ADVERTISEMENT

ಹೆನ್ನಾಗರ ಗ್ರಾ.ಪಂನಲ್ಲಿ ಅತ್ಯಾಧುನಿಕ ಸೌಲಭ್ಯ

ಒಂದೇ ಸೂರಿನಡಿ ಹಲವು ಸೌಲಭ್ಯ * ವಾರ್ಷಿಕ ₹6.5 ಕೋಟಿಗೂ ಹೆಚ್ಚು ಆದಾಯ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 19:45 IST
Last Updated 29 ಜೂನ್ 2019, 19:45 IST
ಹೆನ್ನಾಗರ ಗ್ರಾಮ ಪಂಚಾಯಿತಿ ನೂತನ ಕಟ್ಟಡದ ನೋಟ
ಹೆನ್ನಾಗರ ಗ್ರಾಮ ಪಂಚಾಯಿತಿ ನೂತನ ಕಟ್ಟಡದ ನೋಟ   

ಆನೇಕಲ್: ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಯೇ ವಿಧಾನಸೌಧವಿದ್ದಂತೆ. ತಾಲ್ಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿ ಕಟ್ಟಡ ಅಂದಾಜು ₹2ಕೋಟಿ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿದ್ದು 450ಕ್ಕೂ ಹೆಚ್ಚು ಸೇವೆಗಳು ಒಂದೇ ಸೂರಿನಡಿ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ನೂತನ ಕಟ್ಟಡ ಜೂನ್‌ 30ರಂದು ಭಾನುವಾರ ಲೋಕಾರ್ಪಣೆಗೊಳ್ಳಲಿದೆ.

ಹೆನ್ನಾಗರ ಗ್ರಾಮ ಪಂಚಾಯಿತಿ ತಾಲ್ಲೂಕಿನ ಪ್ರಮುಖ ಗ್ರಾಮ ಪಂಚಾಯಿತಿ. ವಾರ್ಷಿಕ ₹6.5ಕೋಟಿಗೂ ಹೆಚ್ಚು ಆದಾಯ ಹೊಂದಿದೆ. ಕಾರ್ಪೋರೇಟ್ ಕಚೇರಿಯಂತೆ ನಿರ್ಮಿಸಿ ಎಲ್ಲಾ ಸೌಲಭ್ಯಗಳು ಒಂದೇ ಸೂರಿನಡಿ ಸಿಗುವಂತೆ ಮಾಡಬೇಕೆಂಬ ಕನಸು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಕೆ.ಕೇಶವರೆಡ್ಡಿ ಅವರದ್ದು. ಈ ಕನಸು ಸಾಕಾರಗೊಳಿಸಿ ತಮ್ಮ ಅವಧಿಯಲ್ಲಿಯೇ ಜನರಿಗೆ ನೀಡಬೇಕೆಂಬ ಅಭಿಲಾಷೆಯಿಂದ ಅತ್ಯಂತ ಸುಂದರ ಹಾಗೂ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ₹1.37ಕೋಟಿ ಹಣವನ್ನು ಪಂಚಾಯಿತಿಯಿಂದ ಭರಿಸಿದರೆ ಉಳಿದ ಹಣವನ್ನು ದಾನಿಗಳು, ಕಂಪನಿಗಳ ಸಾಮಾಜಿಕ ಜವಾಬ್ದಾರಿಯಡಿ (ಸಿಎಸ್‌ಆರ್‌)ನಿಂದ ಪಡೆದು ಅತ್ಯಂತ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ.

ವಿಶಾಲವಾದ ಸಭಾಂಗಣ, ಎಲ್ಲಾ ಸದಸ್ಯರಿಗೂ ಚರ್ಚೆಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಇದೆ. ಮೈಕ್ ವ್ಯವಸ್ಥೆ, ವೈ-ಫೈ, ಇಂಟರ್‌ಕಾಮ್‌ ಸೇರಿದಂತೆ ಎಲ್ಲಾ ಸೌಲಭ್ಯಗಳು ಸಭಾಂಗಣದಲ್ಲಿ ದೊರೆಯುವಂತೆ ಮಾಡಲಾಗಿದೆ. ಸಂಪೂರ್ಣ ಕಟ್ಟಡಕ್ಕೆ ಸೌರಶಕ್ತಿ ಮೂಲಕ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಮಳೆನೀರು ಸಂಗ್ರಹ ಪದ್ಧತಿ, ಕಟ್ಟಡ ಮುಂಭಾಗದಲ್ಲಿ ಅಮರ್ ಜವಾನ್ ಸ್ಮಾರಕ ಹಾಗೂ ಉದ್ಯಾನ ನಿರ್ಮಿಸಲಾಗಿದೆ. ಕಚೇರಿಗೆ ಬರುತ್ತಿದ್ದಂತೆ ಒಂದು ಸುಂದರ ಪರಿಸರ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಕಚೇರಿಗೆ ಬಂದವರಿಗೆ ಕುಳಿತುಕೊಳ್ಳಲು ಸುಸಜ್ಜಿತ ವ್ಯವಸ್ಥೆ, ಅಧಿಕಾರಿ-ಸಿಬ್ಬಂದಿಗೆ ಹೈಟೆಕ್‌ ಸೌಲಭ್ಯ ಕಲ್ಪಿಸಲಾಗಿದೆ. ಕಚೇರಿ ಒಂದು ಭಾಗವನ್ನು ಕೌಶಲ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿರುದ್ಯೋಗಿಗಳಿಗೆ ಹೊಲಿಗೆ, ಮೊಬೈಲ್ ರಿಪೇರಿ, ವಾಹನ ಚಾಲನಾ ತರಬೇತಿ ಕೇಂದ್ರ ತೆರೆಯಲು ಸಿದ್ಧತೆ ನಡೆದಿದೆ.

ಕಚೇರಿ ಪ್ರವೇಶಿಸುತ್ತಿದ್ದಂತೆಯೇ ಮಿನಿ ವಿಧಾನಸೌಧಕ್ಕೆ ತೆರಳಿದ ಅನುಭವ ಆಗುತ್ತದೆ. ಇಲ್ಲಿನ ಸಾಮಾನ್ಯ ಸೇವಾ ಕೇಂದ್ರದಲ್ಲಿ ಪಾಸ್‌ಪೋರ್ಟ್‌, ರೈಲು ಟಿಕೆಟ್ ಕಾಯ್ದಿರಿಸುವುದು, ವಿಮಾನ ಟಿಕೆಟ್, ಮಣ್ಣಿನ ಪರೀಕ್ಷೆ, ಬೆಳೆ ವಿಮೆ, ಡಿಎಲ್‌, ಎಲ್‌ಎಲ್ ಗಳಿಗೆ ಅರ್ಜಿ ಸಲ್ಲಿಸಲು ವ್ಯವಸ್ಥೆ, ಪಿಂಚಣಿ ಯೋಜನೆಗೆ ಅರ್ಜಿ, ಪಡಿತರ ಚೀಟಿ, ಮೊಬೈಲ್-ಡಿಟಿಎಚ್‌ಗಳ ರಿಚಾರ್ಚ್, ಕೆಇಬಿ ಬಿಲ್‌ ಸೇರಿದಂತೆ ಎಲ್ಲಾ ಸೌಲಭ್ಯಗಳಿಗೆ ಜನರು ಒಂದೇ ಸೂರಿನಡಿ ಸೌಲಭ್ಯ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಇದೊಂದು ಮಾದರಿ ಪಂಚಾಯಿತಿಯಾಗಿದ್ದು ಜನರಲ್ಲಿ ಆಶಾ ಭಾವನೆ ಮೂಡಿಸಿದೆ.

ಗ್ರಾಮಗಳಲ್ಲಿ ರಸ್ತೆ, ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ, ಕಸ ನಿರ್ವಹಣೆಯನ್ನು ಸಾಮಾನ್ಯವಾಗಿ ಜನರು ಪಂಚಾಯಿತಿಗಳಿಂದ ನಿರೀಕ್ಷಿಸುತ್ತಾರೆ. ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 8 ಗ್ರಾಮಗಳಲ್ಲಿ ಈ ಎಲ್ಲಾ ಸೌಲಭ್ಯಗಳನ್ನು ಸುಸಜ್ಜಿತವಾಗಿ ನೀಡಿದ ತೃಪ್ತಿ ಇರುವುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಕೆ.ಕೇಶವರೆಡ್ಡಿ ಅಭಿ‍ಪ್ರಾಯಪಟ್ಟರು.

ಗ್ರಾಮಗಳಲ್ಲಿನ ಬೀದಿದೀಪ ವ್ಯವಸ್ಥೆ ಸಮಸ್ಯೆ ಪರಿಹಾರಕ್ಕಾಗಿ ಐವಿಆರ್‌ಎಸ್‌ (ಇನ್ಟಿಗ್ರೇಟೆಡ್ ವಾಯ್ಸ್‌ ರೆಸ್ಪೋನ್ಸ್‌ ಸಿಸ್ಟಮ್‌) ಅಳವಡಿಸಲಾಗಿದ್ದು ಗ್ರಾಮಸ್ಥರು 6364718722 ಸಂಖ್ಯೆಗೆ ದೂರು ನೀಡಿದರೆ ಕೇವಲ ಎರಡು ದಿನಗಳಲ್ಲಿ ಬೀದಿ ದೀಪ ಸರಿಪಡಿಸುವ ವ್ಯವಸ್ಥೆ ರೂಪಿಸಲಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ನಿರ್ವಹಣೆಗೆ ಏಳು ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ವಾಹನಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಿದ್ದು ಯಾವ ಗ್ರಾಮದಲ್ಲಿ ಕೆಲಸ ನಡೆಯುತ್ತಿದೆ ಎಂಬುದನ್ನು ಕಚೇರಿಯಿಂದಲೇ ಮಾನಿಟರ್ ಮಾಡುವ ವ್ಯವಸ್ಥೆ ರೂಪಿಸಲಾಗಿದೆ.

ಪಂಚಾಯಿತಿ ಆದಾಯದ ಮೂಲ ತೆರಿಗೆ. ತೆರಿಗೆ ಪರಿಷ್ಕರಣೆ ಮಾಡಿ ಪ್ರತಿ ಆಸ್ತಿ ಮಾಲೀಕರಿಗೂ ತೆರಿಗೆ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಿದ್ದರಿಂದ ಹಾಗೂ ತೆರಿಗೆ ಕಟ್ಟಬೇಕಾದ ದಿನಗಳ ಬಗ್ಗೆ ಜಾಗೃತಿ ಮೂಡಿಸಿದ್ದರಿಂದ ವಸೂಲಾತಿಯಲ್ಲಿ ಹೆಚ್ಚಳ ಉಂಟಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ತುಳಸೀನಾಥ್ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜಾಪುರ ಹೊರತುಪಡಿಸಿ ಎಲ್ಲಾ ಗ್ರಾಮಗಳಲ್ಲೂ ಒಳಚರಂಡಿ ವ್ಯವಸ್ಥೆ ಇದೆ. ಈ ಗ್ರಾಮದಲ್ಲಿ ಗೃಹ ಮಂಡಳಿ ಮೂಲಕ ಒಳಚರಂಡಿ ಕಾಮಗಾರಿ ಪ್ರಾರಂಭವಾಗಲಿದೆ. ಇದನ್ನು ಹೊರತುಪಡಿಸಿ ಎಲ್ಲಾ ಗ್ರಾಮಗಳಲ್ಲೂ ಒಳಚರಂಡಿ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಎಲ್ಲಾ ಗ್ರಾಮಗಳಲ್ಲೂ ತೆರೆಯಲಾಗಿದೆ. ಒಟ್ಟು 13 ಘಟಕಗಳು ಪಂಚಾಯಿತಿ ನಿರ್ವಹಣೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಎಲ್ಲರಿಗೂ ಶುದ್ಧ ಕುಡಿಯುವ ನೀರು ಸಿಗುವಂತೆ ಮಾಡುವುದು ಪಂಚಾಯಿತಿ ಧ್ಯೇಯ ಎಂದು ಕೇಶವರಡ್ಡಿ ಅಭಿಪ್ರಾಯಪಟ್ಟರು.

ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 20 ಅಂಗನವಾಡಿ ಕೇಂದ್ರಗಳಿದ್ದು 15 ಕೇಂದ್ರಗಳಿಗೆ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಿಕೊಡಲಾಗಿದೆ. ಹೊಸಹಳ್ಳಿ, ಕಾಚನಾಯಕನಹಳ್ಳಿ, ಹೆನ್ನಾಗರ, ಮಾಸ್ತೇನಹಳ್ಳಿ ಸರ್ಕಾರಿ ಶಾಲೆಗಳಿಗೂ ಸಿಎಸ್‌ಆರ್‌ ನಿಧಿಯಿಂದ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಅತ್ಯುತ್ತಮ ಹಾಗೂ ಸೌಲಭ್ಯಗಳನ್ನು ಕಲ್ಪಿಸಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ.

ಹೆನ್ನಾಗರ ಸರ್ಕಾರಿ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶೇ.93ರಷ್ಟು ಸಾಧನೆ ಮಾಡಿದ್ದು ತಾಲ್ಲೂಕಿಗೆ ಪ್ರಥಮ ಸ್ಥಾನದಲ್ಲಿದೆ. ಕಾಚನಾಯಕನಹಳ್ಳಿಯಲ್ಲಿ ಸರ್ಕಾರಿ ಶಾಲೆಗಾಗಿ 3ಎಕರೆ, ಆಸ್ಪತ್ರೆಗಾಗಿ 1.5ಎಕರೆ, ಗ್ರಂಥಾಲಯಕ್ಕಾಗಿ 15ಗುಂಟೆ ಜಮೀನು ಮಂಜೂರಾಗಿದೆ. ಪಂಚಾಯಿತಿಯಲ್ಲಿ 73 ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿದ್ದು ವಿದ್ಯುತ್ ಬಿಲ್‌ ಸಂಪೂರ್ಣ ₹68 ಲಕ್ಷ ಪಾವತಿ ಮಾಡಲಾಗಿದ್ದು ಯಾವುದೇ ಬಾಕಿಯಿಲ್ಲದಂತೆ ನಿರ್ವಹಿಸಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡರು.

ಮದುವಣಗಿತ್ತಿಯಂತೆ ಶೃಂಗಾರ
ಹೆನ್ನಾಗರ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆಗೆ ಗ್ರಾಮ ಮದುವಣಗಿತ್ತಿಯಂತೆ ಸಜ್ಜಾಗಿದೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ಕೃಷ್ಣಭೈರೇಗೌಡ, ಸಂಸದ ಡಿ.ಕೆ.ಸುರೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಮುನಿರಾಜು, ಶಾಸಕರಾದ ಎಂ.ಕೃಷ್ಣಪ್ಪ, ರಾಮಲಿಂಗಾರೆಡ್ಡಿ, ಬಿ.ಶಿವಣ್ಣ ಭಾಗವಹಿಸಲಿದ್ದಾರೆ.

ಅದಾಯ ಏರಿಕೆ
ಐದು ವರ್ಷಗಳ ಹಿಂದೆ ಹೆನ್ನಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗ ಪಂಚಾಯಿತಿ ಆದಾಯ ವಾರ್ಷಿಕ ₹55 ಲಕ್ಷ ಇದ್ದದ್ದು ಪ್ರಸ್ತುತ ₹6.40ಕೋಟಿಗೇರಿದೆ. ಸಂಸದರು, ಶಾಸಕರು ಹಾಗೂ ಸಚಿವರ ಸಹಕಾರ ಪಡೆದು ಕಳೆದ ಐದು ವರ್ಷಗಳಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ₹50ಕೋಟಿಗೂ ಹೆಚ್ಚು ಮೌಲ್ಯದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ.
–ಆರ್.ಕೆ.ಕೇಶವರೆಡ್ಡಿ , ಅಧ್ಯಕ್ಷರು, ಹೆನ್ನಾಗರ ಗ್ರಾಮ ಪಂಚಾಯಿತಿ

ಮಾದರಿ ಗ್ರಾಮ ಪಂಚಾಯಿತಿ
ಹೆನ್ನಾಗರ ಗ್ರಾಮ ಪಂಚಾಯಿತಿಯನ್ನು ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗಿದೆ.
–ಎ.ತುಳಸೀನಾಥ್‌. ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.