ADVERTISEMENT

ದೊಡ್ಡಬಳ್ಳಾಪುರ: ಜಿಎಸ್‌ಟಿ ವಿರೋಧಿಸಿ ಸಹಿ ಸಂಗ್ರಹ

27ರಂದು ಪ್ರತಿಭಟನೆಗೆ ಹಾಲು ಉತ್ಪಾದಕರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 5:36 IST
Last Updated 22 ಜುಲೈ 2022, 5:36 IST
ದೊಡ್ಡಬಳ್ಳಾಪುರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಸಿ.ಎಚ್‌. ರಾಮಕೃಷ್ಣ ಮಾತನಾಡಿದರು
ದೊಡ್ಡಬಳ್ಳಾಪುರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಸಿ.ಎಚ್‌. ರಾಮಕೃಷ್ಣ ಮಾತನಾಡಿದರು   

ದೊಡ್ಡಬಳ್ಳಾಪುರ:ಹಾಲು ಹಾಗೂ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸುವ ಮೂಲಕ ಹೈನುಗಾರಿಕೆಯು ಖಾಸಗಿ ಪಾಲಾಗುವಂತೆ ಮಾಡಲಾಗುತ್ತಿದೆ. ಇದರ ವಿರುದ್ಧ ಜುಲೈ 27ರಂದು ರಾಜ್ಯದಾದ್ಯಂತ ಸಹಿ ಸಂಗ್ರಹ ಚಳವಳಿ ನಡೆಸಲಾಗುವುದು ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್‌. ಚಂದ್ರ ತೇಜಸ್ವಿ ಹೇಳಿದರು.

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಕ್ಷೇತ್ರದಲ್ಲಿ ನಡೆಯುತ್ತಿರುವ ಹೈನುಗಾರಿಕೆಯಿಂದ ಇಂದು ಗ್ರಾಮೀಣ ರೈತರ ಜೀವನ ನಡೆಯುತ್ತಿದೆ. ಈ ಕ್ಷೇತ್ರವನ್ನು ನಾಶ ಮಾಡುವ ಹುನ್ನಾರದಿಂದ ಹಾಲು, ಮೊಸರು, ತುಪ್ಪದ ಮೇಲೂ ಜಿಎಸ್‌ಟಿ ವಿಧಿಸಲಾಗುತ್ತಿದೆ ಎಂದು ಟೀಕಿಸಿದರು.

ಹೈನು ಉದ್ಯಮ ಕಾರ್ಪೊರೇಟ್‌ ಕಂಪನಿಗಳ ಕೈಗೆ ಹೋಗುವ ಮುನ್ನ ರೈತರು ಎಚ್ಚೆತ್ತುಕೊಳ್ಳಬೇಕಿದೆ. ಹೀಗಾಗಿ, ಭಾರತ ಹಾಲು ಉತ್ಪಾದಕರ ಫೆಡರೇಷನ್‌, ಕರ್ನಾಟಕ ರಾಜ್ಯ ಹಾಲು ಉತ್ಪಾದಕ ರೈತರ ಕ್ಷೇಮಾಭಿವೃದ್ಧಿ ಸಂಘ, ಪ್ರಾಂತ ರೈತ ಸಂಘದಿಂದ ದೆಹಲಿಯ ಪಾರ್ಲಿಮೆಂಟ್‌ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಜಿಎಸ್‌ಟಿ ಕೈಬಿಡುವಂತೆ ಆಗ್ರಹಿಸಲಾಗುತ್ತಿದೆ ಎಂದರು.

ADVERTISEMENT

ಅಪೌಷ್ಟಿಕ ಮಕ್ಕಳಿರುವ ದೇಶಗಳ ಪಟ್ಟಿಯಲ್ಲಿ ದೇಶ ಅತ್ಯಂತ ಕೆಳಮಟ್ಟದಲ್ಲಿದೆ. ಇಂತಹ ಸ್ಥಿತಿಯಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸುವ ಮೂಲಕ ಬೆಲೆ ದುಬಾರಿಯಾದರೆ ಬಡವರು ಹಾಲಿನಿಂದ ದೂರು ಉಳಿಯುವ ಅಪಾಯಗಳಿವೆ. ಇದರಿಂದ ಅಪೌಷ್ಟಿಕತೆ ಮತ್ತಷ್ಟು ಹೆಚ್ಚಾಗಲಿದೆ. ಈಗಾಗಲೇ ದೇಶದ ನಾನಾ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನುಜಾರಿಗೆ ತಂದಿರುವುದರಿಂದ ಹೈನುಗಾರಿಕೆ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಹೇಳಿದರು.

ರೈತರು ಹಸುಗಳನ್ನು ಮಾರಾಟ ಮಾಡುವ ಮೂಲಕ ಲಾಭಗಳಿಸುವ ಸಂತೆಗಳೇ ರದ್ದಾಗಿವೆ. ಪಶು ಆಹಾರದ ಬೆಲೆಯನ್ನು ಶೇ 8ರಷ್ಟು ಹೆಚ್ಚಿಸಲಾಗಿದೆ. ಗುಣಮಟ್ಟದ ನೆಪದಲ್ಲಿ ರೈತರಿಂದ ಹಾಲು ಖರೀದಿ ನಿರಾಕರಿಸಲಾಗುತ್ತಿದೆ. ಇದರಿಂದ ರೈತರು ಅನಿವಾರ್ಯವಾಗಿ ಹೈನುಗಾರಿಕೆಯಿಂದ ಹಿಂದೆ ಸರಿಯುವಂತೆ ಮಾಡಲಾಗುತ್ತಿದೆ ಎಂದು ದೂರಿದರು.

ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವಿಜಯಕುಮಾರ್‌, ಕಾರ್ಯದರ್ಶಿ ಸಿ.ಎಚ್‌. ರಾಮಕೃಷ್ಣ ಮಾತನಾಡಿ, ಜುಲೈ 27ರಂದು ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಂದೆ ಜಿಎಸ್‌ಟಿ ವಿರೋಧಿಸಿ ಹಾಲು ಉತ್ಪಾದಕರು ಪ್ರತಿಭಟನೆ ನಡೆಸಲಿದ್ದಾರೆ. ಅಂದು ಸಂಜೆ 4ಗಂಟೆಗೆ ದೊಡ್ಡಬೆಳವಂಗಲದಲ್ಲಿ ಬೃಹತ್‌ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಚಿಕ್ಕಬೆಳವಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿ.ಆರ್‌. ಮುನಿರಾಜು, ಮುಖಂಡರಾದ ನರಸಿಂಹರಾಜು, ಸದಾಶಿವಮೂರ್ತಿ, ಆರ್‌.ಎನ್‌. ಮಹೇಂದ್ರ, ಶಿವರಾಂ, ಗೋವಿಂದರಾಜು, ಎಲ್‌. ರಮೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.