ADVERTISEMENT

ಫೆಂಜಲ್ | ರೇಷ್ಮೆಗೂಡಿನ ಬೆಲೆ ಇಳಿಕೆ: ಕಂಗಾಲಾದ ರೈತರು

ಎಂ.ಮುನಿನಾರಾಯಣ
Published 8 ಡಿಸೆಂಬರ್ 2024, 4:19 IST
Last Updated 8 ಡಿಸೆಂಬರ್ 2024, 4:19 IST
ವಿಜಯಪುರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಹರಾಜಿನಲ್ಲಿ ಗೂಡು ಖರೀದಿಸಲು ಪರೀಕ್ಷಿಸುತ್ತಿದ್ದ ನೂಲುಬಿಚ್ಚಾಣಿಕೆದಾರರು
ವಿಜಯಪುರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಹರಾಜಿನಲ್ಲಿ ಗೂಡು ಖರೀದಿಸಲು ಪರೀಕ್ಷಿಸುತ್ತಿದ್ದ ನೂಲುಬಿಚ್ಚಾಣಿಕೆದಾರರು   

ವಿಜಯಪುರ(ದೇವನಹಳ್ಳಿ): ಫೆಂಜಲ್ ಚಂಡಮಾರುತ ಪರಿಣಾಮ ಕಳೆದೊಂದು ವಾರ ಮೋಡ ಮುಸುಕಿದ ವಾತಾವರಣದ ಜೊತೆಗೆ, ಮಳೆ ಸುರಿದ ಕಾರಣ ರೇಷ್ಮೆಹುಳುಗಳು ಕಟ್ಟಿರುವ ಗೂಡಿನಿಂದ ನೂಲು ಸರಿಯಾಗಿ ಬಿಚ್ಚಾಣಿಕೆ ಆಗುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಕೆ.ಜಿ ₹600ಗೆ  ಮಾರಾಟವಾಗುತ್ತಿದ್ದ ಗೂಡು, ಶನಿವಾರ ಸರಾಸರಿ ₹363ಗೆ ಕುಸಿದಿದೆ.

ಇತ್ತಿಚೆಗೆ ರೇಷ್ಮೆಗೂಡಿನ ಬೆಲೆ ಏರುಗತಿಯಲ್ಲಿತ್ತು. ನಾಲ್ಕೈದು ದಿನಗಳ ಕಾಲ ಜಡಿ ಮಳೆಯಿಂದ ಹಣ್ಣಾಗಿರುವ ಹುಳುಗಳು ಸರಿಯಾಗಿ ಗೂಡು ಕಟ್ಟಿಲ್ಲ. ಇತ್ತಿಚೆಗೆ ಮಾರುಕಟ್ಟೆಗೆ ಬರುತ್ತಿರುವ ಗೂಡಿನಲ್ಲಿ ನೂಲು ಸರಿಯಾಗಿ ಬಿಚ್ಚಾಣಿಕೆಯಾಗುತ್ತಿಲ್ಲ. ಹೀಗಾಗಿ ನೂಲು ಬಿಚ್ಚಾಣಿಕೆದಾರರೂ ಹೆಚ್ಚು ಬೆಲೆ ಕೊಡುತ್ತಿಲ್ಲ. ಇದರಿಂದ ಏಕಾಏಕಿ ಒಂದು ಕೆ.ಜಿ ಗೂಡಿನ ಬೆಲೆ ₹363ಕ್ಕೆ ಇಳಿಕೆಯಾಗಿದೆ. ಹಾಕಿರುವ ಬಂಡವಾಳವು ಸಿಗುತ್ತಿಲ್ಲ ಎಂದು ರೇಷ್ಮೆ ಬೆಳೆಗಾರರು ನಿರಾಸೆ ವ್ಯಕ್ತಪಡಿಸಿದರು.

‘ತಿಂಗಳಿನಿಂದ ರೇಷ್ಮೆಹುಳುಗಳನ್ನು ಜೋಪಾನವಾಗಿ ನೋಡಿಕೊಂಡು ಈ ಬಾರಿ ಉತ್ತಮ ಲಾಭ ನೀರಿಕ್ಷೆ ಮಾಡಿದ್ದೇವೆ. ಹುಳು ಹಣ್ಣಾಗುವ ಮೂರು ದಿನಗಳ ಮೊದಲು ಜಡಿ ಮಳೆ ಆರಂಭವಾಯಿತು. ಹಣ್ಣಾದ ಮೇಲೆ ಚಂದ್ರಿಕೆಗಳಿಗೆ ಹಾಕಿ, ಶೆಡ್‌ನಲ್ಲಿ ಜೋಡಿಸಿ, ಉಷ್ಣಾಂಶ ಕಾಪಾಡುವುದಕ್ಕಾಗಿ ವಿದ್ಯುತ್‌ ದೀಪ ಅಳವಡಿಸಿದ್ದೇವೆ. ಆದರೂ ಸರಿಯಾಗಿ ಬಿಚ್ಚಾಣಿಕೆಯಾಗುತ್ತಿಲ್ಲವೆಂದು ₹400ರೊಳಗೆ ಗೂಡು ಖರೀದಿಸುತ್ತಿದ್ದಾರೆ’ ಎಂದು ರೇಷ್ಮೆ ಬೆಳೆಗಾರ ನಿರಂಜನ್ ಬೇಸರಿಸಿದರು.

ADVERTISEMENT
ಮಾರುಕಟ್ಟೆಗೆ ಬರುವ ಗೂಡಿನಿಂದ ನೂಲು ಉತ್ತಮವಾಗಿ ಬಿಚ್ಚಾಣಿಕೆಯಾದರೆ ಹರಾಜಿನಲ್ಲಿ ಉತ್ತಮ ಬೆಲೆ ನೀಡಿ ಖರೀದಿಸಬಹುದು. ಸರಿಯಾಗಿ ಬಿಚ್ಚಾಣಿಕೆಯಾಗದಿದ್ದರೆ ನಾವು ಹಾಕಿರುವ ಬಂಡವಾಳವು ಸಿಗುವುದಿಲ್ಲ
ಬಾಬಾಜಾನ್ ನೂಲುಬಿಚ್ಚಾಣಿಕೆದಾರ
ತೀರಾ ಕಡಿಮೆ ಬೆಲೆಗೆ ಗೂಡು ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾದಾಗ ರಾಜ್ಯ ಸರ್ಕಾರ ರೇಷ್ಮೆ ಬೆಳೆಗಾರರ ನೆರವಿಗೆ ಬರಬೇಕು. ಕೆ.ಜಿ.ಗೂಡಿಗೆ ಕನಿಷ್ಠ ₹50 ಪ್ರೋತ್ಸಾಹಧನ ನೀಡಬೇಕು.
ಶಿವಕುಮಾರ್ ರೇಷ್ಮೆ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.