ADVERTISEMENT

ಹೆಣ್ಣು ಮಕ್ಕಳು ಸ್ನಾತಕೋತ್ತರ ಪದವಿಯವರೆಗಾದರೂ ಶಿಕ್ಷಣ ಪಡೆಯಬೇಕು

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 14:27 IST
Last Updated 23 ಜನವರಿ 2020, 14:27 IST
ವಿಜಯಪುರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಶಾಲಾವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರನ್ನು ಅಭಿನಂದಿಸಿದರು
ವಿಜಯಪುರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಶಾಲಾವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರನ್ನು ಅಭಿನಂದಿಸಿದರು   

ವಿಜಯಪುರ: ‘ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳು ಸ್ನಾತಕೋತ್ತರ ಪದವಿಯವರೆಗೆ ಶಿಕ್ಷಣ ಪಡೆಯಬೇಕು’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ದೂರದೃಷ್ಟಿ ಇಟ್ಟುಕೊಂಡು ಕಲಿಯಬೇಕು. ಮುಂದಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರಬೇಕು. ಜೀವನದಲ್ಲಿ ದೊಡ್ಡ ಕನಸುಗಳನ್ನು ಇಟ್ಟುಕೊಳ್ಳಬೇಕು. ಯಾವ ವಿದ್ಯಾರ್ಥಿಯ ಜೀವನದಲ್ಲಿ ಗುರಿಯಿರುವುದಿಲ್ಲವೋ ಅಂತಹವರು ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಸಾಧನೆಗೆ ಅವಶ್ಯಕವಾಗಿರುವ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ನೀಡುತ್ತಿದೆ. ಪೋಷಕರು ಸದಾ ನಿಮ್ಮ ಏಳಿಗೆಗಾಗಿ ಸಿದ್ಧರಿರುತ್ತಾರೆ. ಅವರೆಲ್ಲರ ಆಸೆಯನ್ನು ಪೂರೈಸಬೇಕಾಗಿರುವುದು ನಿಮ್ಮ ಕರ್ತವ್ಯವಾಗಬೇಕು’ ಎಂದರು.

ADVERTISEMENT

‘ಉನ್ನತ ಶಿಕ್ಷಣ ಪಡೆಯಲಿಕ್ಕೆ ಬ್ಯಾಂಕ್‌ಗಳಲ್ಲಿ ಹಣ ಸಹಾಯದಿಂದ ಹಿಡಿದು ಸಾಕಷ್ಟು ಸೌಲಭ್ಯಗಳಿವೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಿ’ ಎಂದರು.

ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್‌ಕುಮಾರ್ ಮಾತನಾಡಿ, ‘ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳೆಂದರೆ ಕೀಳುಮಟ್ಟದಲ್ಲಿ ನೋಡುವಂತಹ ಪ್ರವೃತ್ತಿ ಬೆಳೆದು ಬಂದಿದೆ. ಇದಕ್ಕೆ ಅಪವಾದವಾಗಿ ನೀವು ಗುಣಮಟ್ಟದ ಶಿಕ್ಷಣ ಪಡೆಯಬೇಕು. ನೀವು ಯಾರಿಗೂ ಕಡಿಮೆಯಿಲ್ಲ ಎನ್ನುವುದನ್ನು ತೋರಿಸಿಕೊಡಬೇಕು’ ಎಂದರು.

‘ವಿದ್ಯಾರ್ಥಿ ಜೀವನ ಮಾನವನ ಜೀವನದಲ್ಲಿ ಸಿಗುವಂತಹ ಉತ್ತಮ ಕಾಲ. ಈ ಸಮಯದಲ್ಲಿ ಸಿಕ್ಕ ಅವಕಾಶಗಳನ್ನೆಲ್ಲಾ ನಿಮ್ಮ ಭವಿಷ್ಯದ ಏಳಿಗೆಗಾಗಿ ಮೆಟ್ಟಿಲನ್ನಾಗಿ ಮಾಡಿಕೊಂಡರೆ ಜೀವನದಲ್ಲಿ ಉತ್ತಮವಾದ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ.
ವಿದ್ಯಾರ್ಥಿಯ ಜೀವನದಲ್ಲಿ ಸಾಧನೆ ಮಾಡದಿದ್ದರೆ, ಮುಂದೊಂದು ದಿನ ಪಶ್ಚಾತ್ತಾಪ ಪಡಬೇಕಾಗುತ್ತದೆ. ಸಮಾಜದಲ್ಲಿ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಸಾಧಿಸಬೇಕಾದರೆ ವಿದ್ಯಾರ್ಥಿಯ ಜೀವನದಲ್ಲಿ ಏಕಾಗ್ರತೆ, ಶಿಸ್ತು, ಸಂಯಮ ಬಹಳ ಮುಖ್ಯವಾಗುತ್ತದೆ’ ಎಂದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಭಾಸ್ಕರ್ ಮಾತನಾಡಿ, ‘ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರು ಹೆಚ್ಚು ಅಭ್ಯಾಸ ಮಾಡಿ, ಅನೇಕ ಪರೀಕ್ಷೆಗಳನ್ನು ಎದುರಿಸಿ ಬಂದಿದ್ದಾರೆ. ಇಲಾಖೆಯೂ ಕೂಡಾ ವಿದ್ಯಾರ್ಥಿ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರಿಗೆ ಸಾಕಷ್ಟು ತರಬೇತಿಗಳನ್ನು ನೀಡಿ, ನಿಮ್ಮ ಏಳಿಗೆಗಾಗಿ ಶ್ರಮಿಸುತ್ತಿದೆ. ಇಂತಹ ಶಿಕ್ಷಕರಲ್ಲಿನ ಅಪಾರ ಜ್ಞಾನವನ್ನು ವಿದ್ಯಾರ್ಥಿಗಳು ಬಳಕೆ ಮಾಡಿಕೊಳ್ಳಬೇಕು’ ಎಂದರು.

‘ಶಿಕ್ಷಕರು, ವಿದ್ಯಾರ್ಥಿಗಳ ಏಳಿಗೆಯಲ್ಲಿ ಸಂತಸಪಡುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿ ನಿಮ್ಮ ತಂದೆ, ತಾಯಿ ನಿಮಗೋಸ್ಕರ ಎಷ್ಟು ಕಷ್ಟಪಡುತ್ತಿದ್ದಾರೆ ಎನ್ನುವ ಕುರಿತು ಚಿಂತಿಸಬೇಕು. ಆಗ ನಿಮ್ಮಲ್ಲಿ ಛಲ ಹುಟ್ಟಲಿಕ್ಕೆ ಸಾಧ್ಯ’ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ‘ಸರ್ಕಾರ ಮಕ್ಕಳ ಏಳಿಗೆಗಾಗಿ ಸೈಕಲ್, ಬಿಸಿಯೂಟ, ಉಚಿತವಾಗಿ ಸಮವಸ್ತ್ರ, ಪಠ್ಯಪುಸ್ತಕಗಳು, ಪೂರೈಕೆ ಮಾಡುವುದರ ಜೊತೆಗೆ ಮಕ್ಕಳಲ್ಲಿನ ಪ್ರತಿಭೆ ಹಾಗೂ ಕೌಶಲಗಳನ್ನು ಹೊರಗೆ ತರಲು ಪ್ರತಿಭಾ ಕಾರಂಜಿ, ಅವರಲ್ಲಿ ವ್ಯವಹಾರದ ಜ್ಞಾನ ಹೆಚ್ಚಿಸಲು ವಿಜ್ಞಾನಮೇಳಗಳನ್ನು ಆಯೋಜನೆ ಮಾಡುತ್ತಿದೆ. ಪೋಷಕರು ಅವರ ಏಳಿಗೆಗಾಗಿ ಹೆಚ್ಚು ಸಹಕಾರ ನೀಡಬೇಕು’ ಎಂದರು.

ಮುಖ್ಯಶಿಕ್ಷಕ ಕೃಷ್ಣಮೂರ್ತಿ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮನೋಹರ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಸೂರ್ಯಪ್ರಕಾಶ್, ಭಾರತಿಪ್ರಭುದೇವ್, ಎಚ್.ಎಂ.ಕೃಷ್ಣಪ್ಪ, ಮುಖಂಡರಾದ ಕೋರಮಂಗಲ ವೀರಪ್ಪ, ಚಿಕ್ಕನಹಳ್ಳಿ ಸುಬ್ಬಣ್ಣ, ಪ್ರಕಾಶ್, ವಿಶ್ವನಾಥ್, ಮುನಿರಾಜು, ಡೇರಿ ಅಧ್ಯಕ್ಷ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.