ADVERTISEMENT

ಡಿ. 26ರಂದು ಕಂಕಣ ಸೂರ್ಯಗ್ರಹಣ

ಗ್ರಹಣ ಕಾಲದಲ್ಲಿ ಆಹಾರ, ನೀರು ವಿಷವಾಗುವುದಿಲ್ಲ, ಸುರಕ್ಷತಾ ಕ್ರಮಗಳೊಂದಿಗೆ ವೀಕ್ಷಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 13:41 IST
Last Updated 18 ಡಿಸೆಂಬರ್ 2019, 13:41 IST
ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಂಕಣ ಸೂರ್ಯ ಗ್ರಹಣ ವೀಕ್ಷಣೆ ಕುರಿತು ಮಾಹಿತಿ ನೀಡಲಾಯಿತು
ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಂಕಣ ಸೂರ್ಯ ಗ್ರಹಣ ವೀಕ್ಷಣೆ ಕುರಿತು ಮಾಹಿತಿ ನೀಡಲಾಯಿತು   

ತೂಬಗೆರೆ (ದೊಡ್ಡಬಳ್ಳಾಪುರ): ‘ಕಂಕಣ ಸೂರ್ಯಗ್ರಹಣಡಿ. 26ರಂದು ನಡೆಯಲಿದ್ದು ಪ್ರಕೃತಿಯಲ್ಲಿನ ಅಪರೂಪದ ಘಟನೆಯಾಗಲಿದೆ. ಗ್ರಹಣದ ಕುರಿತಾಗಿನ ಮೂಢನಂಬಿಕೆಗಳನ್ನು ಬದಿಗಿಟ್ಟು ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಗ್ರಹಣ ವೀಕ್ಷಿಸಿ, ವಿಸ್ಮಯ ಅನುಭವಿಸಬಹುದು’ ಎಂದು ಜಕ್ಕೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಂ.ಬಿ.ಪ್ರಕಾಶ್ ಹೇಳಿದರು.

ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಂಕಣ ಸೂರ್ಯ ವೀಕ್ಷಣೆ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಗ್ರಹಣದ ಸಂಪೂರ್ಣ ಮಾಹಿತಿ ನೀಡಿದರು.

‘ವಿಶ್ವದ ಇತರ ಭೂ ಭಾಗದಲ್ಲಿ ಗ್ರಹಣವಾಗುತ್ತದೆ. 2010ರಲ್ಲಿ ಕೇರಳದ ತಿರುವನಂತಪುರದಲ್ಲಿ ಪೂರ್ಣ ಕಂಕಣ ಸೂರ್ಯಗ್ರಹಣ ಮತ್ತು ಕರ್ನಾಟಕದಲ್ಲಿ ಪಾರ್ಶ್ವ ಕಂಕಣ ಸೂರ್ಯಗ್ರಹಣ ಗೋಚರಿಸಿದ್ದವು. ರಾಜ್ಯದಲ್ಲಿ ಪಾರ್ಶ್ವ ಗ್ರಹಣ ಇದ್ದರೂ ಅಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯಾದ ಅನುಭವವನ್ನು ಜನ ಪಡೆದಿದ್ದರು’ ಎಂದರು.

ADVERTISEMENT

‘ಪ್ರಕೃತಿಯ ಎಲ್ಲ ಸ್ವಾಭಾವಿಕ ವಿದ್ಯಾಮಾನಗಳಲ್ಲಿ ಹೆಚ್ಚು ಗಮನ ಸೆಳೆಯುವುದು ಗ್ರಹಣಗಳು. ಇದರಲ್ಲಿ ಖಗ್ರಾಸ ಅಥವಾ ಸಂಪೂರ್ಣ ಸೂರ್ಯಗ್ರಹಣ ಮತ್ತು ಕಂಕಣ ಸೂರ್ಯಗ್ರಹಣ ಎಂಬ ಎರಡು ವಿಧಗಳಿದ್ದು, ಸೂರ್ಯ ಬಿಂಬವನ್ನು ಸಂಪೂರ್ಣವಾಗಿ ಚಂದ್ರ ಮರೆ ಮಾಡಿದಾಗ ಸಂಭವಿಸುವುದು ಖಗ್ರಾಸ ಸೂರ್ಯಗ್ರಹಣ. ಸೂರ್ಯನ ಕೇಂದ್ರ ಭಾಗವನ್ನು ಆವರಿಸಿಕೊಂಡು ಅಂಚಿನ ಭಾಗವನ್ನು ಉಳಿಸುವುದು ಕಂಕಣ ಸೂರ್ಯಗ್ರಹಣ’ ಎಂದು ಮಾಹಿತಿ ನೀಡಿದರು.

‘ಗ್ರಹಣ ಕಾಲದಲ್ಲಿ ಆಹಾರ ವಿಷವಾಗುತ್ತದೆ ಎಂಬ ತಪ್ಪು ನಂಬಿಕೆಯನ್ನು ಹೋಗಲಾಡಿಸಲು ಡಾ. ಎಚ್.ನರಸಿಂಹಯ್ಯ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಡಲೆಪುರಿ ತಿನ್ನುತ್ತ ಎಲ್ಲರೊಂದಿಗೆ ಗ್ರಹಣ ವೀಕ್ಷಣೆ ಮಾಡಿದ್ದರು’ ಎಂದರು.

‘ಬರಲಿರುವ ಕಂಕಣ ಸೂರ್ಯಗ್ರಹಣದ ವಿಶೇಷವೆಂದರೆ ಕರಾವಳಿಯಲ್ಲಿ ಪೂರ್ಣ ಕಂಕಣ ಗ್ರಹಣ ಕಾಣಿಸಲಿದ್ದು, ರಾಜ್ಯದ ಉಳಿದ ಭಾಗಗಳಲ್ಲಿ ಶೇ 90ರಷ್ಟು ಕಂಡುಬರಲಿದೆ. ಸೂರ್ಯನ ಸುತ್ತ ಸುತ್ತುವ ಭೂಮಿ ಮತ್ತು ಭೂಮಿಯ ಸುತ್ತ ಸುತ್ತುವ ಚಂದ್ರನ ಚಲನೆಯ ಸಂದರ್ಭದಲ್ಲಿ ಭೂಮಿ, ಸೂರ್ಯನ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣವಾಗುತ್ತದೆ. ಹಾಗೆ ನೋಡಿದರೆ, ಪ್ರತಿ ಅಮಾವಾಸ್ಯೆಯಂದು ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬರುತ್ತಾನಾದರೂ ಅವುಗಳ ಚಲನೆಯ ಪಥ ನಿರ್ದಿಷ್ಟ ಕೇಂದ್ರದಲ್ಲಿ ಸಂಧಿಸಿದಾಗ ಮಾತ್ರ ಗ್ರಹಣವಾಗುತ್ತದೆ. ಅಂಥ ಸಂದರ್ಭ ಈಗ ರಾಜ್ಯದಲ್ಲಿ ಕಾಣಲಿದೆ’ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಸುಬ್ರಮಣ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.