ADVERTISEMENT

ಶುದ್ಧ ಜಲಮೂಲ ಉಳಿಸುವ ಪ್ರಯತ್ನ; ಇಒ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 14:36 IST
Last Updated 23 ಜುಲೈ 2020, 14:36 IST
ಕಾಳಪ್ಪನಹಳ್ಳಿ ಸೋಮೇಶ್ವರ ದೇವಾಲಯದ ಕಲ್ಯಾಣಿ ಕಾಮಗಾರಿಯಲ್ಲಿ ಶ್ರಮದಾನ ಮಾಡಿದ ಹೊಸಕೋಟೆ ತಾಲ್ಲೂಕು ಇಒ ಶ್ರೀನಾಥಗೌಡ ಹಾಗೂ ಸಿಬ್ಬಂದಿ
ಕಾಳಪ್ಪನಹಳ್ಳಿ ಸೋಮೇಶ್ವರ ದೇವಾಲಯದ ಕಲ್ಯಾಣಿ ಕಾಮಗಾರಿಯಲ್ಲಿ ಶ್ರಮದಾನ ಮಾಡಿದ ಹೊಸಕೋಟೆ ತಾಲ್ಲೂಕು ಇಒ ಶ್ರೀನಾಥಗೌಡ ಹಾಗೂ ಸಿಬ್ಬಂದಿ   

ಸೂಲಿಬೆಲೆ: ‘ಪ್ರತಿ ಗ್ರಾಮ ಪಂಚಾಯಿತಿಗೆ ಕನಿಷ್ಠ ಒಂದರಂತೆ ಕಲ್ಯಾಣಿ ಅಥವಾ ಕುಂಟೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದೊಂದಿಗೆ 14 ಕಡೆ ಕಾಮಗಾರಿಗಳನ್ನು ಆರಂಭಿಸಲಾಗಿದೆ’ ಎಂದು ಹೊಸಕೋಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥಗೌಡ ಹೇಳಿದರು.

ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಪ್ಪನಹಳ್ಳಿ ಸೋಮೇಶ್ವರ ದೇವಾಲಯದ ಕಲ್ಯಾಣಿ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.

‘ಜಲ ಸಂರಕ್ಷಣೆಯ ಈ ಕಾರ್ಯದಲ್ಲಿ ಜನರ ಸಹಭಾಗಿತ್ವ ಹೆಚ್ಚಿದಷ್ಟು ಜಲಮೂಲ ಸಂರಕ್ಷಣೆ ಸಾಧ್ಯ. ಈ ಕುರಿತು ಅರಿವು ಮೂಡಿಸುವ ಹಾಗೂ ಮುಂದಿನ ತಲೆಮಾರಿನವರಿಗೆ ಶುದ್ಧ ಜಲಮೂಲ ಉಳಿಸುವ ಪ್ರಯತ್ನ ನಡೆದಿದೆ’ ಎಂದರು.

ADVERTISEMENT

‘ಪೂರ್ವಜರು ನಿರ್ಮಿಸಿರುವ, ನಶಿಸುವ ಹಂತದಲ್ಲಿರುವ ಸಾಂಪ್ರದಾಯಿಕ ಕೆರೆ, ಕಟ್ಟೆ, ಕಲ್ಯಾಣಿ, ಕುಂಟೆಗಳನ್ನು ಸಂರಕ್ಷಿಸುವ ಉದ್ದೇಶದಿಂದ ಜಲಾಮೃತ ಪರಿಕಲ್ಪನೆಯಡಿ ಶ್ರಮದಾನ ಮತ್ತು ಇತರ ಯೋಜನೆಗಳನ್ನು ಒಗ್ಗೂಡಿಸಿ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ’ ಎಂದರು.

‘ಅಂತರ ಕಾಯ್ದುಕೊಂಡು, ಕೊರೊನಾ ತಡೆಗಟ್ಟಲು ಸರ್ಕಾರ ಸೂಚಿಸಿರುವ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಕಾಮಗಾರಿ ಆರಂಭಿಸಲಾಗಿದೆ. ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡಲು ಮುಂದೆ ಬರುವ ಅರ್ಹ ಕುಟುಂಬಗಳಿಗೆ ಕೆಲಸ ದೊರೆಯುವಂತೆ ಮಾಡಲಾಗುವುದು. ಯೋಜನೆಯ ಪ್ರಯೋಜನವನ್ನು ಪಡದುಕೊಳ್ಳಬೇಕು’ ಎಂದು ಅವರು ಕೋರಿದರು.

ತಾವರೆಕೆರೆ ಗ್ರಾಮ ಪಂಚಾಯಿತಿ ಪಿಡಿಒ ಸುಂದರ್ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.