ADVERTISEMENT

ಪ್ಲವ ನಾಮ ಸಂವತ್ಸರ ಯುಗಾದಿ: ಕಾಮಣ್ಣಮೂರ್ತಿಗೆ ಸರಳ ಪೂಜೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 3:25 IST
Last Updated 15 ಏಪ್ರಿಲ್ 2021, 3:25 IST
ದೊಡ್ಡಬಳ್ಳಾಪುರದ ಖಾಸ್‍ಬಾಗ್‍ನಲ್ಲಿ ಮಣ್ಣಿನಿಂದ ಕಾಮನಮೂರ್ತಿ ಬಿಡಿಸಿ ಪೂಜೆ ಸಲ್ಲಿಸಲಾಯಿತು
ದೊಡ್ಡಬಳ್ಳಾಪುರದ ಖಾಸ್‍ಬಾಗ್‍ನಲ್ಲಿ ಮಣ್ಣಿನಿಂದ ಕಾಮನಮೂರ್ತಿ ಬಿಡಿಸಿ ಪೂಜೆ ಸಲ್ಲಿಸಲಾಯಿತು   

ದೊಡ್ಡಬಳ್ಳಾಪುರ: ಚೈತ್ರ ಮಾಸದ ಪ್ಲವ ನಾಮ ಸಂವತ್ಸರದ ಯುಗಾದಿ ಹಬ್ಬವನ್ನು ತಾಲ್ಲೂಕಿನಾದ್ಯಂತ ಸಡಗರದಿಂದ ಆಚರಿಸಲಾಯಿತು.

ಜನತೆ ಮನೆಯ ಬಾಗಿಲುಗಳನ್ನು ತಳಿರು ತೋರಣಗಳಿಂದ ಶೃಂಗರಿಸಿ, ಹೊಸ ಬಟ್ಟೆಗಳನ್ನು ಧರಿಸಿ, ಬೇವು ಬೆಲ್ಲ ಹಂಚುವುದರೊಂದಿಗೆ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೊಸ ಪಂಚಾಂಗಕ್ಕೆ ಪೂಜೆ ಸಲ್ಲಿಸುವ ಆಚರಣೆ ನಡೆಯಿತು.ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳು ನಡೆದವು.

ಕಾಮಣ್ಣಮೂರ್ತಿಗೆ ವಿಶೇಷ ಪೂಜೆ: ಯುಗಾದಿ ವೇಳೆ ಬಯಲುಸೀಮೆಯಲ್ಲಿ ವಿಶಿಷ್ಟವಾಗಿ ಆಚರಿಸುವ ಕಾಮಣ್ಣಮೂರ್ತಿಯನ್ನು ತಣ್ಣಗೆ ಮಾಡುವ ಆಚರಣೆಯು ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.

ADVERTISEMENT

ನಗರದ ಖಾಸ್‍ಬಾಗ್, ದರ್ಗಾಪುರ, ಚೌಡೇಶ್ವರಿ ಬೀದಿ, ತೂಬಗೆರೆ ಪೇಟೆ, ಗಾಣಿಗರ ಪೇಟೆಗಳಲ್ಲಿ ವಿವಿಧ ಮಾದರಿಯ ಕಾಮಣ್ಣನ ಮೂರ್ತಿಗಳನ್ನು ಮಣ್ಣಿನಲ್ಲಿ ಬಿಡಿಸಿ ಪೂಜೆ ಸಲ್ಲಿಸಲಾಯಿತು.

ಮಾಂಸ ಮಾರಾಟ ಜೋರು: ಯುಗಾದಿಯ ಸಿಹಿ ತಿಂದ ಮೇಲೆ ಹಬ್ಬದ ರಜದಲ್ಲಿ ಮಾಂಸದ ಅಡುಗೆ ಮಾಡುವ ಪದ್ಧತಿ ಹಿಂದಿನಿಂದಲೂ ಬೆಳೆದು ಬಂದಿದೆ. ಹೊಸ ತೊಡುಕು ಎಂದು ಸಾಮಾನ್ಯರಲ್ಲಿ ಕರೆಯುವ ಈ ದಿನ ಮಾಂಸದ ಅಂಗಡಿಗಳಲ್ಲಿ ಮಾಂಸ ಕೊಂಡೊಯತ್ತಿದ್ದು, ಒಂದು ಕೆಜಿ ಮಟನ್ ₹ 800ಗಳವರೆಗೆ ಮಾರಾಟ ನಡೆದಿತ್ತು. ಬೇಡಿಕೆ ಪೂರೈಸಲು ಬೆಳಗಿನ ಜಾವ 4 ಗಂಟೆಗೆ ಮಾಂಸದ ಅಂಗಡಿಗಳು ತೆರೆದಿದ್ದವು. ಈ ಬಾರಿ ಮೇಕೆ, ಕುರಿ ತಲೆ, ಕಾಲುಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿತ್ತು. ಮೇಕೆ, ಕುರಿ ತಲೆಯನ್ನು ವಿಶೇಷವಾಗಿ ಸ್ವಚ್ಛ ಮಾಡಿಕೊಡುವ ಅನುಭವ ಇರುವ ನಗರದ ನಾಗರಕೆರೆ ಬಾಗಿಲಿನಲ್ಲಿ ಮಧ್ಯಾಹ್ನ 1 ಗಂಟೆ ಸಮಯದಲ್ಲೂ ಸುಮಾರು 100 ಜನಕ್ಕೂ ಹೆಚ್ಚು ಜನ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂತು.

ಮಾಸ್ಕ್ ಇಲ್ಲದೆ ಮುಗಿಬಿದ್ದ ಮಾಂಸ ಪ್ರಿಯರು
ದೇವನಹಳ್ಳಿ:
ಯುಗಾದಿ ಹಬ್ಬದ ನಂತರ ದಿನದ ಹೊಸತೊಡಕಿಗೆ ಮಾಸ್ಕ್ ಧರಿಸದೆ, ಅಂತರ ಕಾಯ್ದುಕೊಳ್ಳದೆ ಮಾಂಸ ಪ್ರಿಯರು ಮಾರುಕಟ್ಟೆಗಳಲ್ಲಿ ಮಂಗಳವಾರ ರಾತ್ರಿಯಿಂದಲೇ ಖರೀದಿಗೆ ಮುಗಿಬಿದ್ದರು.

ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಕೊರೊನ ಸೋಂಕಿನ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿಗೆ ಕಡಿವಾಣ ಹಾಕಲು ಮುಂಜಾಗ್ರತೆಗೆ ಕಟ್ಟುನಿಟ್ಟಿನ ನಿಯಮ ಮತ್ತು ಆದೇಶಗಳನ್ನು ಜಾರಿ ಮಾಡಿದ್ದರು. ಸಂಬಂಧಪಟ್ಟ ಅಧಿಕಾರಿಗಳು ಮಾಂಸಪ್ರಿಯರ ಮುಂದೆ ಮೌನವಾಗಿದ್ದರು ಎಂದು ಸಾರ್ವಜನಿಕರೇ ಆರೋಪಿಸಿದರು.

‘ಬೈಚಾಪುರ ರಸ್ತೆ, ಯಲಹಂಕ ಬೀದಿ, ಹಳೆ ತಾಲ್ಲೂಕು ಕಚೇರಿ ರಸ್ತೆ,ಹಳೇ ಬಸ್ ನಿಲ್ದಾಣದ ಮಾಂಸದ ಮಾರುಕಟ್ಟೆ, ವಿಶ್ವನಾಥಪುರ, ಚಪ್ಪರದ ಕಲ್ಲು ವೃತ್ತ ಅನೇಕ ಕಡೆಗಳಲ್ಲಿ ನಿಯಮ ಉಲ್ಲಂಘಿಸಿ ಗ್ರಾಹಕರು ಗುಂಪುಗೂಡಿ ಕುರಿ, ಮೇಕೆ ಮಾಂಸ, ಕೋಳಿ ಮತ್ತು ಹಂದಿ ಮಾಂಸ ಖರೀದಿ ಗುಂಗಿನಲ್ಲಿ ಇದ್ದರು. ಸೋಂಕಿನ ಭಯವೇ ಗ್ರಾಹಕರಿಗೆ ಇಲ್ಲ. ಈ ರೀತಿಯಾದರೆ ಸೋಂಕು ವೇಗವಾಗಿ ಹರಡುವುದರಲ್ಲಿ ಅನುಮಾನವೇ ಇಲ್ಲ’ ಎಂದು ಚಂದ್ರಶೇಖರ್ ಆರೋಪಿಸಿದರು.

‘ಜಿಲ್ಲಾಡಳಿತದ ಮಾಹಿತಿಯಂತೆ ಏಪ್ರಿಲ್ ಒಂದರಿಂದ 13ರವರೆಗೆ 1,268 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ ಒಬ್ಬರು ಮರಣಹೊಂದಿದ್ದಾರೆ. ಇದೇ ರೀತಿಯಾದರೆ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಸಾಧ್ಯವಾಗುವುದಿಲ್ಲ’ ಎಂದು ಶಾಂತಕುಮಾರ್ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.