ADVERTISEMENT

ಹೊಸಕೋಟೆ: ಯಲಚಹಳ್ಳಿ ಕೆರೆಯಂಗಳದಲ್ಲಿ ಸೌರಘಟಕ ಉದ್ಘಾಟನೆ

7.3 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ । 1,383 ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 2:14 IST
Last Updated 31 ಅಕ್ಟೋಬರ್ 2025, 2:14 IST
ತಾವರೆಕೆರೆಯ ಸರ್ಕಾರಿ ಮ್ಯಾಗ್ ನೇಟ್ ಶಾಲೆಯ ಶಂಕು ಸ್ಥಾಪನೆಯ ಕಾರ್ಯಕ್ರಮ
ತಾವರೆಕೆರೆಯ ಸರ್ಕಾರಿ ಮ್ಯಾಗ್ ನೇಟ್ ಶಾಲೆಯ ಶಂಕು ಸ್ಥಾಪನೆಯ ಕಾರ್ಯಕ್ರಮ   

ಹೊಸಕೋಟೆ: ನಗರಕ್ಕೆ ಸಮೀಪ ಇರುವ ಯಲಚಹಳ್ಳಿ ಕೆರೆ ಅಂಗಳದಲ್ಲಿ ಪಿಎಂ ಕುಸುಮ್‌- ಸಿ ಯೋಜನೆಯಡಿ ಸ್ಥಾಪಿಸಿರುವ ಸೌರ ಘಟಕವನ್ನು ಇಂಧನ ಸಚಿವ ಕೆ.ಜೆ.ಜಾರ್ಜ್‌ ಗುರುವಾರ ಉದ್ಘಾಟಿಸಿದರು.

ಈ ಘಟಕದಲ್ಲಿ 7.3 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಆಗಲಿದ್ದು, ತಾಲೂಕಿನ ನಂದಗುಡಿ ಹೋಬಳಿಯ ಮುಗಬಾಳ ಗ್ರಾಮ ಪಂಚಾಯಿತಿಯ ಒಟ್ಟು 33 ಗ್ರಾಮಗಳ 1,383 ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ. ಯಲಚಹಳ್ಳಿಯ ಸೌರ ಘಟಕದಿಂದ ಒಟ್ಟು ನಾಲ್ಕು ಕೃಷಿ ಫೀಡರ್‌ಗಳು ಸೋಲಾರ್‌ ವಿದ್ಯುತ್‌ ವಿತರಣೆ ಜಾಲವಾಗಿ ಬದಲಾಗಲಿವೆ.

ಉದ್ಘಾಟನೆ ಬಳಿಕ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್‌, ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆ ಸಮರ್ಪಕ ವಿದ್ಯುತ್ ಪೂರೈಸಲು ಫೀಡರ್‌ ಮಟ್ಟದ ಸೌರೀಕರಣ ಯೋಜನೆ ‘ಕುಸುಮ್‌- ಸಿ’ಗೆ ವೇಗ ನೀಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಶಕ್ತಿ ತುಂಬಿದೆ. ಈ ಯೋಜನೆಯಿಂದ ರೈತರಿಗೆ ಏಳು ಗಂಟೆಗಳ ಕಾಲ ವಿದ್ಯುತ್‌ ಸರಬರಾಜು ಆಗುತ್ತದೆ. ಬೆಂಗಳೂರಿನ ಗೇಟ್‌ವೇ ಎನಿಸಿಕೊಂಡಿರುವ ಹೊಸಕೋಟೆ ಗ್ರಾಮೀಣ ಭಾಗದ ರೈತರಿಗೆ ಕುಸಿಮ್‌ ಸಿ ಯೋಜನೆ ವರದಾನವಾಗಲಿದೆ ಎಂದು ತಿಳಿಸಿದರು.

ADVERTISEMENT

ಜಾಗದ ಲೆಕ್ಕಾಚಾರ ಹೇಗೆ ?:

ಸರ್ಕಾರಿ ಭೂಮಿ ಲಭ್ಯವಿರದ ಸ್ಥಳಗಳಲ್ಲಿ ರೈತರೇ ಭೂಮಿಯನ್ನು ಗುತ್ತಿಗೆ ನೀಡುವ ಮೂಲಕ ವಾರ್ಷಿಕ ಆದಾಯಗಳಿಸಬಹುದು. ಕುಸುಮ್‌ ಸಿ ಯೋಜನೆಯಡಿ ಸೌರ ಘಟಕ ಆರಂಭಿಸುವವರು ಪ್ರತಿ ಎಕರೆ ಭೂಮಿಗೆ ₹25 ಸಾವಿರ ಪಾವತಿಸಬೇಕು. ಆ ಮೊತ್ತವನ್ನು ಜಿಲ್ಲಾಧಿಕಾರಿಗಳ ಬಳಿ ಇಡಬೇಕು. ಆ ಮೊತ್ತವನ್ನು ಉಪಕೇಂದ್ರ ಇರುವ ಗ್ರಾಮದ ಸರ್ಕಾರಿ ಶಾಲೆ, ಅಂಗನವಾಡಿಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಖಾಸಗಿ ಭೂಮಿಯಾಗಿದ್ದರೆ, ನವೀಕರಿಸಬಹುದಾದ ಇಂಧನ ಸೇವಾ ಕಂಪನಿಯ ಡೆವಲಪರ್‌ಗಳು ಗುತ್ತಿಗೆಗೆ ತೆಗೆದುಕೊಂಡು, ಭೂಮಾಲೀಕರಿಗೆ ಎಕರೆಗೆ ಕನಿಷ್ಠ ₹25,000 ಪರಿಹಾರ ನೀಡುತ್ತಾರೆ ಎಂದು ಹೇಳಿದರು.

ವಿದ್ಯುತ್‌ ಪೂರೈಕೆ ಹೇಗೆ?: 

ತಾಂತ್ರಿಕ ಸಾಧ್ಯತೆ ಇರುವ ವಿದ್ಯುತ್ ಉಪಕೇಂದ್ರಗಳ ಬಳಿ ಸೌರ ಘಟಕ ಸ್ಥಾಪಿಸಲಾಗುತ್ತದೆ. ಖಾಸಗಿಯವರು ಸೌರ ಘಟಕ ಸ್ಥಾಪಿಸಿ, ವಿದ್ಯುತ್ ಉತ್ಪಾದಿಸುತ್ತಾರೆ. ಅದನ್ನು ಸರ್ಕಾರ ಖರೀದಿಸಿ ಆಯಾ ಫೀಡರ್‌ಗಳ ವ್ಯಾಪ್ತಿಯ ಕೃಷಿ ಪಂಪ್‌ಸೆಟ್‌ಗಳಿಗೆ ಪೂರೈಸುತ್ತದೆ. ಹಗಲು ವೇಳೆ ಸೌರ ವಿದ್ಯುತ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವುದರಿಂದ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲೇ ಸಮರ್ಪಕ ವಿದ್ಯುತ್ ಲಭ್ಯವಾಗಲಿದೆ ಎಂದು ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು.

ಜಮೀನಿನಲ್ಲಿ ವಿದ್ಯುತ್‌ ಉತ್ಪಾದನೆ: 

ಕುಸುಮ್‌-ಸಿ ಜತೆಗೆ ಪಂಪ್‌ಸೆಟ್‌ಗೆ ಅಗತ್ಯ ಇರುವ ವಿದ್ಯುತ್ತ ಅನ್ನು ಜಮೀನಿನಲ್ಲೇ ಉತ್ಪಾದಿಸಲು ಪಿಎಂ ಕುಸುಮ್-ಬಿ ಯೋಜನೆ ನೆರವಾಗುತ್ತದೆ. ಕೇಂದ್ರ ಸರ್ಕಾರವು ಯೋಜನೆಗೆ ಶೇ 30ರಷ್ಟು ಸಹಾಯಧನ ಒದಗಿಸಿದರೆ, ರಾಜ್ಯ ಸರ್ಕಾರವು ಶೇ 50ರಷ್ಟು ಸಬ್ಸಿಡಿ ನೀಡುತ್ತಿದೆ. ಫಲಾನುಭವಿಗಳು ಶೇ 20 ರಷ್ಟನ್ನು ಭರಿಸಿದರೆ ಸಾಕು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದರು.

ಶಾಲಾ ಕಟ್ಟಡದ ಶಂಕು ಸ್ಥಾಪನೆ: 

ಇದೇ ವೇಳೆ ಸಚಿವ ಕೆ.ಜೆ.ಜಾರ್ಜ್ ಅವರು ವೋಲ್ವೊದ ಸಿಎಸ್‌ಆರ್‌ ನಿಧಿ ₹3.5 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ತಾವರೆಕೆರೆಯ ಸರ್ಕಾರಿ ಶಾಲಾ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶಂಕರ್, ವೋಲ್ವೋ ಸಂಸ್ಥೆಯ ಸಿಎಸ್ಆರ್ ಮುಖ್ಯಸ್ಥರಾದ ಜಿ. ವಿ. ರಾವ್, ತಹಶೀಲ್ದಾರ್ ಸೋಮಶೇಖರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿಗಂಗಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಿಯಾಂಕ ರಮೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ್, ಮಾಜಿ ಅಧ್ಯಕ್ಷ ರವಿಕುಮಾರ್, ಸುಭಾಷ್ ಗೌಡ, ಪವಿತ್ರ ಮಂಜುನಾಥ್, ಸುಧಾಕರ್, ಯಳಚಹಳ್ಳಿ ದೇವರಾಜ್, ಗುರುಬಸಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.