ADVERTISEMENT

ದೊಡ್ಡಬಳ್ಳಾಪುರ: ಡಾ.ರಾಜ್‌ ಕಂಚಿನ ಪುತ್ಥಳಿ ಅನಾವರಣ, ಅಭಿಮಾನಿಗಳ ರಂಜಿಸಿದ ಶಿವಣ್ಣ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 2:13 IST
Last Updated 13 ಅಕ್ಟೋಬರ್ 2025, 2:13 IST
ದೊಡ್ಡಬಳ್ಳಾಪುರದ ಜಯಚಾಮರಾಜೇಂದ್ರ ವೃತ್ತದಲ್ಲಿ ಜೀರ್ಣೋದ್ಧಾರಗೊಂಡಿರುವ ಪೀಠದಲ್ಲಿ ಡಾ.ರಾಜ್‌ಕುಮಾರ್‌ ಅವರ ಕಂಚಿನ ಪ್ರತಿಮೆಯನ್ನು ನಟ ಶಿವರಾಜ್‌ಕುಮಾರ್  ಭಾನುವಾರ ಅನಾವರಣಗೊಳಿಸಿದರು
ದೊಡ್ಡಬಳ್ಳಾಪುರದ ಜಯಚಾಮರಾಜೇಂದ್ರ ವೃತ್ತದಲ್ಲಿ ಜೀರ್ಣೋದ್ಧಾರಗೊಂಡಿರುವ ಪೀಠದಲ್ಲಿ ಡಾ.ರಾಜ್‌ಕುಮಾರ್‌ ಅವರ ಕಂಚಿನ ಪ್ರತಿಮೆಯನ್ನು ನಟ ಶಿವರಾಜ್‌ಕುಮಾರ್  ಭಾನುವಾರ ಅನಾವರಣಗೊಳಿಸಿದರು   

ದೊಡ್ಡಬಳ್ಳಾಪುರ: ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ವರನಟ ಡಾ.ರಾಜ್‌ಕುಮಾರ್ ಕಂಚಿನ ಪುತ್ಥಳಿಯನ್ನು ಭಾನುವಾರ ನಟ ಶಿವರಾಜ್‌ಕುಮಾರ್‌ ಅನಾವರಣಗೊಳಿಸಿದರು.

ದೊಡ್ಡಬಳ್ಳಾಪುರ ನಗರಸಭೆ ಅನುದಾನದಲ್ಲಿ ತಾಲ್ಲೂಕು ಶಿವರಾಜ್‌ಕುಮಾರ್‌ ಕನ್ನಡ ಸೇನಾ ಸಮಿತಿ ನೇತೃತ್ವದಲ್ಲಿ ಈ ಪುತ್ಥಳಿಯನ್ನು ನವೀಕರಿಸಲಾಗಿದೆ. 

‘ದೊಡ್ಡಬಳ್ಳಾಪುರ ಹಾಗೂ ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧ ಇದೆ. ನಮ್ಮ ಕುಟುಂಬದ ಮೇಲಿನ ನೀವು ಇಟ್ಟಿರುವ ಪ್ರೀತಿ ದೊಡ್ಡಬಳ್ಳಾಪುರ ನಗರಕ್ಕೆ ನನ್ನನ್ನು ಕರೆತಂದಿದೆ. ಇಲ್ಲಿನ ಕೆಸಿಎನ್ ಗೌಡರನ್ನು ಅಪ್ಪಾಜಿ ಅನ್ನದಾತರು ಎಂದು ಕರೆಯುತ್ತಿದ್ದರು‘ ಎಂದರು.

ADVERTISEMENT

‘ದೊಡ್ಡಬಳ್ಳಾಪುರ ನನಗೆ ಹೊಸದಲ್ಲ. ‘ಮನಮೆಚ್ಚಿದ ಹುಡುಗಿ’, ‘ತವರಿಗೆ ಬಾ ತಂಗಿ’, ‘ವಾಲ್ಮೀಕಿ’ ಸಿನಿಮಾ ಶೂಟಿಂಗ್‌ ಇಲ್ಲಿ ಮಾಡಿದ್ದೇನೆ.  ದೊಡ್ಡಬಳ್ಳಾಪುರದ ಮೇಲಿನ ಪ್ರೀತಿ, ಅಭಿಮಾನ ದೊಡ್ಡದು. ನಿಮ್ಮ ಪ್ರೀತಿಗೆ ನಾನು ಚಿರಋಣಿ’ ಎಂದು ಹೇಳಿದರು.

ಬಳಿಕ ಸಿನಿಮಾ ಸಂಭಾಷಣೆ, ಹಾಡು ಹೇಳಿ ಅಭಿಮಾನಿಗಳನ್ನು ರಂಜಿಸಿದರು. ಹಾಡಿನ ಜೊತೆಗೆ ಒಂದೆರೆಡು ಹೆಜ್ಜೆ ಹಾಕಿದರು. ಶಿವಣ್ಣ ಹಾಡಿಗೆ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹೊಡೆದರು. ಅವರ ಹಾಡಿಗೆ ತಾವೂ ಧ್ವನಿಗೂಡಿಸಿದರು. 

ಶಿವರಾಜ್‌ ಕುಮಾರ್ ಮತ್ತು ಗೀತಾ ದಂಪತಿಗೆ ಪೌರ ಸನ್ಮಾನ ನೀಡಲಾಯಿತು. ಬಳಿಕ ಬಾಗಿನ ಅರ್ಪಿಸಲಾಯಿತು.

ಡಾ.ರಾಜ್‌ಕುಮಾರ್‌ ಅವರು ಕರ್ನಾಟಕ ಮತ್ತು ಕನ್ನಡಿಗರ ಶಕ್ತಿ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸದಭಿರುಚಿಯ ಚಿತ್ರಗಳನ್ನು ನೀಡಿದರು.  ರಾಜ್‌ ಕುಟುಂಬ ಕಲೆಗಾಗಿ ತಮ್ಮ ಜೀವನ ಸಮರ್ಪಿಸಿಕೊಂಡಿದ್ದಾರೆ ಎಂದು ಶಾಸಕ ಧೀರಜ್‌ ಮುನಿರಾಜು ಮಾತನಾಡಿ, 

ನಗರಸಭೆ ಅಧ್ಯಕ್ಷೆ ಸುಮಿತ್ರ ಆನಂದ್, ಉಪಾಧ್ಯಕ್ಷ ಎಂ.ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್‌.ರವಿಕುಮಾರ್‌, ಪೌರಾಯುಕ್ತ ಆರ್‌.ಕಾರ್ತಿಕೇಶ್ವರ, ನಗರಸಭೆ ಕಾರ್ಯಪಾಲಕ ಎಂಜಿನಿಯರ್‌ ರಾಮೇಗೌಡ, ನಗರಸಭೆ ಸದಸ್ಯ, ಚಿತ್ರ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನಕುಂಟೆ ಭಾಗವಹಿಸಿದ್ದರು.

ಹರೀಶ್‌ಗೌಡ, ಎಸ್‌.ಆರ್‌.ಮುನಿರಾಜು, ರವಿ ಹಸನ್‌ಘಟ್ಟ, ಡಿ.ಪಿ.ಆಂಜನೇಯ, ತಾಲ್ಲೂಕು ಶಿವರಾಜ್‌ ಕುಮಾರ್‌ ಕನ್ನಡ ಸೇನಾ ಸಮಿತಿ ಅಧ್ಯಕ್ಷ ಜೆ.ಆರ್‌.ರಮೇಶ್‌, ಗೌರವ ಅಧ್ಯಕ್ಷ ಕೆ.ಆನಂದ್‌ ಕುಮಾರ್‌, ಪ್ರಧಾನ ಕಾರ್ಯದರ್ಶಿ ಎನ್‌.ಎಸ್‌.ಗುರುರಾಜ್‌. ಕಾರ್ಯಾಧ್ಯಕ್ಷ ಎ.ನಾರಾಯಣಸ್ವಾಮಿ, ಉಪಾಧ್ಯಕ್ಷ ಜಿ.ರಾಮು, ಸಮಿತಿಯ ಸಂಜಿವ, ರಂಗಸ್ವಾಮಿ, ಮಂಜುನಾಥ್, ಜೆ.ಆರ್.ರಾಘವೇಂದ್ರ ಇದ್ದರು.

ದೊಡ್ಡಬಳ್ಳಾಪುರದ ಜಯಚಾಮರಾಜೇಂದ್ರ ವೃತ್ತದಲ್ಲಿ ಜೀರ್ಣೋದ್ಧಾರಗೊಂಡಿರುವ ಪೀಠದಲ್ಲಿ ಡಾ.ರಾಜ್‌ಕುಮಾರ್‌ ಅವರ ಕಂಚಿನ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಸೇರಿದ್ದ ಜನಸಾಗರ  
ನಾಡು ನುಡಿ ಅಭಿಮಾನಕ್ಕೆ ಡಾ.ರಾಜ್‌ಕುಮಾರ್‌ ಪ್ರೇರಣೆ ಆಗಬೇಕು. ಪ್ರತಿಯೊಬ್ಬರಿಗೂ ಕನ್ನಡದ ಅಭಿಮಾನ ಇರಬೇಕು.
ಡಾ.ಶಿವರಾಜ್‌ ಕುಮಾರ್ ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.