ADVERTISEMENT

ಶರಣ ಸಂಸ್ಕೃತಿ ಪ್ರಚಾರದಲ್ಲಿ ಸಾಣೇಹಳ್ಳಿ ಮಠ ಮುಂಚೂಣಿ: ಪಂಡಿತಾರಾಧ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 2:13 IST
Last Updated 26 ಫೆಬ್ರುವರಿ 2026, 2:13 IST
<div class="paragraphs"><p>ದೊಡ್ಡಬಳ್ಳಾಪುರದಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ ರಾಜ್ಯ ಅಧ್ಯಕ್ಷ ಹುಲಿಕಲ್ ನಟರಾಜು ಬರೆದಿರುವ ಪುಸ್ತಕಗಳನ್ನು ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗೆ ನೀಡಿದರು</p></div>

ದೊಡ್ಡಬಳ್ಳಾಪುರದಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ ರಾಜ್ಯ ಅಧ್ಯಕ್ಷ ಹುಲಿಕಲ್ ನಟರಾಜು ಬರೆದಿರುವ ಪುಸ್ತಕಗಳನ್ನು ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗೆ ನೀಡಿದರು

   

ದೊಡ್ಡಬಳ್ಳಾಪುರ: ಸಾಣೇಹಳ್ಳಿಮಠವು ಸಾಹಿತ್ಯ, ಶಿಕ್ಷಣ ಮತ್ತು ರಂಗಭೂಮಿಯ ಮೂಲಕ ಶರಣ ಸಂಸ್ಕೃತಿಯನ್ನು ಪಸರಿಸುತ್ತಿರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ ಎಂದು ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ ರಾಜ್ಯ ಅಧ್ಯಕ್ಷ ಹುಲಿಕಲ್ ನಟರಾಜು ಬರೆದಿರುವ ‘ಯಶಸ್ಸಿನ ದಾರಿ ನಿಮ್ಮದಾಗಲಿ, ಪ್ರಶ್ನಿಸದೆ ನಂಬದಿರಿ, ಅರಿವೇ ಗುರು, ಸತ್ಯ ಮಿಥ್ಯ, ಆರೋಗ್ಯವೇ ಆನಂದ’ ಪುಸ್ತಕ ಸ್ವೀಕರಿಸಿ ಮಾತನಾಡಿದರು.

ADVERTISEMENT

ಶಿವಸಂಚಾರ ಎಂಬ ರಂಗತಂಡದ ಮೂಲಕ ಪ್ರತಿ ವರ್ಷ ನಾಟಕೋತ್ಸವ ಸಾಣೇಹಳ್ಳಿ ಶಿವಕುಮಾರ ಬಯಲು ರಂಗಮಂದಿರದಲ್ಲಿ ನಡೆಯುತ್ತದೆ. ರಾಷ್ಟ್ರೀಯ ನಾಟಕೋತ್ಸವ ಈಗಾಗಲೇ 2025 ನವೆಂಬರ್ ತಿಂಗಳಲ್ಲಿ ಜರುಗಿತು. ಈ ಬಾರಿಯ ಶಿವ ಸಂಚಾರದಲ್ಲಿ ಜಂಗಮದೆಡೆಗೆ, ಶಿವಯೋಗಿ ಸಿದ್ಧರಾಮೇಶ್ವರ, ಕಳ್ಳರ ಸಂತೆ ನಾಟಕ ಪ್ರದರ್ಶಿಸಲಾಯಿತು. ಪ್ರಸ್ತುತ ಶಿವಸಂಚಾರ ನಾಟಕ ತಂಡ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಂಗಪ್ರದರ್ಶನ ಮಾಡುತ್ತಿದೆ ಎಂದರು.

ಸಾಣೇನಹಳ್ಳಿ ಮಠದಲ್ಲಿ ಪ್ರತಿವರ್ಷ ನಡೆಯುವ ರಾಷ್ಟ್ರೀಯ ನಾಟಕೋತ್ಸವದ ಸಮಯದಲ್ಲಿ ನಾಟಕ ಪ್ರದರ್ಶನ ಜತೆ ವಿಚಾರ ಸಂಕಿರಣ, ವಚನಗೀತೆ, ನೃತ್ಯ ರೂಪಕ  ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತವೆ. ಏಪ್ರಿಲ್ ತಿಂಗಳಲ್ಲಿ ಮಕ್ಕಳಿಗಾಗಿ ವಿಶೇಷ ಬೇಸಿಗೆ ಶಿಬಿರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದರು.

ಹುಲಿಕಲ್ ನಟರಾಜು ಮಾತನಾಡಿ, ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವೈಚಾರಿಕತೆ, ಸಾಮಾಜಿಕ ಸುಧಾರಣೆ ಮತ್ತು ಶರಣ ಸಂಸ್ಕೃತಿಯನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಬಸವಣ್ಣನವರ ತತ್ವಗಳನ್ನು ಅನುಸರಿಸುವ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ವೈಚಾರಿಕ ಪ್ರಜ್ಞೆಯನ್ನು ಮೂಡಿಸುತ್ತಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಗೋವಿಂದರಾಜು, ಜ್ಞಾನಗಂಗಾ ಪ್ರೌಢ ಶಾಲೆಯ ಶಿಕ್ಷಕ ಕೋದಂಡರಾಮ್, ಮುತ್ತಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.