ADVERTISEMENT

ಹೊಸ ಅವಿಷ್ಕಾರ ರೈತರಿಗೆ ತಲುಪಿಸಲು ಆದ್ಯತೆ  

ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವೈಜ್ಞಾನಿಕ ಸಲಹಾ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 13:34 IST
Last Updated 13 ಫೆಬ್ರುವರಿ 2020, 13:34 IST
ಕೆವಿಕೆ ವತಿಯಿಂದ ಹೊರತರಲಾಗಿರುವ ಕೈಪಿಡಿಯನ್ನು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ರಾಜೇಂದ್ರಪ್ರಸಾದ್ ಬಿಡುಗಡೆ ಮಾಡಿದರು
ಕೆವಿಕೆ ವತಿಯಿಂದ ಹೊರತರಲಾಗಿರುವ ಕೈಪಿಡಿಯನ್ನು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ರಾಜೇಂದ್ರಪ್ರಸಾದ್ ಬಿಡುಗಡೆ ಮಾಡಿದರು   

ದೊಡ್ಡಬಳ್ಳಾಪುರ: ವೈಜ್ಞಾನಿಕ ಸಮಗ್ರ ಕೃಷಿ ಪದ್ಧತಿ ಹಾಗೂ ಕೃಷಿಯಲ್ಲಿ ವಿವಿಧ ಮಾಹಿತಿಗಳನ್ನು ರೈತರಿಗೆ ಕಾಲಕ್ಕೆ ಅನುಗುಣವಾಗಿ ತಿಳಿಸುವಲ್ಲಿ ಕೃಷಿ ವಿಜ್ಞಾನ ಕೇಂದ್ರಗಳ ಪಾತ್ರ ಮಹತ್ವದ್ದು ಎಂದು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ರಾಜೇಂದ್ರಪ್ರಸಾದ್ ಹೇಳಿದರು.

ತಾಲ್ಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ 11ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು.

‘ರೈತರಿಗೆ ಕೃಷಿ ವಿಜ್ಞಾನ ಕೇಂದ್ರದ ಸಲಹೆ ಸಹಕಾರ ಮಹತ್ವದ ಪಾತ್ರ ವಹಿಸಲಿವೆ. ಆಧುನಿಕ ಕೃಷಿ ಪದ್ಧತಿ ಅಳವಡಿಕೆ, ಕೃಷಿಯ ಆವಿಷ್ಕಾರಗಳ ಕುರಿತಾಗಿ ಹೆಚ್ಚಿನ ವಿಚಾರಗಳನ್ನು ರೈತರಿಗೆ ತಲುಪಿಸಲು ಕೃಷಿ ವಿಜ್ಞಾನ ಕೇಂದ್ರಗಳು ಯೋಜನೆ ರೂಪಿಸಿವೆ’ ಎಂದರು.

ADVERTISEMENT

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎ.ಪಿ.ಮಲ್ಲಿಕಾರ್ಜುನ ಗೌಡ ಅವರು ಹತ್ತನೇ ವೈಜ್ಞಾನಿಕ ಸಲಹಾ ಸಮಿತಿಯ ನಿರ್ಣಯಗಳ ಬಗ್ಗೆ ಕೈಗೊಂಡ ಕ್ರಮಗಳು ಹಾಗೂ 2019-20ನೇ ಸಾಲಿನಲ್ಲಿ ಹಮ್ಮಿಕೊಂಡಿರುವ ಕಾರ್ಯ ಚಟುವಟಿಕೆಗಳ ಯೋಜನೆ ಮಂಡಿಸಿದರು.

ಕೇಂದ್ರದ ವಿವಿಧ ವಿಜ್ಞಾನಿಗಳು 2018-19ನೇ ಸಾಲಿನಲ್ಲಿ ಹಮ್ಮಿಕೊಂಡಿದ್ದ ತಂತ್ರಜ್ಞಾನ ಮರುಪರಿಶೀಲನೆಗಳು, ಮುಂಚೂಣಿ ಪ್ರಾತ್ಯಕ್ಷಿಕೆಗಳ ಫಲಿತಾಂಶಗಳು, ತರಬೇತಿ ಕಾರ್ಯಕ್ರಮಗಳು, ರೈತರ ಕ್ಷೇತ್ರ ಪಾಠಶಾಲೆ, ದತ್ತು ಗ್ರಾಮ ಯೋಜನೆ, ಆರ್ಯ ಯೋಜನೆ, ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಘಟಕ, ಪರಂಪರಾಗತ್ ಕೃಷಿ ವಿಕಾಸ್ ಯೋಜನೆ, ವಿಸ್ತರಣಾ ಚಟುವಟಿಕೆಗಳ ಮಾಹಿತಿಯನ್ನು ಸಭೆಗೆ ವಿವರಿಸಿದರು.

ಮಣ್ಣು ಮತ್ತು ನೀರು ಪ್ರಯೋಗಾಲಯ ಹಾಗೂ ಸಸ್ಯ ಆರೋಗ್ಯ ಚಿಕಿತ್ಸಾಲಯ, ಪ್ರಾತ್ಯಕ್ಷಿಕೆ ಘಟಕಗಳು ಮತ್ತು ಕ್ಷೇತ್ರದ ಇತರೆ ಕಾರ್ಯ ಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.

ಫಾಲ್ ಸೈನಿಕ ಹುಳುವಿನ ಸಮಗ್ರ ನಿರ್ವಹಣಾ ಕ್ರಮಗಳು, ಅಲಂಕಾರಿಕ ಮೀನು ಸಾಕಣೆ, ಅಜೋಲಾ ಬಹುಪಯೋಗಿ ಜಲ ಸಸ್ಯ, ರಾಮೇಶ್ವರ ಗ್ರಾಮದ ದತ್ತು ಸ್ವೀಕಾರದ ಪರಿಣಾಮ ಹಾಗೂ ಪ್ರಗತಿಪರ ರೈತರಾದ ಮಂಜುಳ ಮತ್ತು ಜಗದೀಶ್ ಗಿರಿ ಇವರ ಯಶೋಗಾಥೆಗಳ ಸಿ.ಡಿ.ಗಳನ್ನು ಬಿಡುಗಡೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.