ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ತಾಲ್ಲೂಕಿನಲ್ಲಿ ಒಟ್ಟು 1.26 ಕೋಟಿ ಮಹಿಳಾ ಪ್ರಯಾಣಿಕರು ಈವರೆಗೆ ಉಚಿತವಾಗಿ ಪ್ರಯಾಣ ಮಾಡಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ವಿಶ್ವನಾಥ ರೆಡ್ಡಿ ಹೇಳಿದರು.
ಉಚಿತವಾಗಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ನೀಡಲಾದ ಉಚಿತ ಟಿಕೆಟ್‌ಗಾಗಿ ಸರ್ಕಾರವು ಒಟ್ಟಾರೆ ₹40.16 ಕೋಟಿ ಹಣವನ್ನು ಸರ್ಕಾರ ವಿತರಿಸಿದೆ ಎಂದು ಹೇಳಿದ್ದಾರೆ.
ಶಕ್ತಿ ಯೋಜನೆ 2 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಸೋಮವಾರ ನಗರದ ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಬಸ್‌ಗಳಿಗೆ ಪೂಜೆ ಸಲ್ಲಿಸಿ ಪ್ರಯಾಣಿಕರಿಗೆ ಸಿಹಿ ವಿತರಿಸಿ ಮಾತನಾಡಿದರು.
ದೊಡ್ಡಬಳ್ಳಾಪುರದ ಡಿಪೊ ವ್ಯವಸ್ಥಾಪಕ ವೆಂಕಟರಾಘವ್ ಮಾತನಾಡಿ, ದೊಡ್ಡಬಳ್ಳಾಪುರ ಘಟಕದಿಂದ 30 ಸಾಮಾನ್ಯ ಸೇವೆ, 46 ವೇಗದೂತ ಸೇವೆ ಹಾಗೂ ನಾಲ್ಕು ಅಶ್ವಮೇಧ ಕ್ಲಾಸಿಕ್ ವಾಹನಗಳು ಸಂಚರಿಸುತ್ತಿವೆ. ಘಟಕದಲ್ಲಿ ನಿತ್ಯ 30 ಸಾವಿರ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ₹15.90 ಲಕ್ಷ ಆದಾಯ ಸಂಗ್ರಹವಾಗುತ್ತಿದೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ ಮಾತನಾಡಿ, ಶಕ್ತಿ ಯೋಜನೆ ಜಾರಿಯಿಂದ ಮಹಿಳೆಯರು ಆರ್ಥಿಕವಾಗಿ ಸದೃಢವಾಗಿದ್ದಾರೆ. ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ಇಲ್ಲಿನ ನೇಕಾರರಿಗೆ 10 ಎಚ್.ಪಿ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಜನರ ತೆರಿಗೆ ಹಣವನ್ನು ರಾಜ್ಯ ಸರ್ಕಾರ ಜನರ ಕಲ್ಯಾಣಕ್ಕಾಗಿಯೇ ಬಳಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಬಿ.ಜಿ.ಹೇಮಂತರಾಜು, ಕೆ.ಪಿ.ಜಗನ್ನಾಥ್, ಜಿ.ಚುಂಚೇಗೌಡ, ಅಪ್ಪಿವೆಂಕಟೇಶ್, ಆಂಜಿನ ಮೂರ್ತಿ, ಆದಿತ್ಯನಾಗೇಶ್, ರೇವತಿ, ಕಾಂತರಾಜ್, ಕೆ.ಎಂ.ಕೃಷ್ಣಮೂರ್ತಿ, ನಾಗರತ್ನಮ್ಮ, ಬಷೀರ್, ವಿಶ್ವಾಸ್ ಹನುಮಂತೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.