ADVERTISEMENT

ಕಮಿಷನ್ ದಂಧೆಗೆ ಕೈವೊಡ್ಡಿದರೆ ಎಚ್ಚರಿಕೆ: ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 13:50 IST
Last Updated 4 ಜನವರಿ 2020, 13:50 IST
ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ ಜಗದೀಶ್ ಶೆಟ್ಟರ್
ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ ಜಗದೀಶ್ ಶೆಟ್ಟರ್   

ದೇವನಹಳ್ಳಿ: ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಗಳಿಗೆ ಸ್ವಾಧೀನಪಡೆದುಕೊಳ್ಳುವ ಭೂಮಿಗೆ ನೀಡುವ ಪರಿಹಾರ ಹಣಕ್ಕೆ ಅಧಿಕಾರಿಗಳು ಕೈವೊಡ್ಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದರು. ‌

ಚನ್ನರಾಯಪಟ್ಟಣ ಹೋಬಳಿ ಪೋಲನಹಳ್ಳಿ, ಹರಳೂರು, ಮುದ್ದೇನಹಳ್ಳಿ, ಪಾಳ್ಯ ಮತ್ತು ಕುಂದಾಣ ಹೋಬಳಿ, ಚಪ್ಪರದಕಲ್ಲು, ಜ್ಯೋತಿಪುರ, ರಬ್ಬನಹಳ್ಳಿ, ದೊಡ್ಡಗೊಲ್ಲಹಳ್ಳಿ ಗ್ರಾಮ ವ್ಯಾಪ್ತಿಯ ವಿವಿಧ ಸರ್ವೆ ನಂಬರ್‌ಗಳ ರೈತರ ಭೂಸ್ವಾಧೀನ ಪ್ರದೇಶಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ವಿಶ್ವಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸುವ ಚಿಂತನೆ ಇದೆ. ಇದಕ್ಕೆ ಪೂರಕವಾಗಿ ಕುಂದಾಣ ಹೋಬಳಿ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ಕೆಲವೊಂದು ಗ್ರಾಮಗಳ ವ್ಯಾಪ್ತಿಯಲ್ಲಿ 2200 ಎಕರೆಗೆ ಮೊದಲ ಹಂತದಲ್ಲಿ ಈ ಹಿಂದಿನ ಸರ್ಕಾರ ಸ್ವಾಧೀನಕ್ಕೆ ಮುಂದಾಗಿತ್ತು. ನಂತರ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ 1000ಎಕರೆಗೂ ಹೆಚ್ಚು ಭೂಸ್ವಾಧೀನಕ್ಕೆ ಪಡೆಯಲಾಗುತಿದ್ದು ಕುಂದಾಣ ಹೋಬಳಿ ರೈತರನ್ನು ಹೊರತುಪಡಿಸಿ ಇತರ ರೈತರಿಗೆ ಸರ್ಕಾರ ನಿಗದಿಪಡಿಸಿದಂತೆ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ADVERTISEMENT

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ಈ ಭಾಗದಲ್ಲಿ ವಿಶ್ವಬಂಡವಾಳ ಹೂಡಿಕೆದಾರರಿಗೆ ಹೆಚ್ಚಿನ ಆಸಕ್ತಿ ಇದೆ. ಇದಕ್ಕೆ ಪೂರಕ ಎಂಬಂತೆ ಮೂಲ ಸೌಲಭ್ಯ ಒದಗಿಸಬೇಕಾಗಿರುವುದು ಸರ್ಕಾರದ ಕರ್ತವ್ಯ. ಕೈಗಾರಿಕಾ ವಲಯ ವಿಸ್ತರಿಸಿದರೆ ನಿರುದ್ಯೋಗಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ ಎಂದು ಹೇಳಿದರು.

ಕೌಶಲ ತರಬೇತಿ ನೀಡಿ ಯುವ ಪದವೀಧರರಿಗೆ ಉದ್ಯೋಗ ಕಲ್ಪಿಸುವುದು ಮೊದಲ ಆದ್ಯತೆ. ರೈತರಿಗೆ ಪರಿಹಾರ ಮತ್ತು ಅಡೆತಡೆಗಳ ಬಗ್ಗೆ ಸಂಪೂರ್ಣ ದಾಖಲೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

ರೈತ ನಾಗರಾಜ್, ಹೆಚ್ಚಿನ ಪರಿಹಾರ ಮೊತ್ತ ನೀಡುವಂತೆ ಮನವಿ ಮಾಡಿದರು. ಕೆ.ಐ.ಎ.ಡಿ.ಬಿ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.