ADVERTISEMENT

ಸಂಕ್ರಾಂತಿ: ಗ್ರಾಮೀಣ ಸೊಗಡಿನ ಹಬ್ಬ

ದೇವನಹಳ್ಳಿ: ವಿಹಾನ್ ಪಬ್ಲಿಕ್ ಶಾಲೆಯಲ್ಲಿ ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 14:36 IST
Last Updated 9 ಜನವರಿ 2020, 14:36 IST
ಸಂಕ್ರಾಂತಿ  ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು
ಸಂಕ್ರಾಂತಿ  ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು   

ದೇವನಹಳ್ಳಿ: ಆಧುನಿಕ ಬೆಳವಣಿಗೆಯಲ್ಲಿ ಗ್ರಾಮೀಣ ಸೊಗಡಿನ ಹಬ್ಬ–ಆಚರಣೆಗಳು ಮೂಲೆ ಗುಂಪಾಗುತ್ತಿವೆ. ಇದರ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ವಿಹಾನ್ ಪಬ್ಲಿಕ್ ಶಾಲೆ ಆಡಳಿತ ಮಂಡಳಿ ಖಜಾಂಚಿ ಪದ್ಮಾ ಅಭಿಪ್ರಾಯಪಟ್ಟರು.

ಇಲ್ಲಿನ ವಿಹಾನ್ ಪಬ್ಲಿಕ್ ಶಾಲಾ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆ ಸಹಭಾಗಿತ್ವದಲ್ಲಿ ನಡೆದ ‘ಸಂಕ್ರಾಂತಿ ಸಂಭ್ರಮ 2020’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನವರಿ ಹೊಸ ವರ್ಷದ ನಂತರ ಬರುವ ಮೊದಲ ಹಬ್ಬ ಸಂಕ್ರಾತಿ. ಮಕ್ಕಳಿಗೆ ಗಣೇಶ ಹಬ್ಬ, ಮಹಿಳೆಯರಿಗೆ ವರಲಕ್ಷ್ಮಿಹಬ್ಬ, ಮಹಾಲಯ ಅಮಾವಾಸ್ಯೆಗೆ ಹಿರಿಯರಿಗೆ ಧೂಪ ಹಾಕುವ ಹಬ್ಬವಾದರೆ ಸಂಕ್ರಾಂತಿ ಇಡೀ ಕುಟುಂಬ ಮತ್ತು ಗ್ರಾಮಸ್ಥರು ರಾಸುಗಳೊಂದಿಗೆ ಸಾಮೂಹಿಕವಾಗಿ ಆಚರಿಸುವ ಏಕೈಕ ಹಬ್ಬ ಎಂದು ಅಭಿಪ್ರಾಯಪಟ್ಟರು.

ಎಳ್ಳು, ಬೆಲ್ಲ, ಕೊಬ್ಬರಿ ಸಮಪ್ರಮಾಣದ ಮಿಶ್ರಣ ಮಾಡಿ ಹಂಚುವುದು ಈ ಹಬ್ಬದ ವಿಶೇಷ. ಫಲ, ಪುಪ್ಪ, ತಾಂಬೂಲ, ಕಬ್ಬು, ತೆಂಗಿನಕಾಯಿ ಇಟ್ಟು ಎತ್ತುಗಳಿಗೆ ಸ್ನಾನ ಮಾಡಿಸಿ ನೂತನ ವಿನ್ಯಾಸಭರಿತ ಹೊದಿಕೆ ರಾಸುಗಳ ಮೇಲೆ ಹಾಕಿ ಕೊಂಬುಗಳನ್ನು ಸಿಂಗರಿಸಿ ಮೆರವಣಿಗೆ ನಡೆಸುವುದು ವಾಡಿಕೆ. ಪ್ರಥಮ ಪೂಜೆ ನಂತರ ಸಿಹಿ ಪೊಂಗಲ್‌ನ ಸಾಮೂಹಿಕ ಭೋಜನೆ ಸವಿಯುವುದು ಹಬ್ಬದ ವಿಶೇಷ ಎಂದರು.

ADVERTISEMENT

ಶಾಲಾ ಆಡಳಿತ ಮಂಡಳಿ ಮುಖ್ಯಸ್ಥ ಪ್ರತಾಪ್ ಯಾದವ್ ಮಾತನಾಡಿ, ಇಡೀ ವರ್ಷ ಕೃಷಿಯಲ್ಲಿ ತೊಡಗುವ ರೈತ ಮತ್ತು ರಾಸುಗಳ ನಡುವೆ ಖುಷಿ ತರುವ ಆಚರಣೆ ಹಬ್ಬ. ಬೆಂಕಿ ಹಾಯಿಸುವುದು, ಕಾಟೇರಮ್ಮಗೆ ಪೂಜೆ ನಡೆಸಿ ಯಾವುದೇ ಮಾರಕ ರೋಗ ಬರದಂತೆ ಪ್ರಾರ್ಥಿಸುವುದು, ಗ್ರಾಮೀಣ ಜನರ ನಂಬಿಕೆ ಎಂದು ಹೇಳಿದರು.

ಶಾಲೆ ಅಂಗಳದಲ್ಲಿ 100 ಮಹಿಳಾ ಸ್ವರ್ಧಿಗಳಿಗೆ ರಂಗೋಲಿ ಸ್ವರ್ಧೆ ನಡೆಯಿತು. 50ಮಹಿಳೆಯರಿಗೆ ಜನಪದ ಗೀತೆಗಾಯನ ಸ್ವರ್ಧೆ, 25 ಮಹಿಳೆಯರಿಗೆ ಆಡುಗೆ ಮಾಡುವ ಸ್ವರ್ಧೆ, ಜತೆಗೆ ಕೋಲಾಟ ಮತ್ತು ಹಗ್ಗ – ಜಗ್ಗಾಟ ನಡೆಯಿತು. ಪ್ರತಿಸ್ವರ್ಧೆಯಲ್ಲಿ ಮೂವರಿಗೆ ಬಹುಮಾನ ನೀಡಲಾಗುವುದು ಎಂದು ಆಯೋಜಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.