೆಗೆ ಮಾತ್ರ ಸೀಮಿತವಲ್ಲ. ಬಸ್‌ ನಿಲ್ದಾಣದಿಂದ ಬೆಂಗಳೂರು ಕಡೆಗೆ ಹೋಗುವ ಖಾಸ್‌ಬಾಗ್‌ ರಸ್ತೆ, ನೆಲಮಂಗಲ ರಸ್ತೆ, ತಾಲ್ಲೂಕು ಕಚೇರಿ ರಸ್ತೆ, ಇಸ್ಲಾಂಪುರ ದರ್ಗಾಜೋಗಹಳ್ಳಿ ರಸ್ತೆ, ಮುಗುವಾಳಪ್ಪ ವೃತದಿಂದ ಮುತ್ಯಾಲಮ್ಮ ದೇವಾಲಯದ ಕಡೆಗೆ ಹೋಗುವ ರಸ್ತೆ ಸೇರಿದಂತೆ ಒಳಚರಂಡಿ ಪೈಪ್‌ಲೈನ್‌ ಹಾದು ಹೋಗಿರುವ ಎಲ್ಲಾ ರಸ್ತೆಗಳ ಸ್ಥಿತಿಯು ಇದೇ ಆಗಿದೆ.

ರಸ್ತೆಯ ಮಧ್ಯದಲ್ಲಿ ಇರುವ ಒಳಚರಂಡಿ ಛೇಂಬರ್‌ಗಳ ಮುಚ್ಚಳಗಳ ಬಳಿ ಡಾಂಬರು ಹಾಕುವ ಸಮಯದಲ್ಲಿ ರಸ್ತೆಯ ಎತ್ತರಕ್ಕೆ ಅನುಗುಣವಾಗಿ ಒಳಚರಂಡಿ ಛೇಂಬರ್‌ ಮುಚ್ಚಳವನ್ನು ಎತ್ತರಿಸಿಕೊಳ್ಳದೇ ಇರುವುದೇ ಈ ಅವಾಂತರಕ್ಕೆ ಕಾರಣವಾಗಿದೆ. ಎಂಜಿನಿಯರ್‌ಗಳು ಸೂಕ್ತ ರೀತಿಯಲ್ಲಿ ಪರಿಶೀಲನೆ ಮಾಡದೇ ಇರುವುದೇ ರಸ್ತೆ ಮಧ್ಯಭಾಗದಲ್ಲಿ ಗುಂಡಿಗಳು ಬೀಳಲು ಕಾರಣ ಎನ್ನುತ್ತಾರೆ ಸಾರ್ವಜನಿಕರು.

ದೊಡ್ಡಬಳ್ಳಾಪುರ ನಗರದ ಚೌಕದ ಮುಖ್ಯರಸ್ತೆಯಲ್ಲಿ ಡಾಂಬರು ಇಲ್ಲದೆ ಇರುವ ಜಲ್ಲಿಕಲ್ಲಿನ ರಸ್ತೆಯಲ್ಲಿ ಜನರ ಒಡಾಟ
ರಾಜಕೀಯ ಬದಲಾವಣೆ ಕಾರಣ
ನಗರದ ರಸ್ತೆಗಳ ಈ ದುಸ್ಥಿತಿಗೆ ಕ್ಷೇತ್ರದ ರಾಜಕೀಯ ಬದಲಾವಣೆಗಳು ಕಾರಣವಾಗಿದೆ ಎನ್ನುವುದು ಅಧಿಕಾರಿಗಳ ವಾದ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಇದ್ದಾಗ ಸ್ಥಳೀಯವಾಗಿ ಕಾಂಗ್ರೆಸ್‌ ಪಕ್ಷದ ಶಾಸಕರು ಆಯ್ಕೆಯಾಗಿದ್ದರು. ಹಾಗಾಗಿ ನಗರದ ಅಭಿವೃದ್ಧಿ ಕೆಲಸಗಳಿಗೆ ಮೀಸಲಾಗಿರುವ ನಗರೋತ್ತಾನ ಯೋಜನೆಯಲ್ಲಿ ಸೂಕ್ತ ಸಮಯಕ್ಕೆ ಹಣ ಬಿಡುಗಡೆಯಾಗಿಲ್ಲ. ಈಗ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತವಿದೆ. ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ಹಾಗಾಗಿ ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ. ಆದರೆ ರಸ್ತೆಗಳು ಹಾಳಾಗಿರುವ ಬಗ್ಗೆ ಜನರು ಪ್ರಶ್ನೆ ಮಾಡುವುದು ಅಧಿಕಾರಿಗಳನ್ನು. ಕಳೆದ ಆರು ತಿಂಗಳಿಂದಲೂ ನಗರಸಭೆಗೆ ಸರ್ಕಾರದಿಂದ ಯಾವುದೇ ರೀತಿಯ ವಿಶೇಷ ಅನುದಾನ ಬಿಡುಗಡೆಯಾಗಿಲ್ಲ. ಈ ರಾಜಕೀಯ ಸಮಸ್ಯೆಯನ್ನು ಅಧಿಕಾರಿಗಳು ಸರಿಪಡಿಸಲು ಹೇಗೆ ಸಾಧ್ಯ ಎನ್ನುವವ ಪ್ರಶ್ನೆ ನಗರಸಭೆ ಅಧಿಕಾರಿಗಳದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.