ADVERTISEMENT

ಆನೇಕಲ್: ಸ್ವಸಹಾಯ ಗುಂಪಿನಿಂದ ಮಾರಾಟ ಮೇಳ

ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 4:01 IST
Last Updated 9 ಮಾರ್ಚ್ 2023, 4:01 IST
ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಆಯೋಜಿಸಿದ್ದ ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಯೋಜನಾ ನಿರ್ದೇಶಕ ಕೆ. ರಂಗಸ್ವಾಮಿ ಉದ್ಘಾಟಿಸಿದರು
ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಆಯೋಜಿಸಿದ್ದ ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಯೋಜನಾ ನಿರ್ದೇಶಕ ಕೆ. ರಂಗಸ್ವಾಮಿ ಉದ್ಘಾಟಿಸಿದರು   

ಆನೇಕಲ್: ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಜಿಲ್ಲಾ ಕೌಶಲ ಮಿಷನ್‌ ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿತ್ತು. ತಾಲ್ಲೂಕಿನ ವಿವಿಧ ಗ್ರಾಮದ ಸ್ವಸಹಾಯ ಗುಂಪುಗಳು ಪಾಲ್ಗೊಂಡಿದ್ದವು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ. ರಂಗಸ್ವಾಮಿ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಸ್ವಉದ್ಯೋಗದಲ್ಲಿ ತೊಡಗಿಕೊಳ್ಳಬೇಕು. ಟೈಲರಿಂಗ್‌, ಬ್ಯೂಟಿಷಿಯನ್‌ ಸೇರಿದಂತೆ ಕಿರು ಉದ್ಯಮ ಸ್ಥಾಪಿಸುವುದರಿಂದ ಮತ್ತಷ್ಟು ಮಂದಿಗೆ ಉದ್ಯೋಗ ನೀಡಿದಂತಾಗುತ್ತದೆ ಎಂದು ಹೇಳಿದರು.

ಸಾಮಾಜಿಕ ತಾರತಮ್ಯ ತಪ್ಪಿಸಲು ಶಿಕ್ಷಣ ಅಗತ್ಯ. ಹಾಗಾಗಿ, ಮಹಿಳೆಯರು ಉನ್ನತ ಶಿಕ್ಷಣ ಪಡೆಯಬೇಕು. ಗ್ರಾಮಾಂತರ ಪ್ರದೇಶದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡುವುದರಿಂದ ಉನ್ನತವಾದುದ್ದನ್ನು ಸಾಧಿಸಬಹುದಾಗಿದೆ ಎಂದರು.

ADVERTISEMENT

ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಉನ್ನತ ಸಾಧನೆ ಮಾಡಿದ್ದಾರೆ. ಗ್ರಾಮೀಣ ಭಾಗದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಉತ್ತಮ ವೇದಿಕೆಗಳಾಗಿವೆ. ಸ್ವಸಹಾಯ ಗುಂಪುಗಳು ತಮ್ಮ ವ್ಯಾಪ್ತಿಯಲ್ಲಿನ ಮಹಿಳೆಯರನ್ನು ಒಗ್ಗೂಡಿಸಿ ಉತ್ಪನ್ನಗಳ ತಯಾರಿಕೆ ನಡೆಸಬೇಕು. ಸರ್ಕಾರ ಸಾಲ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸುವುದರಿಂದ ಉದ್ಯಮಿಗಳಾಗುವ ನಿಟ್ಟಿನಲ್ಲಿ ಶ್ರಮವಹಿಸಬೇಕು ಎಂದರು.

ಪ್ರಗತಿಪರ ಚಿಂತಕ ಡಾ.ಎ.ಆರ್. ಗೋವಿಂದಸ್ವಾಮಿ ಮಾತನಾಡಿ, ಸ್ತ್ರೀ ಸಬಲೀಕರಣ ಇಂದಿನ ಅಗತ್ಯವಾಗಿದೆ. ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯಲು ಹೆಚ್ಚಿನ ಜ್ಞಾನ ಪಡೆಯುವ ನಿಟ್ಟಿನಲ್ಲಿ ಅಧ್ಯಯನ ನಡೆಸಬೇಕು ಎಂದು ಸಲಹೆ ನೀಡಿದರು.

ಮಾತೃ ಪ್ರಧಾನ ವ್ಯವಸ್ಥೆಯಿಂದ ಸಂಸಾರದಲ್ಲಿ ಯಶಸ್ಸುಗಳಿಸಲು ಸಾಧ್ಯ. ಹೆಣ್ಣು ಸಂಸಾರದ ಕಣ್ಣು. ಹಾಗಾಗಿ, ಹೆಣ್ಣನ್ನು ಗೌರವಿಸುವುದು ಸಮಾಜದ ಜವಾಬ್ದಾರಿ. ಇತಿಹಾಸದಲ್ಲಿ ತಿಳಿಸಿರುವಂತೆ ಹಲವು ಯುದ್ಧಗಳಲ್ಲಿ ಗೆಲುವು ಸಾಧಿಸಲು ಮಹಿಳೆಯರ ಪಾತ್ರ ಹೆಚ್ಚಿದೆ. ಅಬ್ಬಕ್ಕ, ಕಿತ್ತೂರು ರಾಣಿ ಚನ್ನಮ್ಮ, ಓಬವ್ವ ಸೇರಿದಂತೆ ಮಹಿಳೆಯರು ಯುದ್ಧಗಳಲ್ಲಿ ಭಾಗಿಯಾಗಿರುವುದು ಇತಿಹಾಸದಲ್ಲಿ ದಾಖಲಾಗಿದೆ ಎಂದರು.

ಹೆಬ್ಬಗೋಡಿ ನಗರಸಭೆ ಪೌರಾಯುಕ್ತ ಕೆ. ನರಸಿಂಹಮೂರ್ತಿ, ಅತ್ತಿಬೆಲೆ ಪುರಸಭಾ ಮುಖ್ಯಾಧಿಕಾರಿ ಎಸ್‌. ಮಂಜುನಾಥ್‌, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ನಾಗವೇಣಿ, ಡಾ.ಮಧುರಾಣಿ, ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಸುಬ್ಬನಾಯಕ್‌, ಧನಲಕ್ಷ್ಮೀ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.