
ದೇವನಹಳ್ಳಿ: ಪಟ್ಟಣದಲ್ಲಿ ಶನಿವಾರ ದಲಿತ ಸಮುದಾಯದ ಮುಖಂಡರಿಂದ ಸಾವಿತ್ರಿಬಾಯಿ ಫುಲೆ ಜಯಂತಿ ನಡೆಯಿತು.
19ನೇ ಶತಮಾನದಲ್ಲಿ ಮಹಿಳೆಯರಿಗೆ ಶಿಕ್ಷಣವೇ ಅಪರಾಧವೆಂದು ಕಂಡ ಕಾಲಘಟ್ಟದಲ್ಲಿ ‘ಶಿಕ್ಷಣವೇ ಸಾಮಾಜಿಕ ಶಕ್ತಿ’ ಎಂಬ ಧೈರ್ಯಶಾಲಿ ಚಿಂತನೆಯೊಂದಿಗೆ ಸಾವಿತ್ರಿಬಾಯಿ ಫುಲೆ ಅಕ್ಷರ ಹಂಚುವ ಕೆಲಸ ಮಾಡಿದರು. ಮಹಿಳೆಯರು, ಶೂದ್ರ–ಅತಿಶೂದ್ರ ಸಮುದಾಯಗಳು ಅಕ್ಷರಜ್ಞಾನದಿಂದ ವಂಚಿತರಾಗಿದ್ದ ಸಂದರ್ಭದಲ್ಲಿ, ಸಮಾಜದ ವಿರೋಧ, ಅವಮಾನ, ಹಿಂಸೆಗಳನ್ನು ಎದುರಿಸುತ್ತಾ ಸಾವಿತ್ರಿಬಾಯಿ ಶಿಕ್ಷಣದ ದೀಪ ಹಚ್ಚಿದರು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಹೇಳಿದರು.
ಶಾಲೆಗೆ ಹೋಗುವ ದಾರಿಯಲ್ಲಿ ಕೆಸರು, ಸೆಗಣಿ ಎರಚಿದರೂ ಜಗ್ಗದೆ, ಶಾಲೆಗೆ ಹೋಗುವಾಗ ಹಳೆಯ ಸೀರೆ ಉಟ್ಟು, ಶಾಲೆ ತಲುಪಿದ ನಂತರ ಹೊಸ ಸೀರೆ ಧರಿಸಿ ಪಾಠ ಹೇಳುತ್ತಿದ್ದ ಅವರ ದೃಢತೆ ಮತ್ತು ತ್ಯಾಗ ಇತಿಹಾಸದಲ್ಲಿ ಅಪೂರ್ವ ಅಧ್ಯಾಯವಾಗಿದೆ ಎಂದು ಹೇಳಿದರು.
ಮಹಾತ್ಮ ಜ್ಯೋತಿಬಾ ಫುಲೆ ಅವರ ಜೊತೆಗೂಡಿ ಸಾವಿತ್ರಿಬಾಯಿ ಪುಣೆಯಲ್ಲಿ ಎಲ್ಲ ಸಮುದಾಯಗಳ ಬಾಲಕಿಯರಿಗಾಗಿ ಮೊದಲ ಶಾಲೆ ಸ್ಥಾಪಿಸಿ, ಭಾರತದ ಮೊದಲ ಮಹಿಳಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. ಕೇವಲ ಶಿಕ್ಷಣವಷ್ಟೇ ಅಲ್ಲದೆ, ಬಾಲ್ಯವಿವಾಹ ವಿರೋಧ, ವಿಧವಾ ವಿವಾಹಕ್ಕೆ ಬೆಂಬಲ, ಜಾತಿ ಅಸಮಾನತೆ ವಿರೋಧ, ಸತಿ ಪದ್ಧತಿ ವಿರೋಧದಂತಹ ಸಾಮಾಜಿಕ ಅನಿಷ್ಠಗಳ ವಿರುದ್ಧವೂ ಅವರು ಧೈರ್ಯವಾಗಿ ಧ್ವನಿ ಎತ್ತಿದರು ಎಂದು ಸ್ಮರಿಸಿದರು.
ಶೋಷಿತ ಮಹಿಳೆಯರು ಮತ್ತು ಅನಾಥ ಶಿಶುಗಳಿಗೆ ಆಶ್ರಯ ನೀಡುವ ಉದ್ದೇಶದಿಂದ ‘ಬಾಲಹತ್ಯಾ ಪ್ರತಿಬಂಧಕ ಗೃಹ’ ಸ್ಥಾಪಿಸಿದ ಮಾನವೀಯ ಕಾಳಜಿಯೂ ಅವರ ಹೋರಾಟದ ಭಾಗವಾಗಿತ್ತು ಎಂದು ತಿಳಿಸಿದರು.
ಫುಲೆ ದಂಪತಿಗಳ ಚಿಂತನೆಗಳು ಸಮಾಜವನ್ನು ಕತ್ತಲಿನಿಂದ ಬೆಳಕಿನತ್ತ ಕರೆದೊಯ್ದವು. ಶೋಷಿತ ಸಮುದಾಯಗಳಿಗೆ ಜ್ಞಾನದ ದೀವಿಗೆ ಹಿಡಿದು ಸ್ವಾತಂತ್ರ್ಯ, ಮಾನವ ಗೌರವ ಮತ್ತು ಸಮಾನತೆಯ ಸಮಾಜ ನಿರ್ಮಾಣದತ್ತ ಮಾರ್ಗದರ್ಶನ ನೀಡಿದ ಅವರ ಚಿಂತನೆಗಳು ಮುಂದಿನ ದಿನಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಹೋರಾಟಕ್ಕೂ ಪ್ರೇರಣೆಯಾದವು ಎಂದರು.
ಕೋರೆಗಾಂವ್ ವಿಚಾರಧಾರೆಯನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಿ ಮುಂದಿನ ಪೀಳಿಗೆಗೆ ಸಾಮಾಜಿಕ ನ್ಯಾಯದ ಇತಿಹಾಸವನ್ನು ತಿಳಿಸಬೇಕು. ಇದು ಕೋರೆಗಾಂವ್ ವಿಜಯೋತ್ಸವದಲ್ಲಿ ಬಲಿದಾನ ಮಾಡಿದ ಯೋಧರಿಗೆ ಸಲ್ಲಿಸುವ ನಿಜವಾದ ಗೌರವವಾಗುತ್ತದೆ ಎಂದು ಕೆಡಿಪಿ ಸದಸ್ಯ ಕೆ.ವಿ. ಸ್ವಾಮಿ ತಿಳಿಸಿದರು.
ದಲಿತ ಸಮುದಾಯದ ಮುಖಂಡರಾದ ರಾಮಣ್ಣ, ಮುನಿಕೃಷ್ಣ, ಶ್ರೀನಿವಾಸ್, ಚನ್ನಕೃಷ್ಣಪ್ಪ, ವೆಂಕಟೇಶ್, ಶ್ರೀರಾಮ್, ಮುರಳಿ, ರಮೇಶ್, ಶ್ರೀನಿವಾಸ್ ಗಾಂಧಿ, ರಾಜೇಶ್ ವೆಂಕಟರಮಣಪ್ಪ ಉಪಸ್ಥಿತರಿದ್ದರು.
ಆನೇಕಲ್: ತಾಲ್ಲೂಕಿನ ಮರಸೂರು ಗ್ರಾಮದಲ್ಲಿ ಪ್ರಜಾ ವಿಮೋಚನಾ ವೇದಿಕೆಯ ವತಿಯಿಂದ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಶನಿವಾರ ಆಚರಿಸಲಾಯಿತು. ಫುಲೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಶತಮಾನಗಳ ಹಿಂದೆಯೇ ಮಹಿಳೆಯರಿಗೆ ಶಿಕ್ಷಣ ನಿಷೇದ್ಧವಾಗಿತ್ತು. ಇಂತಹ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಶ್ರಮಿಸಿದ್ದಾರೆ. ಅವಮಾನ, ಬಹಿಷ್ಕಾರದ ನಡುವೆಯೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಅವರನ್ನು ಸ್ಮರಿಸಬೇಕಾದುದ್ದು ಸಮಾಜದ ಜವಬ್ದಾರಿಯಾಗಿದೆ. ಸಾವಿತ್ರಿಬಾಯಿ ಫುಲೆ ಅವರ ಸೇವೆ ಇಂದಿನ ಮಹಿಳಾ ಹೋರಾಟಗಾರರಿಗೆ ದಾರಿದೀಪವಾಗಿದೆ ಎಂದು ಪ್ರಜಾ ವಿಮೋಚನಾ ಚಳವಳಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ ಹೇಳಿದರು.
ಸಮಾಜದ ಬದಲಾವಣೆಗೆ ಶಿಕ್ಷಣ ಅಸ್ತ್ರ. ಶಿಕ್ಷಣದಿಂದ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ. ಲಿಂಗ ತಾರತಮ್ಯ ಹೋಗಲಾಡಿಸಲು ಸಂಘ ಸಂಸ್ಥೆಗಳು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಉನ್ನತ ಸಾಧನೆ ಮಾಡಿದ್ದಾರೆ ಎಂದರು.
ಸಾವಿತ್ರ ಬಾಯಿ ಫುಲೆ ಅವರ ತ್ಯಾಗದ ಫಲದಿಂದ ಇಂದಿನ ಮಹಿಳೆಯರು ಉನ್ನತ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ಶಿಕ್ಷಣಕ್ಕೆ ಸಮಾನ ಹಕ್ಕು ಮತ್ತು ಸಮಾನ ಅವಕಾಶ ದೊರೆಯುವಂತೆ ಮಾಡಲು ಸಾವಿತ್ರಿಬಾಯಿಫುಲೆ ಶ್ರಮಿಸಿದ್ದಾರೆ. ಬಾಲ್ಯ ವಿವಾಹ, ಕೇಶ ಮಂಡನೆ, ಸತಿಸಹಾಗಮ ಪದ್ದತಿಯ ವಿರುದ್ಧ ಫುಲೆ ಅವರು ಹೋರಾಟ ನಡೆಸಿದ್ದರು. ಸಂತ್ರಸ್ತರಿಗಾಗಿ ಆಶ್ರಮಗಳನ್ನು ತೆರೆದಿದ್ದರು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಹಳೇಹಳ್ಳಿ ರವಿ ಸ್ಮರಿಸಿದರು.
ಸಾವಿತ್ರಿಬಾಯಿ ಫುಲೆ ಅವರು 14 ಶಾಲೆಗಳನ್ನು ತೆರೆದು ಶಿಕ್ಷಣ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ದೊರೆತು ದಶಕಗಳು ಕಳೆದರೂ ಇಂದಿಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಕಡಿಮೆ ಆಗದಿರುವುದು ದುರಂತ. ಮಹಿಳೆಯರ ಸಬಲೀಕರಣ ಶಿಕ್ಷಣದಿಂದ ಮಾತ್ರ ಸಾಧ್ಯ. ಹಾಗಾಗಿ ಪ್ರತಿಯೊಬ್ಬರು ಉನ್ನತ ಶಿಕ್ಷಣದತ್ತ ಗಮನ ಹರಿಸಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಂಜೂರು ವಿಜಯಕುಮಾರ್, ತಾಲ್ಲೂಕು ಉಪಾಧ್ಯಕ್ಷ ಬಳ್ಳೂರು ರಮೇಶ್, ಆನೇಕಲ್ ಟೌನ್ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಲವ, ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷ ರಜಿಯಾ ಬೇಗಂ, ಬೆಂಗಳೂರು ಪೂರ್ವ ಅಧ್ಯಕ್ಷೆ ಗುಲಾಬ್ ಜಾನ್, ಕಾರ್ಯದರ್ಶಿ ರಾಮಾಂಜಿ, ಮುಖಂಡರಾದ ಮಂಜುನಾತ್, ರಾಜಪ್ಪ, ಪದ್ಮರಾಜು, ಹರಿನಗರ ಬಸವರಾಜು, ಚಿರಂಜೀವಿ, ಅಶೋಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.