
ಆನೇಕಲ್: ಸಂಕ್ರಾಂತಿ ಜಾತ್ರೆ ಪ್ರಯುಕ್ತ ತಮಿಳುನಾಡಿನ ದೇವರಬೆಟ್ಟ ಬಳಿ ಇರುವ ಶಂಕರನಹಳ್ಳದಲ್ಲಿ ಅಪಾರ ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆದರು. ಕೋಲು ಹಿಡಿದ ಭಕ್ತರು, ಬಿರು ಬಿಸಿಲಿನಲ್ಲಿ ಶಂಕರೇಶ್ವರ ದರ್ಶನಕ್ಕೆ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ಸಂಕ್ರಾಂತಿಯಂದು ಆನೇಕಲ್, ಥಳೀ, ಹೊಸಪೇಟೆ, ವಣಕನಹಳ್ಳಿ, ಗುಮ್ಮಳಾಪುರ ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ಮಂದಿ ಭಕ್ತರು ಶಂಕರನಹಳ್ಳಕ್ಕೆ ನಡೆದು ಬಂದಿದ್ದರು. ಸಂಕ್ರಾಂತಿ ಜಾತ್ರೆ ಪ್ರಯುಕ್ತ ಶಂಕರೇಶ್ವರನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಹರಕೆ ಈಡೇರಿದರೆ ಇಲ್ಲಿಯೇ ಹೋಳಿಗೆ ಮಾಡಿ ಭಕ್ತರಿಗೆ ಹಂಚುವುದು ಇಲ್ಲಿನ ರೂಢಿ. ಹರಕೆ ಮಾಡಿಕೊಂಡ ಹಲವಾರು ಭಕ್ತರು ಕಾಡಿನ ಪ್ರದೇಶದಲ್ಲಿಯೇ ಹೋಳಿಗೆ ಮಾಡಿ ಭಕ್ತರಿಗೆ ಹಂಚುತ್ತಿದ್ದ ದೃಶ್ಯ ಕಂಡು ಬಂದಿತು. ಬಿಸಿಲಿನ ಬೇಗೆ ತಣಿಸಲು ನೀರು ಮಜ್ಜಿಗೆ, ಪಾನಕ ನೀಡಲಾಗುತ್ತಿತ್ತು. ಮುದ್ದೆ ಕಾಳು ಸಾರು ವಿವಿಧ ಬಗೆಯ ಪ್ರಸಾದ ವಿತರಿಸಲಾಯಿತು.
ಗಮನ ಸೆಳೆದ ಕೋಲಾಟ : ಜಾತ್ರೆ ಪ್ರಯುಕ್ತ ಆನೇಕಲ್ ತಾಲ್ಲೂಕಿನ ವಿವಿಧ ತಂಡಗಳು ಕೋಲಾಟ ಪ್ರದರ್ಶನ ನೀಡಿದರು. ಬಿಸಿಲಿನ ಬೇಗೆ ನಡುವೆ ಸ್ವಾಮಿ ದರ್ಶನಕ್ಕಾಗಿ ಬಂದಿದ್ದ ಭಕ್ತರಿಗೆ ಕೋಲಾಟ ಸಂತಸ ನೀಡಿತ್ತು. ಭಕ್ತರು ಅಲ್ಲಲ್ಲಿ ವಿವಿಧ ಪ್ರಸಾದ ಹಂಚುತ್ತಿದ್ದ ದೃಶ್ಯ ಕಂಡು ಬಂದಿತು.
ಉತ್ಸವಕ್ಕೆ ಸಾಕ್ಷಿಯಾದ ಸಾವಿರಾರು ಮಂದಿ: ದಟ್ಟ ಕಾನನದಲ್ಲಿರುವ ಶಂಕರನಹಳ್ಳಕ್ಕೆ ವರ್ಷಕೊಮ್ಮೆ ಸಂಕ್ರಾಂತಿಯಂದು ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಾರೆ. ಆನೇಕಲ್–ಥಳೀ ರಸ್ತೆ ಗೋಪಸಂದ್ರದಿಂದ ದೇವರಬೆಟ್ಟದವರೆಗೂ ವಾಹನಗಳಲ್ಲಿ ತೆರಳಲು ರಸ್ತೆಯಿದೆ. ಭಕ್ತರು ದೇವರಬೆಟ್ಟದಲ್ಲಿನ ರುದ್ರಮುನೇಶ್ವರನಿಗೆ ಪೂಜೆ ಸಲ್ಲಿಸಿ ಕಾಡಿನಲ್ಲಿ ಎಂಟು ಕಿ.ಮೀ ದೂರ ನಡೆದು ಸಾಗಿದರೆ ಶಂಕರನಹಳ್ಳ ತಲುಪಬಹುದು.
ಬೆಟ್ಟಗುಡ್ಡಗಳ ಮಧ್ಯೆ ಕಾಡುಹಾದಿಯಲ್ಲಿ ನಡೆದು ಸಾಗಿದರೆ ಪ್ರಕೃತಿ ಮಡಿಲಿನಲ್ಲಿ ಸುಂದರ ತಾಣದಲ್ಲಿ ದೇವರ ದರ್ಶನ ಪಡೆಯಬಹುದು. ಈ ವರ್ಷ ಶಂಕರನಹಳ್ಳಿದಲ್ಲಿ ಜನಜಾತ್ರೆಯೇ ನೆರೆದಿತ್ತು.ಗೀಜನಗುಪ್ಪೆ ಮಾರ್ಗದಲ್ಲಿ ವಾಹನಗಳ ಮೂಲಕ ಆಗಮಿಸಿದ್ದರು. ಶಾಮೀಯಾನ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರು, ಮಕ್ಕಳು ಭಕ್ತಿಯ ಚಾರಣದಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.