ADVERTISEMENT

ಸ್ವಾರ್ಥಕ್ಕಾಗಿ ಕುಲ ಕುಲಗಳ ಹೊಡೆದಾಟ ನಿಲ್ಲಲ್ಲಿ: ಸಿದ್ದರಾಮನಂದ ಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 2:29 IST
Last Updated 9 ನವೆಂಬರ್ 2025, 2:29 IST
ಹೊಸಕೋಟೆಯಲ್ಲಿ ಕನಕ ಜಯಂತಿ ಹಾಗೂ ಕನಕದಾಸರ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ ತಿಂಥಣಿ ಬ್ರಿಜ್‌ನ ಕನಕ ಗುರುಪೀಠದ ಸಿದ್ದರಾಮನಂದ ಪುರಿ ಸ್ವಾಮೀಜಿ, ಶಾಸಕ ಶರತ ಬಚ್ಚೇಗೌಡ ಮತ್ತಿರರು ಭಾಗವಹಿಸಿದ್ದರು
ಹೊಸಕೋಟೆಯಲ್ಲಿ ಕನಕ ಜಯಂತಿ ಹಾಗೂ ಕನಕದಾಸರ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ ತಿಂಥಣಿ ಬ್ರಿಜ್‌ನ ಕನಕ ಗುರುಪೀಠದ ಸಿದ್ದರಾಮನಂದ ಪುರಿ ಸ್ವಾಮೀಜಿ, ಶಾಸಕ ಶರತ ಬಚ್ಚೇಗೌಡ ಮತ್ತಿರರು ಭಾಗವಹಿಸಿದ್ದರು   

ಹೊಸಕೋಟೆ: ಕನಕದಾಸರು 16ನೇ ಶತಮಾನದಲ್ಲೇ ‘ಕುಲ ಕುಲ ಎಂದು ಹೊಡೆದಾಡದಿರಿ’ ಎಂದು ಹೇಳಿದ್ದರು. ಆದರೆ ಈಚಿನ ದಿನಗಳಲ್ಲಿ ಸ್ವಾರ್ಥಕ್ಕಾಗಿ ಕುಲ ಕುಲ ಎಂದು ಹೊಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಂಥಣಿ ಬ್ರಿಜ್‌ನ ಕನಕ ಗುರುಪೀಠದ ಸಿದ್ದರಾಮನಂದ ಪುರಿ ಸ್ವಾಮೀಜಿ ಹೇಳಿದರು.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ನಡೆದ ಕನಕದಾಸ ಜಯಂತಿ ಹಾಗೂ ತಾಲ್ಲೂಕು ಕಚೇರಿ ಮುಂಭಾಗ ಕನಕದಾಸರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕನಕದಾಸ ತಾನು ಅಧಿಕಾರದಿಂದ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಆಗುವುದಿಲ್ಲ ಎಂಬುದನ್ನು ಅರಿತು ತಂಬೂರಿ ಹಿಡಿದು ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕು ತಿದ್ದರು. ಆದರೆ ಸಮಾಜ ಇನ್ನು ಬದಲಾಗಿಲ್ಲ. ವಿಜ್ಞಾನ ಆವಿಷ್ಕಾರ, ತಂತ್ರಜ್ಞಾನ ಹಾಗೂ ಅಭಿವೃದ್ಧಿ ಹೆಚ್ಚಾದಷ್ಟು ಅಸಮಾನತೆಯೂ ಹೆಚ್ಚಾಗುತ್ತಿದೆ. ಪ್ರಸ್ತುತ ಸಮಾಜದಲ್ಲಿ ಸಹಭೋಜನೆ ಮುನ್ನೆಲೆಗೆ ಬರಬೇಕು ಎಂದು ಬೇಸರಿಸಿದರು.

ADVERTISEMENT

ಧರ್ಮ, ತ್ಯಾಗ, ಗೌರವಕ್ಕೆ ಮನುಷ್ಯ ತಲೆಬಾಗುವುದನ್ನು ಬಿಟ್ಟು ಸಮಾಜದ ಸ್ವಾಸ್ತ್ಯ ಕದಡುವ ಸಂಗತಿಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರುವುದು ದುರಂತ ಎಂದರು.

ವರದಕ್ಷಿಣೆ ಸಾಮಾಜಿಕ ಪಿಡುಗಾಗಿದೆ. ಪ್ರತಿಯೊಂದು ಮನೆಯಲ್ಲೂ ತಮ್ಮ ಮಕ್ಕಳಲ್ಲಿ ನಿಸ್ವಾರ್ಥ ಗುಣ ಬೆಳೆಸಬೇಕು. ಇಲ್ಲದಿದ್ದರೆ ಸಮಾಜ ಅಂಧತ್ವದಡೆಗೆ ಸಾಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ‘ಸಮಾಜದಲ್ಲಿ ನಮ್ಮ ಮಧ್ಯ ಕಟ್ಟಿಕೊಂಡಿರುವ ಜಾತಿ, ಶ್ರೀಮಂತಿಕೆ, ಹಣದ ಗೋಡೆಗಳನ್ನು ಹೊಡೆಯಲು ಕನಕದಾಸರ ತತ್ವ, ಆದರ್ಶ ಮಾರ್ಗದರ್ಶನ ಆಗಬೇಕಿದೆ. ಹುಟ್ಟಿನಿಂದಲೇ ಮನುಷ್ಯರೆಲ್ಲ ಸಮಾನರು ಕುವೆಂಪು ಹೇಳಿದಂತೆ ನಾವೆಲ್ಲರೂ ವಿಶ್ವ ಮಾನವರಾಗಿ ಬದುಕೋಣ’ ಎಂದು ಹೇಳಿದರು.

ಮಹಾನೀಯರ ಜಯಂತಿಗಳು ಒಂದು ಸಮುದಾಯಕ್ಕೆ ಸೀಮಿತ ಮಾಡಬಾರದು. ಎಲ್ಲಾ ಜಾತಿ ಮತ ಪಂಥ, ಧರ್ಮದವರು ಸೇರಿ ಆಚರಿಸಬೇಕು ಎಂದರು.

ತಹಶೀಲ್ದಾರ್ ಸೋಮಶೇಖರ್ ಅವರು ಕನಕದಾಸರ ಕುರಿತು ಮಾತನಾಡಿದರು.

ಚಿಮಂಡಹಳ್ಳಿ ಮುನಿಶ್ಯಾಮಣ್ಣ, ತಾಲ್ಲೂಕು ಕನಕ ಸಂಫದ ಮಾಜಿ ಅಧ್ಯಕ್ಷ ಸಿನಪ್ಪ, ಸುಬ್ಬರಾಜು, ಡಿವೈಎಸ್‌ಪಿ ಮಲ್ಲೇಶ್, ನಗರದ ಪೊಲೀಸ್ ನಿರೀಕ್ಷಿಕ ಗೋವಿಂದ್, ಸಿ.ಮುನಿಯಪ್ಪ, ಕಾರ್ಯನಿರ್ವಾಹಕ ಅಧಿಕಾರಿ ಮುನಿಯಪ್ಪ, ಸೋಮಣ್ಣ, ಮುನಿರಾಜು ಉಪಸ್ಥಿತರಿದ್ದರು.

ಹೊಸಕೋಟೆಯಲ್ಲಿ ಕನಕ ಜಯಂತಿ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಗಮನ ಸೆಳೆದ ಗೊರವರ ಕುಣಿತ
ಹೊಸಕೋಟೆಯಲ್ಲಿ ಕನಕ ಜಯಂತಿ ಪ್ರಯುಕ್ತ ನಡೆದ ಮೆರವಣಿಗೆ
ಸಮುದಾಯದ ಮನವಿಯಂತೆ ಕನಕ ಕೋ– ಆಪರೆಟೀವ್ ಸಂಘಕ್ಕೆ ಕಟ್ಟಡ ಮತ್ತು ಹಾಲುಮತ ಸಂಘಕ್ಕೆ ಚಿಮಂಡಹಳ್ಳಿಯಲ್ಲಿ ಜಾಗ ಮಂಜೂರು ಮಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ.
ಶರತ್‌ ಬಚ್ಚೇಗೌಡ ಶಾಸಕ

₹850 ಕೋಟಿ ವೆಚ್ಚದ ಕಾಮಗಾರಿ

ಹೊಸಕೋಟೆ–ಮಾಲೂರು ರಸ್ತೆಯೂ ಹದಗೆಟ್ಟಿದ್ದು ಸದ್ಯ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ. ಮುಂದಿನ ವರ್ಷದ ಜನವರಿಯಲ್ಲಿ ಸುಮಾರು ₹850 ಕೋಟಿ ವೆಚ್ಚದಲ್ಲಿ ಶಾಶ್ವತ ವಾದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಭೂಮಿ ನೆರೆವೇರಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.