ADVERTISEMENT

ಅನಗೊಂಡನಹಳ್ಳಿ ಹೋಬಳಿಯ ರಸ್ತೆಗಳ ಅಧ್ವಾನ: ವಾಹನ ಸವಾರರ ವ್ಯಥೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 2:59 IST
Last Updated 25 ಸೆಪ್ಟೆಂಬರ್ 2025, 2:59 IST
ಕೋಟುರು ಮತ್ತು ಮುತ್ಸಂದ್ರ ರಸ್ತೆ ದಶಕದಿಂದ ಡಾಂಬರು ಕಾಣದೆ ಮಣ್ಣಿನ ರಸ್ತೆಯಂತೆ ಇರುವುದು
ಕೋಟುರು ಮತ್ತು ಮುತ್ಸಂದ್ರ ರಸ್ತೆ ದಶಕದಿಂದ ಡಾಂಬರು ಕಾಣದೆ ಮಣ್ಣಿನ ರಸ್ತೆಯಂತೆ ಇರುವುದು   

ಹೊಸಕೋಟೆ: ತಾಲ್ಲೂಕಿನ ಅನಗೊಂಡನಹಳ್ಳಿ ಹೋಬಳಿಯ ವ್ಯಾಪ್ತಿಯ ಗ್ರಾಮಗಳ ಮುಖ್ಯರಸ್ತೆ ಮತ್ತು ಸಂಪರ್ಕ ರಸ್ತೆಗಳು ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಪಟ್ಟಣ, ನಗರಕ್ಕೆ ರೈತರು ತಾವು ಬೆಳೆದ ಹಣ್ಣು–ತರಕಾರಿಗಳನ್ನು ಸಾಗಿಸಲು ವ್ಯಥೆ ಪಡುತ್ತಿದ್ದಾರೆ.

ಆರೋಹಳ್ಳಿ ಕ್ರಾಸ್‌ನಿಂದ ಮುತ್ಸಂದ್ರ ವರೆಗೆ, ಮುತ್ಸಂದ್ರದಿಂದ ಬೆಳ್ಳೆಕೆರೆ, ಮುತ್ತುಗಹಳ್ಳಿ, ಕಣೆಕಲ್ ಕ್ರಾಸ್, ದೇವನಗುಂದಿ ರೈಲ್ವೆ ಸೇತುವೆ, ಸೋಣ್ಣೆಹಳ್ಳಿಯಿಂದ ಹೊಸಕೋಟೆ ಡೈರಿವರೆಗಿನ ರಸ್ತೆಗಳು ಸಂಚಾರದ ಯೋಗ್ಯತೆ ಕಳೆದುಕೊಂಡಿದೆ.

ದಶಕದಿಂದ ಡಾಂಬರು ಕಾಣದ ರಸ್ತೆ: ಆರೋಹಳ್ಳಿ ಕ್ರಾಸ್‌ನಿಂದ ಮುತ್ಸಂದ್ರ ವರೆಗೆ ರಸ್ತೆ ಕಳೆದ ಹತ್ತು ವರ್ಷದಿಂದ ಡಾಂಬರು ಕಂಡಿಲ್ಲ. ಈ ಮಣ್ಣಿನ ರಸ್ತೆಯಲ್ಲಿ ಸಂಚರಿಸಬೇಕಾದ್ದು ಈ ಭಾಗದ ಜನರ ಕರ್ಮ. ಮಳೆ ಬಂದರೆ ಕೆಸರು ಗದ್ದೆ, ಬಿಸಿಲು–ಗಾಳಿ ಇದ್ದರೆ ಧೂಳಿ ಅಭಿಷೇಕ ಆಗುತ್ತದೆ.

ADVERTISEMENT

ಇಲ್ಲಿ ಆಯತಪ್ಪಿದರೆ ಅಪಘಾತ: ಬೆಳ್ಳೆಕೆರೆ ಕ್ರಾ್‌ನಿಂದ ಸಮೇತನಹಳ್ಳಿ ರಸ್ತೆಯ ಕಡೆ ಹೋಗುವ ಬೆಳ್ಳೆಕೆರೆ ಕೆರೆಯ ದಂಡೆಯ ಮೇಲಿನ ರಸ್ತೆಯಲ್ಲಿ ಮೊಣಕಾಲುದ್ದ ಗುಂಡಿಗಳಿದ್ದರೂ, ಯಾರು ಸಹ ಗುಂಡಿ ಮುಚ್ಚುವ ಕೆಲಸ ಮಾಡಿಲ್ಲ. ಇಲ್ಲಿ ಎಚ್ಚರದಿಂದ ಸಂಚರಿಸಬೇಕು, ಆಯತಪ್ಪಿದರೆ ಅಘಾತ ಕಟ್ಟಿಟ್ಟ ಬುತ್ತಿ. ಇಲ್ಲಿ ಮಳೆ ಬಂದರೆ ಅಪಘಾತ ಸಂಭವಿಸುವುದು ಸಾಮಾನ್ಯವಾಗಿದೆ. ದಿನಕ್ಕೆ ಒಂದಾದರೂ ಇಲ್ಲಿ ಸಣ್ಣ ಪುಟ್ಟ ಅವಘಡಗಳು ನಡೆಯುತ್ತಲೇ ಇರುತ್ತದೆ. ಈ ಸಮಸ್ಯೆ ಶೀಘ್ರವೇ ಮುಕ್ತಿ ನೀಡಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹೊಸಕೋಟೆ, ಮಾಲೂರು , ಹೊಸೂರು, ಚಿಕ್ಕತಿರುಪತಿಗೆ ತೆರಳಲು ಸಂಪರ್ಕ ಕೊಂಡಿಯಾಗಿರುವ ದೇವನಗುಂದಿ ರೈಲ್ವೆ ಬ್ರಿಡ್ಜ್‌ ರಸ್ತೆಯಲ್ಲಿ ಮೊಣಕಾಲಿನ ವರೆಗೆ ಗುಂಡಿಗಳಿವೆ. ಮಳೆ ಬಂದರೆ ಪೈರು ನಾಟಿ ಹದವಾದ ಗದ್ದೆಯಂತೆ ರಸ್ತೆ ಬದಲಾಗುತ್ತಿದೆ.

ಬೆಳ್ಳೆಕೆರೆ ದಂಡೆಯ ಮೇಲಿನ ರಸ್ತೆಯ ಗುಂಡಿ

ಹೊಸಕೋಟೆ ತಾಲ್ಲೂಕಿನಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಪಡಿಸಿಲ್ಲ. ಹೊಸ ರಸ್ತೆಯನ್ನೂ ನಿರ್ಮಿಸಿಲ್ಲ. ಇದು ಸಹ ಸರ್ಕಾರದ ‘ಗ್ಯಾರಂಟಿ’ ಎಂದು ಸ್ಥಳೀಯ ನಾಯಕರು ಅಧಿಕಾರಿಗಳು ಭಾವಿಸಿದ್ದಾರೆ ಎಂದು ತೋರುತ್ತದೆ.

ಸ್ಥಳೀಯರು ಅನಗೊಂಡನಹಳ್ಳಿ ಹೋಬಳಿ

ಆರೋಹಳ್ಳಿ ಕ್ರಾಸ್‌ನಿಂದ ಮುತ್ಸಂದ್ರ ವರೆಗಿನ ರಸ್ತೆ ಒತ್ತುವರಿಯಾಗುತ್ತಿದೆ. ಇದು ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕಂಡರೂ ಕಾಣದಂತೆ ಇದ್ದಾರೆ.

ಜನಾರ್ದನ್ ರೆಡ್ಡ ಕೋಟುರು ತೋಟ

ಹೊಸಕೋಟೆ ಮತ್ತು ಶಿಡ್ಲಘಟ್ಟ ನಡುವಿನ ಸೋಣ್ಣೆಹಳ್ಳಿಯಿಂದ ಹೊಸಕೋಟೆ ಡೇರಿವರಗೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇಂತಹ ರಸ್ತೆಗಳಿಗೆ ಜನಪ್ರತಿನಿಧಿಗಳ ಹೆಸರು ಇಟ್ಟರೇ ಸೂಕ್ತ ಎನಿಸುತ್ತದೆ.

ಮುನಿರಾಜು ಸೋಣ್ಣೆಹಳ್ಳಿ

ಆರೋಹಳ್ಳಿ ಬಳಿ ದಕ್ಷಿಣ ಪಿನಾಕಿನಿ ನದಿಗೆ ಅಡ್ಡಲಾಗಿ ಸೇತುವೆ ಕಟ್ಟಿರುವ ಕಾರಣ ವೈಟ್‌ಫೀಲ್ಡ್ ಮತ್ತು ಸರ್ಜಾಪೂರ ವರ್ತುರ್ ಆನೇಕಲ್‌ಗೆ ತೆರಳಲು ಆರೋಹಳ್ಳಿ ಕೊಟೂರು ಗ್ರಾಮಗಳ ರಸ್ತೆಗಳು ಸಮೀಪವಾಗುತ್ತವೆ. ಆದರೆ ಇಲ್ಲಿನ ರಸ್ತೆ ಡಾಂಬರೀಕರಣಗೊಂಡು 10 ವರ್ಷ ಕಳೆದಿದೆ.

ಮುರಳಿ ಆರೋಹಳ್ಳಿ

ದೇವನಗುಂದಿ ರೈಲ್ವೆ ಬ್ರಿಡ್ಜ್ ಬಳಿ ಸಾಕಷ್ಟು ವಾಹನಗಳು ಪ್ರತಿನಿತ್ಯ ಓಡಾಡುತ್ತವೆ. ಇಲ್ಲಿ ಕೇಳಸೇತುವೆ ನಿರ್ಮಾಣಕ್ಕೆ ಚಾಲನೆ ದೊರೆತು ಹಲವು ವರ್ಷ ಕಳೆದರೂ ಕಾಮಗಾರಿಯೇ ಆರಂಭವಾಗಿಲ್ಲ.

ವರದಾಪುರ ನಾಗರಾಜ್ ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.