ದೊಡ್ಡಬಳ್ಳಾಪುರ: ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸಂತ ಸೇವಾಲಾಲ್ ಜಯಂತಿಯನ್ನು ಬುಧವಾರ ಆಚರಿಸಲಾಯಿತು.
ತಹಶೀಲ್ದಾರ್ ಮೋಹನಕುಮಾರಿ ಮಾತನಾಡಿ, ‘ಬಂಜಾರ ಸಮುದಾಯಕ್ಕೆ ಸರ್ಕಾರದಿಂದ ಎರಡು ಎಕರೆ ಜಮೀನು ಮಂಜೂರಾಗಿದ್ದು, ಸರ್ಕಾರದ ಹಂತದಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಪ್ರದೇಶದಲ್ಲಿ ಸಮುದಾಯ ಭವನ ನಿರ್ಮಾಣದ ಜತೆಗೆ ಬಂಜಾರ ಸಮುದಾಯದ ಕಲೆ, ಸಂಸ್ಕೃತಿ ಪ್ರತಿಬಿಂಬಿಸುವ ಕಲಾ ಪ್ರದರ್ಶನದ ಮಳಿಗೆಗಳು ಹಾಗೂ ತರಬೇತಿ ಕೇಂದ್ರ ಸ್ಥಾಪಿಸಬೇಕು’ ಎಂದು ಸಲಹೆ ನೀಡಿದರು.
ಬಂಜಾರ ಸಮುದಾಯದಲ್ಲಿ ಸೇವಾಲಾಲ್ ವೀರನಾಗಿ, ವಿರಾಗಿಯಾಗಿ, ಶ್ರೇಷ್ಠ ದಾರ್ಶನಿಕನಾಗಿ ಮತ್ತು ಸಾಂಸ್ಕೃತಿಕ ನಾಯಕನಾಗಿ ಹೊರಹೊಮ್ಮಿ ಅಹಿಂಸೆ ಹಾಗೂ ಸಮಾನತೆ ತತ್ವಗಳನ್ನು ಪ್ರತಿಪಾದಿಸಿದ್ದರು ಎಂದರು.
ಬಂಜಾರ ಸಮುದಾಯದ ಮುಖಂಡರು ಮಾತನಾಡಿ, ‘ಹಿಂದುಳಿದ ಬಂಜಾರ ಸಮುದಾಯ ಮುಖ್ಯವಾಹಿನಿಗೆ ಬರಲು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿರುವ ಸರ್ಕಾರದ ಕ್ರಮ ಸ್ವಾಗತಾರ್ಹ. ಆದರೆ ಇದು ನಾಮಕಾವಸ್ತೆಯಾಗಿದ್ದು, ಅಲ್ಲಿ ದೊರೆಯಬೇಕಾದ ಮೂಲ ಸೌಕರ್ಯಗಳು ದೊರೆಯುತ್ತಿಲ್ಲ. ಸಮುದಾಯದ ಏಳಿಗೆಗೆ ಸರ್ಕಾರಗಳು ಹೆಚ್ಚಿನ ಗಮನ ಹರಿಸಬೇಕು’ ಎಂದರು.
ತಾಲ್ಲೂಕು ಕಚೇರಿಯ ಗ್ರೇಡ್-2 ತಹಶೀಲ್ದಾರ್ ಕರಿಯಾನಾಯಕ್, ಬಂಜಾರ ಸಮುದಾಯದ ಗೋಪಾಲನಾಯಕ್, ಬಿ. ಶಿವಶಂಕರ್, ಸಿದ್ದಾನಾಯಕ್, ಆರ್. ಕೃಷ್ಣಾನಾಯಕ್, ಹರೀಶ್ ನಾಯಕ್, ಮಂಜು ನಾಯಕ್, ಪ್ರಸಾದ್, ನಾಗ ನಾಯಕ್, ಕನ್ನಡ ಜಾಗೃತಿ ವೇದಿಕೆ ತಾಲ್ಲೂಕು ಅಧ್ಯಕ್ಷ ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.