ಆನೇಕಲ್: ಪ್ರೇಸ್ಟೀಜ್ ಸಂಸ್ಥೆಯು ಸಿಎಸ್‌ಆರ್ ಅನುದಾನ ₹4.5 ಕೋಟಿ ವೆಚ್ಚದಲ್ಲಿ ತಾಲ್ಲೂಕಿನ ಸರ್ಜಾಪುರ ಪೊಲೀಸ್ ಠಾಣೆ ನಿರ್ಮಿಸಲು ಉದ್ದೇಶಿಸಿದ್ದು, ಶಾಸಕ ಬಿ.ಶಿವಣ್ಣ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿ, ಸರ್ಜಾಪುರದಲ್ಲಿ ಪೊಲೀಸ್ ನಿಲ್ದಾಣ ಚಿಕ್ಕದಾಗಿದ್ದು, ಆರಕ್ಷಕರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲು ಸುಸಜ್ಜಿತ ಪೊಲೀಸ್ ಠಾಣೆ ನಿರ್ಮಿಸಲು ಕಾಮಗಾರಿಗೆ ಚಾಲನೆ ನೀಡಲಲಾಗಿದೆ ಎಂದರು.
ಆನೇಕಲ್ ತಾಲ್ಲೂಕಿನಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, ತಾಲ್ಲೂಕಿಗೆ ವಾಹನ ದಟ್ಟಣೆ ನಿಯಂತ್ರಕ್ಕೆ ಸಂಚಾರ ಪೊಲೀಸ್ ಠಾಣೆ ಅವಶ್ಯಕತೆಯಿದೆ. ಹಾಗಾಗಿ ಸಂಚಾರಿ ಪೊಲೀಸ್ ಠಾಣೆ ಮತ್ತು ಮಹಿಳಾ ಪೊಲೀಸ್ ಠಾಣೆ ನಿರ್ಮಿಸಲು ಗೃಹಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಮಾತನಾಡಿ, ಸರ್ಜಾಪುರವು ನಗರಕ್ಕೆ ಹೊಂದಿಕೊಂಡಿದ್ದು ಪೊಲೀಸ್ ಠಾಣೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು. ಈ ಹಿಂದೆ ಪ್ರೇಸ್ಟೀಜ್ ಸಂಸ್ಥೆಯ ವತಿಯಿಂದ ವೈಟ್‌ಫೀಲ್ಡ್ ಪೊಲೀಸ್ ಠಾಣೆಯನ್ನು ನಿರ್ಮಿಸಲಾಗಿತ್ತು. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿದೆ ಎಂದರು.
ಡಿಜಿಪಿ ಡಾ.ಅರುಣ್ ಚಕ್ರವರ್ತಿ, ಕೇಂದ್ರ ವಲಯ ಪೊಲೀಸ್ ಮಹಾ ನಿರೀಕ್ಷಕ ಲಾಬೂರಾಮ್, ಬೆಂಗಳೂರು ಗ್ರಾಮಾಂತರ ಪೊಲೀಸ್ ಎಸ್ಪಿ ಸಿ.ಕೆ.ಬಾಬ, ಆನೇಕಲ್ ಡಿವೈಎಸ್ಪಿ ಮೋಹನ್ ಕುಮಾರ್, ಪೊಲೀಸ್ ಇನ್‌ಸ್ಪೆಕ್ಟರ್ ನವೀನ್ ಕುಮಾರ್, ಪ್ರೇಸ್ಟೀಜ್ ಸಂಸ್ಥೆಯ ವಿಜಯ್ ಶ್ರೀವತ್ಸವ, ನಟರಾಜ್, ಲಕ್ಷ್ಮಣ್ ಸಿಂಗ್, ಸರ್ಜಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎನ್.ವೀಣಾ, ಉಪಾಧ್ಯಕ್ಷ ಮಂಜುನಾಥ್ ಸರ್ಜಾ, ಮುಖಂಡರಾದ ಶ್ರೀರಾಮುಲು, ಶ್ರೀನಿವಾಸ್, ಶ್ರೀನಿವಾಸ್ ಬುಡಗಪ್ಪ, ಕಲಾವತಿ ಮೂರ್ತಿಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.