
ವಿಜಯಪುರ(ದೇವನಹಳ್ಳಿ): ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಜೀವನ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಗಮೇಶ್ವರ ಧರ್ಮ ಸಂಸ್ಥೆಯ ಅಧ್ಯಕ್ಷ ಚಂದ್ರಕಾಂತ ಕುಮಾರ್ ತಿಳಿಸಿದರು.
ಇಲ್ಲಿನ ಚನ್ನಕೇಶವ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀಕೃಷ್ಣ ಯತೀಂದ್ರ ಸತ್ಸಂಗ ಸೇವಾ ಟ್ರಸ್ಟ್ ವತಿಯಿಂದ ಭಗವದ್ಗೀತಾ ಪಾರಾಯಣ, ಕೈವಾರ ತಾತಾಯ್ಯನವರ ತತ್ವ, ಶ್ರೀಕೃಷ್ಣ ಮಾಸಿಕ ದ್ವಾದಶಿ ವಿಚಾರಧಾರೆ ಗೋಷ್ಠಿಯಲ್ಲಿ ಮಾತನಾಡಿ, ಶ್ರೀಗಳ ಸೇವೆ ಇಡೀ ಸಮಾಜಕ್ಕೆ ದಾರಿದೀಪವಾಗಿದೆ ಎಂದರು.
ಕೃಷ್ಣ ಯತೀಂದ್ರ ಸತ್ಸಂಗವು ಕಳೆದ 25 ವರ್ಷಗಳಿಂದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಈ ಸೇವೆಯು ನಿಂತ ನೀರಾಗದೆ ಸದಾ ಹರಿಯುವಂತಾಗಲಿ ಎಂದು ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ದೀಪ ಮುರುಳಿಧರ್ ತಿಳಿಸಿದರು.
ಜಾತಿ-ಮತದ ಭೇದವಿಲ್ಲದೆ ಸರ್ವಧರ್ಮೀಯರಿಗೂ ಆಶ್ರಯ ನೀಡಿದ ಸಿದ್ಧಗಂಗಾ ಮಠದ ಕೀರ್ತಿ ವಿಶ್ವಮಟ್ಟದಲ್ಲಿ ರಾರಾಜಿಸಲು ಶ್ರೀಗಳ ಶ್ರಮವೇ ಕಾರಣ ಎಂದು ಶಿಕ್ಷಕಿ ಗೀತಾ ಬಸವರಾಜು ಹೇಳಿದರು.
ಟ್ರಸ್ಟ್ ವತಿಯಿಂದ ಬಡವರಿಗೆ ಕಂಬಳಿ, ಸೀರೆ, ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಹಾಗೂ ಮಹಾಭಾರತ ಪುಸ್ತಕ ವಿತರಿಸಲಾಯಿತು.
ಸಂಗೀತ ನಿರ್ದೇಶಕ ಎಂ.ವಿ.ನಾಯ್ಡು, ತಬಲ ವಾದಕ ಮುನಿರಾಜು ಅವರು ಮಹಾತ್ಮ ಆಂಜನೇಯ, ನರಸಿಂಹಪ್ಪ ಮತ್ತು ಸೀತಾ ಲಕ್ಷ್ಮಿ ಅವರು ಕನಕ-ಪುರಂದರ ದಾಸರ ಕೀರ್ತನೆಗಳನ್ನು ಹಾಡಿದರು.
ಟ್ರಸ್ಟ್ ಅಧ್ಯಕ್ಷ ಜೆ.ಎಸ್.ರಾಮಚಂದ್ರಪ್ಪ, ಎಂಬ್ರಹಳ್ಳಿ ನರಸಿಂಹಸ್ವಾಮಿ, ಬಿ.ಪುಟ್ಟರಾಜಣ್ಣ, ವಿ.ಎನ್. ವೆಂಕಟೇಶ್, ನಾಗಯ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.