ADVERTISEMENT

‘ಕೆರೆ ಉಳಿಸಿಕೊಳ್ಳುವುದು ಜನರ ಕರ್ತವ್ಯ’

ಬಾಶೆಟ್ಟಿಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ, ಕುಟುಂಬ ಮಿಲನ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 12:54 IST
Last Updated 9 ಡಿಸೆಂಬರ್ 2018, 12:54 IST
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕರೀಗೌಡ ಹಾಗೂ ರಿಟ್ಟಲ್ ಇಂಡಿಯಾ ಕಂಪನಿಯ ಅಧಿಕಾರಿಗಳು ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಇದ್ದರು
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕರೀಗೌಡ ಹಾಗೂ ರಿಟ್ಟಲ್ ಇಂಡಿಯಾ ಕಂಪನಿಯ ಅಧಿಕಾರಿಗಳು ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಇದ್ದರು   

ದೊಡ್ಡಬಳ್ಳಾಪುರ: ‘ನಗರದಲ್ಲಿನ ಮೂತ್ತೂರು ಕೆರೆ ಅಭಿವೃದ್ಧಿಗೆ ರಿಟ್ಟಲ್ ಇಂಡಿಯ ಕಂಪನಿಯ ಉದ್ಯೋಗಿಗಳು ದೇಣಿಗೆ ನೀಡಲು ಮುಂದೆ ಬಂದಿರುವುದು ಸಂತಸ ತಂದಿದೆ. ನಮ್ಮೂರಿನ ಕೆರೆಗಳು ಉಳಿಯಲು, ಅಭಿವೃದ್ಧಿ ಹೊಂದಲು ಸ್ಥಳೀಯರ ಸಹಕಾರ ಮುಖ್ಯ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ ಹೇಳಿದರು.

ಅವರು ನಗರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ರಿಟ್ಟಲ್ ಇಂಡಿಯ ಕಂಪನಿಯಲ್ಲಿ ಭಾನುವಾರ ನಡೆದ ‘ಕನ್ನಡ ರಾಜ್ಯೋತ್ಸವ ಹಾಗೂ ಕುಟುಂಬ ಮಿಲನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮೂತ್ತೂರು ಕೆರೆಯನ್ನು ಸಾರ್ವಜನಿಕರ ಸಹಕಾರದಿಂದಲೇ ಹೂಳು ಎತ್ತಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಶೇ 60ರಷ್ಟು ಕಾಮಗಾರಿ ಮುಕ್ತಾಯವಾಗಿದೆ. ಕೆರೆಯ ಸುತ್ತಲು ವಾಯು ವಿಹಾರಕ್ಕೆ ಕಿರು ರಸ್ತೆ ನಿರ್ಮಿಸುವುದು, ಕೆರೆಯಲ್ಲಿ ನಡುಗಡ್ಡೆ ಅಭಿವೃದ್ಧಿ ಸೇರಿದಂತೆ ಒಂದಿಷ್ಟು ಮುಖ್ಯ ಕೆಲಸಗಳು ಬಾಕಿ ಉಳಿದಿವೆ. ಈ ಕೆಲಸಗಳಿಗೆ ಆರ್ಥಿಕ ನೆರವು ನೀಡಲು ರಿಟ್ಟಲ್ ಇಂಡಿಯಾ ಕಂಪನಿಯ 1,200 ಜನ ಉದ್ಯೋಗಿಗಳು ಸಂಬಳದಲ್ಲಿ ತಲಾ ₹1,000 ನೀಡಲು ಒಪ್ಪಿಗೆ ನೀಡಿದ್ದಾರೆ’ ಎಂದರು.

ADVERTISEMENT

‘ಈಗಾಗಲೇ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ ಕಾರಹಳ್ಳಿ, ಕನ್ನಮಂಗಲ, ಚಿಕ್ಕ ಸಿಹಿ ನೀರಿನ ಕೆರೆ ನೆಲಮಂಗಲ ತಾಲ್ಲೂಕಿನಲ್ಲಿ ಬೇಗೂರು, ಕೆಂಪತಿಮ್ಮನಹಳ್ಳಿ ಕೆರೆಗಳ ಅಭಿವೃದ್ಧಿಗೂ ಸ್ಥಳೀಯರೇ ಮುಂದೆ ಬಂದಿದ್ದಾರೆ. ನಮ್ಮ ಹಿರಿಯರು ಕೆರೆಗಳನ್ನು ಕಟ್ಟಿಸಿದರು’ ಎಂದು ವಿವರಿಸಿದರು.

‘ಇಂದು ನಮ್ಮ ಕಣ್ಣ ಮುಂದೆಯೇ ಕೆರೆಗಳು ಹೂಳು ತುಂಬಿಕೊಂಡು, ಇತರೆ ಅಭಿವೃದ್ದಿಯ ಹೆಸರಿನಲ್ಲಿ ಕಣ್ಮರೆಯಾಗುತ್ತಿವೆ. ಇರುವ ಒಂದಿಷ್ಟು ಕೆರೆಗಳನ್ನು ನಾವು ಉಳಿಸಿಕೊಂಡು ಅವುಗಳಲ್ಲಿ ನೀರು ನಿಲ್ಲುವಂತೆ ಮಾಡಿಕೊಳ್ಳದೇ ಹೋದರೆ ಅಂತರ್ಜಲ ಕುಸಿದು ಕುಡಿಯುವ ನೀರು ದೊರೆಯುವುದಿಲ್ಲ. ಸರ್ಕಾರವೇ ಎಲ್ಲವನ್ನು ಮಾಡಿಸಲಿ ಎಂದು ಕಾದುಕುಳಿತುಕೊಳ್ಳದೆ ಕೆರೆ, ಕುಂಟೆಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕು’ ಎಂದು ಹೇಳಿದರು.

ಕನ್ನಡ ರಾಜ್ಯೋತ್ಸವದಲ್ಲಿ ಕಂಪನಿಯ ಉದ್ಯೋಗಿಗಳು ಕೊಡಗು ನೆರೆ ಸಂತ್ರಸ್ತರ ನಿಧಿಗೆ ₹1,72,500ಗಳ ಚೆಕ್ ಅನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದರು.

ವಿಶೇಷ ಆಹ್ವಾನಿತರಾಗಿ ನಟಿ, ಕಾರ್ಯಕ್ರಮಗಳ ನಿರೂಪಕಿ ಅನುಶ್ರೀ, ರಿಟ್ಟಲ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಜಯ್ ಭಾರ್ಗವ್, ಹಣಕಾಸು ವಿಭಾಗದ ಉಪಾಧ್ಯಕ್ಷ ದೇಬಭ್ರತ ಸಿನ್ಹ, ಉತ್ಪಾದನಾ ವಿಭಾಗದ ಉಪಾಧ್ಯಕ್ಷ ಚಂದ್ರಶೇಖರ ಕಡಬೂರು, ಮಾರಾಟ ವಿಭಾಗದ ಉಪಾಧ್ಯಕ್ಷ ಮ್ಯಾಥ್ಯೂ ಜೇಕಬ್, ಕಂಪನಿಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಬಸವರಾಜ್, ಪ್ರಧಾನ ಕಾರ್ಯದರ್ಶಿ ಬಿ.ವಿ.ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.