
ವಿಜಯಪುರ (ದೇವನಹಳ್ಳಿ): ಮೊಂಥಾ ಚಂಡಮಾರುತ ಹೊಡೆತ ರೇಷ್ಮೆ ಬೆಳೆಗಾರರಿಗೆ ತಟ್ಟಿದ್ದು, ಜಡಿ ಮಳೆ ಹಾಗೂ ವಾತಾವರಣದಲ್ಲಿ ಹೆಚ್ಚು ಥಂಡಿ ಕಂಡು ಬಂದಿರುವುದರಿಂದ ರೇಷ್ಮೆ ಹುಳುವಿನಲ್ಲಿ ರೋಗ ಬಾಧೆ ಆವರಿಸುತ್ತಿರುವುದು ಬೆಳೆಗಾರರಲ್ಲಿ ಆತಂಕ ಶುರುವಾಗಿದೆ.
ಈಗಿರುವ ವಾತಾವರಣದಲ್ಲಿ ರೇಷ್ಮೆ ಹುಳುವಿನಲ್ಲಿ ಸಪ್ಪೆ, ಹಾಲು ತೊಂಡೆ ರೋಗ, ಹಣ್ಣಾಗಿರುವ ಹುಳು ಗೂಡು ಕಟ್ಟದೆ ನಿಶ್ಶಕ್ತಿ ಕಳೆದುಕೊಳ್ಳುವುದು, ಒಂದೇ ಸಾರಿ ಜ್ವರಕ್ಕೆ ಬಾರದಂತಹ ರೋಗ ಬಾಧೆ, ನೂಲು ಬಿಚ್ಚಣಿಕೆ ಸಮಸ್ಯೆ ಸಹಜವಾಗಿ ಕಾಣಿಸಿಕೊಳ್ಳಲಿದೆ. ಇದನ್ನು ನಿಯಂತ್ರಿಸಲು ರೇಷ್ಮೆ ಬೆಳೆಗಾರರು ಹರಸಾಹಸ ಪಡುವಂತಾಗಿದೆ.
ಕೆಲ ದಿನಗಳ ಹಿಂದೆ ವಿಜಯಪುರ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಒಂದು ಕೆ.ಜಿ ರೇಷ್ಮೆ ಗೂಡಿನ ದರ (ಸ್ಥಳೀಯ) ಗರಿಷ್ಠ ₹700 ರಿಂದ ₹750 ವರೆಗೆ ಮಾರಾಟವಾಗುತ್ತಿತ್ತು. ಆದರೆ ಮಂಗಳವಾರ ದಿಢೀರನೇ ದರದಲ್ಲಿ ಏರುಪೇರು ಕಂಡು ಬಂದಿದೆ.
ಮಂಗಳವಾರ ಒಂದು ಕೆ.ಜಿ ರೇಷ್ಮೆ ಗೂಡಿನ ದರ ಗರಿಷ್ಠ ₹646 ವರೆಗೆ ಮಾರಾಟವಾಗಿದ್ದು, ಒಂದೇ ದಿನದಲ್ಲಿ ಗೂಡಿನ ದರದಲ್ಲಿ ₹80 ರಿಂದ ₹100 ವರೆಗೆ ಕುಸಿತ ಕಂಡು ಬಂದಿರುವುದರಿಂದ ರೇಷ್ಮೆ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ.
ಮೊಂಥಾ ಚಂಡಮಾರುತದಿಂದ ಒಂದೆಡೆ ರೇಷ್ಮೆ ಗೂಡಿನ ದರ ಕುಸಿತ, ಮತ್ತೊಂದೆಡೆ ರೇಷ್ಮೆ ಹುಳುವಿನಲ್ಲಿ ರೋಗ ಬಾಧೆ ಕಾಣಿಸಿಕೊಳ್ಳುತ್ತಿರುವುದರಿಂದ ಹೆಚ್ಚು ನಷ್ಟಕ್ಕೆ ಸಿಲುಕಲಿದ್ದೇವೆ ಎಂಬ ಆತಂಕ ರೇಷ್ಮೆ ಬೆಳೆಗಾರರಲ್ಲಿ ಮನೆ ಮಾಡಿದೆ.
ಮೊಂಥಾ ಚಂಡಮಾರುತದಿಂದ ಒಂದೆಡೆ ರೇಷ್ಮೆಗೂಡಿನ ಬೆಲೆ ಕುಸಿತ ಕಂಡು ಬರುತ್ತಿದೆ. ಮತ್ತೊಂದೆಡೆ ಹುಳುಗಳು ರೋಗಕ್ಕೆ ತುತ್ತಾಗಿ ಬೆಳೆಗಾರರು ಹೆಚ್ಚು ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ನಷ್ಟ ಪರಿಹಾರ ನೀಡಬೇಕುರವಿಕುಮಾರ್, ರೇಷ್ಮೆ ಬೆಳೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.