ADVERTISEMENT

ರೇಷ್ಮೆನೂಲು ಬೆಲೆ ಕಡಿತ: ಪ್ರತಿಭಟನೆ

ಕೆ.ಜಿ ನೂಲಿಗೆ ₹ 3000 l ನೂಲು ಬಿಚ್ಚಣಿಕೆದಾರರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 13:09 IST
Last Updated 14 ಮಾರ್ಚ್ 2020, 13:09 IST
ವಿಜಯಪುರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೇಷ್ಮೆನೂಲು ಬೆಲೆ ಕಡಿತವನ್ನು ಖಂಡಿಸಿ, ನೂಲು ಬಿಚ್ಚಾಣಿಕೆದಾರರು ಪ್ರತಿಭಟನೆ ನಡೆಸಿದರು
ವಿಜಯಪುರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೇಷ್ಮೆನೂಲು ಬೆಲೆ ಕಡಿತವನ್ನು ಖಂಡಿಸಿ, ನೂಲು ಬಿಚ್ಚಾಣಿಕೆದಾರರು ಪ್ರತಿಭಟನೆ ನಡೆಸಿದರು   

ವಿಜಯಪುರ: ಕೋವಿಡ್–19 ಸೋಂಕಿನ ಕಾರಣ ನೀಡಿ ಕೆ.ಜಿ. ರೇಷ್ಮೆನೂಲಿಗೆ ₹1,000 ಕಡಿತಗೊಳಿಸಲಾಗಿದೆ ಎಂದು ಆರೋಪಿಸಿದ ನೂಲುಬಿಚ್ಚಣಿಕೆದಾರರುಕೆಎಸ್ಎಂಬಿ ಮಾರುಕಟ್ಟೆ ಕಚೇರಿ ಪ್ರವೇಶಿಸಿ ಪ್ರತಿಭಟನೆ ನಡೆಸಿದರು.‌

ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಪ್ರತಿಭಟನೆ ನಡೆಸಿದ ನೂಲುಬಿಚ್ಚಾಣಿಕೆದಾರರು,ದರ ಇಳಿಕೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೂಲು ಬಿಚ್ಚಣಿಕೆದಾರರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಉತ್ತಮ ಬೆಲೆ ನೀಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಕಾರರು,ರೇಷ್ಮೆ ನೂಲು ಖರೀದಿಗೆಶೀಘ್ರ ಮುಂದಾಗಬೇಕು ಎಂದು ಆಗ್ರಹಿಸಿದರು.

ADVERTISEMENT

ಪ್ರತಿ ಕೆ.ಜಿ. ರೇಷ್ಮೆ ನೂಲಿಗೆ ₹4,000 ಇದ್ದದ್ದು, ಈಗ 3,000 ಕ್ಕೆ ಇಳಿಕೆಯಾಗಿದೆ. ಇದರಿಂದ ನಾವು ಬಿಚ್ಚಣಿಕೆ ಮಾಡಿಟ್ಟಿರುವ ರೇಷ್ಮೆನೂಲು ಮಾರುಕಟ್ಟೆಗೆ ಮಾರಾಟ ಮಾಡಿದರೆ, ನಾವು ಹೂಡಿರುವ ಬಂಡವಾಳವೂ ಬರುವುದಿಲ್ಲ. ಸಂಕಷ್ಟಕ್ಕೆ ಶೀಘ್ರ ಸ್ಪಂದಿಸಲಿ ಎಂದು ಮನವಿ ಮಾಡಿದರು.

ಗೂಡಿನ ಆವಕ ಪ್ರಮಾಣ ಕಡಿಮೆಯಾಗಿದ್ದ ಸಮಯದಲ್ಲಿ ಗೂಡು ಖರೀದಿಗಾಗಿ ಒಡವೆಗಳನ್ನು ಗಿರವಿ ಇಟ್ಟು ಹಣ ತಂದು ಬಂಡವಾಳ ಹೂಡಿದ್ದೆವು. ಅನೇಕರಿಂದ ಸಾಲ ಪಡೆದುಕೊಂಡು ಗೂಡು ಖರೀದಿಸಿದ್ದೇವೆ. ಈಗ ಬೆಲೆ ಕಡಿತಗೊಳಿಸಿರುವ ಕಾರಣ ನಾವು ಸಂಕಷ್ಟಕ್ಕೆ ಒಳಗಾಗುತ್ತೇವೆ. ಒಳ್ಳೆಯ ಬೆಲೆಯನ್ನು ರೈತರಿಗೆ ನೀಡಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ನೂಲು ಬಿಚ್ಚಣಿಕೆದಾರ ಸಾಧಿಕ್ ಪಾಷ ಮಾತನಾಡಿ, ಸರ್ಕಾರ ಯಾವುದೇ ಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲ. ವ್ಯಯಿಸಿದ ಶ್ರಮ, ಸಮಯ, ಬಂಡವಾಳಕ್ಕೆ ಉತ್ತಮ ಬೆಲೆ ಸಿಗುತ್ತಿಲ್ಲ.ಈ ಕಾರಣದಿಂದಾಗಿ ನಮಗೆ ತುಂಬಾ ಕಷ್ಟವಾಗುತ್ತಿದೆ ಎಂದರು.

ರೈತ ನಾಗರಾಜ್ ಮಾತನಾಡಿ, ಬಯಲುಸೀಮೆಯ ರೈತರು, ಅಂತರ್ಜಲದ ಮಟ್ಟ ತೀವ್ರ ಕುಸಿದಿದ್ದರೂ, ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ.ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ರೇಷ್ಮೆ ಉದ್ಯಮದಲ್ಲಿ ಬದುಕು ಕಂಡುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆ.ಜಿ ಗೂಡಿಗೆ₹ 350

ಸರ್ಕಾರಗಳ ರೈತ ವಿರೋಧಿ ನೀತಿಯಿಂದಾಗಿ ಬದಲಾಗುತ್ತಿರುವ ಬೆಲೆಗಳಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಇದೇ ಕಸುಬನ್ನು ನಂಬಿಕೊಂಡು ತಿಂಗಳು ಪೂರ್ತಿ ಮನೆಮಂದಿಯೆಲ್ಲಾ ದುಡಿದು ಗೂಡು ಮಾರುಕಟ್ಟೆಗೆ ತಂದಿದ್ದೇವೆ. ಇತ್ತೀಚಿನವರೆಗೂ ಗೂಡಿನ ಧಾರಣೆ ಕೆ.ಜಿ.ಗೆ ₹ 530 ಮಾರಾಟವಾಗಿತ್ತು. ಈಗ ದಿಢೀರ್ ನೂಲು ಬೆಲೆ ಕುಸಿತವಾಗಿರುವ ಕಾರಣ ಗೂಡಿನ ಬೆಲೆ ಏಕಾಏಕಿ ₹ 350ಕ್ಕೆ ಕುಸಿದಿದೆ ಎಂದು ಅಳಲು ತೋಡಿಕೊಂಡರು.

ನೂಲು ಬಿಚ್ಚಾಣಿಕೆದಾರರು ಅಕ್ರಂ ಪಾಷ, ಜಮೀರ್ ಪಾಷ, ಕೆ.ಎನ್.ನಾಗರಾಜ್, ಖಲೀಂ ಪಾಷ,ಎಲ್.ಸಾದಿಕ್ ಜಹಾಂಗೀರ್, ಅಕ್ರಂ, ಜಿ.ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.