ADVERTISEMENT

ಭೂಸ್ವಾಧೀನ ಕೈಬಿಡಲು ರಾಜ್ಯ ಸರ್ಕಾರಕ್ಕೆ 24 ತಾಸು ಗಡುವು

ಅಹೋರಾತ್ರಿ ಹೋರಾಟಕ್ಕೆ ಮುಂದಾದ ರೈತರ ಬಂಧನ * ಪೊಲೀಸರ ಸರ್ಪಗಾವಲಿನಲ್ಲಿ ದೇವನಹಳ್ಳಿ ಚಲೋ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 23:55 IST
Last Updated 25 ಜೂನ್ 2025, 23:55 IST
ದೇವನಹಳ್ಳಿ ಹಳೆ ಬಸ್‌ ನಿಲ್ದಾಣದ ಮೈದಾನದಲ್ಲಿ ನಡೆದ 'ದೇವನಹಳ್ಳಿ ಚಲೋ'ದಲ್ಲಿ ಭಾಗವಹಿಸಿದ್ದ ಮುಖಂಡರು ಮತ್ತು ರೈತರು
ದೇವನಹಳ್ಳಿ ಹಳೆ ಬಸ್‌ ನಿಲ್ದಾಣದ ಮೈದಾನದಲ್ಲಿ ನಡೆದ 'ದೇವನಹಳ್ಳಿ ಚಲೋ'ದಲ್ಲಿ ಭಾಗವಹಿಸಿದ್ದ ಮುಖಂಡರು ಮತ್ತು ರೈತರು   

ದೇವನಹಳ್ಳಿ (ಬೆಂ.ಗ್ರಾಮಾಂತರ): ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಅಧಿಸೂಚನೆ ಕೈ ಬಿಡಲು ರೈತರು ರಾಜ್ಯ ಸರ್ಕಾರಕ್ಕೆ ಬುಧವಾರ 24 ತಾಸು ಗಡುವು ನೀಡಿದ್ದಾರೆ. 

ಭೂಸ್ವಾಧೀನ ವಿರೋಧಿಸಿ ಚನ್ನರಾಯಪಟ್ಟಣ ಹೋಬಳಿ ರೈತರು ಸಾವಿರಕ್ಕೂ ಹೆಚ್ಚು ದಿನಗಳಿಂದ ನಡೆಸುತ್ತಿರುವ ಹೋರಾಟ ಬೆಂಬಲಿಸಿ ಬುಧವಾರ ನಡೆದ ‘ದೇವನಹಳ್ಳಿ ಚಲೋ’ ವೇದಿಕೆಯಲ್ಲಿಯೇ ಅಹೋರಾತ್ರಿ ಹೋರಾಟಕ್ಕೆ ಮುಂದಾದ ರೈತ ಮುಖಂಡರನ್ನು ಪೊಲೀಸರು ವೇದಿಕೆಯಿಂದಲೇ ವಶಕ್ಕೆ ಪಡೆದು ಕರೆದೊಯ್ದರು. 

ಬುಧವಾರ ಸಂಜೆ ಹೋರಾಟ ವೇದಿಕೆಯಲ್ಲಿಯೇ ತುರ್ತುಸಭೆ ನಡೆಸಿದ ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರು ಅಹೋರಾತ್ರಿ ಹೋರಾಟದ ನಿರ್ಧಾರ ತೆಗೆದುಕೊಂಡರು.

ADVERTISEMENT

‘ಸರ್ಕಾರ ಬಂಧಿಸಲಿ ಜೈಲಿನಿಂದಲೇ ಹೋರಾಟ ಮುಂದುವರಿಸೋಣ. ಯಾರೂ ಜಾಮೀನು ತೆಗೆದುಕೊಳ್ಳುವುದು ಬೇಡ’ ಎಂದು ಒಮ್ಮತದ ನಿರ್ಣಯ ಕೈಗೊಂಡಿದ್ದರು. ಅಹೋರಾತ್ರಿ ಹೋರಾಟ ಕೈಬಿಡುವಂತೆ ಪೊಲೀಸರು ಹೋರಾಟಗಾರರ ಮನವೊಲಿಸಲು ಮುಂದಾದರು. ಆ ಪ್ರಯತ್ನ ವಿಫಲವಾದಾಗ ರೈತರು ಮತ್ತು ಹೋರಾಟಗಾರರನ್ನು ವಶಕ್ಕೆ ಪಡೆದರು.

‘ಅನ್ನದಾತರ ಕುಲವನ್ನೇ ಹಾಳು ಮಾಡುತ್ತಿದ್ದೀರಿ. ದೇವನಹಳ್ಳಿಯಲ್ಲಿ ಪ್ರತಿಭಟನೆ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲವೆಂದಾದರೆ ಆ ಕಾನೂನು ಮುರಿಯಲೆಂದೇ ನಾವು ಇಲ್ಲಿ ಬಂದಿದ್ದೇವೆ’ ಎಂದು ರೈತ ಹೋರಾಟಗಾರರು ಘೋಷಣೆ ಕೂಗಿದರು. 

ಇದಕ್ಕೂ ಮೊದಲು ಭಾರಿ ಪೊಲೀಸ್‌ ಭದ್ರತೆ ನಡುವೆಯೇ ಪಟ್ಟಣದ ಹಳೆ ಬಸ್‌ ನಿಲ್ದಾಣದ ಮೈದಾನದಲ್ಲಿ ರೈತರ ಬೃಹತ್‌ ಸಮಾವೇಶಕ್ಕೆ ಚಾಲನೆ ದೊರೆಯಿತು.

ಭೂ ಸ್ವಾಧೀನ ವ್ಯಾಪ್ತಿಯ 13  ಹಳ್ಳಿಗಳ ಭೂಮಿಯ ಮಣ್ಣು ತಂದು ವೇದಿಕೆಯ ಮುಂಭಾಗ ಸುರಿದ ರೈತ ಮಹಿಳೆಯರು 'ನಮ್ಮ ಭೂಮಿ ನಮಗೆ ಬಿಡಿ' ಎಂದು ಘೋಷಣೆ ಕೂಗಿ ಹೋರಾಟಕ್ಕೆ ಚಾಲನೆ ನೀಡಿದರು. 

ರೈತರ ತಂಟೆಗೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತೀರಿ– ಪ್ರಕಾಶ್ ರಾಜ್‌

‘ರೈತರಿಂದ ಧಿಕ್ಕಾರ ಕೂಗಿಸಿಕೊಂಡು ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿಗೆ ಕಾಂಗ್ರೆಸ್‌ ಸರ್ಕಾರ ಹೋಗಬಾರದು. ನಮ್ಮ ಭೂಮಿ ಬಿಟ್ಟು ಬದುಕಲು ಬಿಡಿ ಎಂಬ ರೈತರ ಕೂಗು ಸಿಎಂ ಸಿದ್ದರಾಮಯ್ಯರಿಗೆ ಕೇಳಿಸುತ್ತಿಲ್ಲವೇ? ಕಿವಿ ಹೃದಯ ಮನಸ್ಸಾಕ್ಷಿ ಇಲ್ಲವೇ? ಅಹಿಂದ ಜನಪರ ರೈತರ ಪರ ಅಂತೀರಿ. ವಿರೋಧ ಪಕ್ಷದ ನಾಯಕರಾಗಿದ್ದಾಗ ಇದೇ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತು ಕೊಟ್ಟಿದ್ದೀರಿ ತಾನೇ? ಮಾತಿಗೆ ಬದ್ಧರಾಗಿ ನಿಲ್ಲುತ್ತೀರಾ ಇಲ್ಲ ಕೊಟ್ಟ ಮಾತು ತಪ್ಪುತ್ತೀರಾ’ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್‌ ಪ್ರಶ್ನಿಸಿದರು.

‘ಕಿವಿ ಕೇಳುತ್ತಿಲ್ಲವೇ’

‘ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪನವರೆ ನಿಮಗೆ ಕಿವಿ ಕೇಳುತ್ತಿಲ್ಲವೇ. ಏನಾಗಿದೆ ನಿಮಗೆ? 13 ಹಳ್ಳಿಗಳ ಹೆಣ್ಣುಮಕ್ಕಳು ಅಲ್ಲಿಯ ಮಣ್ಣು ತಂದು ಗಿಡಕ್ಕೆ ಹಾಕಿ ನಾವು ಮಣ್ಣು ಮಾರುವುದಿಲ್ಲ ಎಂದು ಹೇಳುತ್ತಿದ್ದಾರೆ. ರೈತರು ಬಾಯಿ ಬಡೆದುಕೊಳ್ಳುತ್ತಿದ್ದಾರೆ. ಇದೆಲ್ಲಾ ಬೇಕಾ ಸಿದ್ದರಾಮಣ್ಣ ನಿಮಗೆ? ಕರ್ನಾಟಕದ ರೈತರ ಬಾಯಿಯಿಂದ ಧಿಕ್ಕಾರ ಕೂಗಿಸಿಕೊಳ್ಳುವ ಪರಿಸ್ಥಿತಿಗೆ ಬರಬೇಕಾ ನೀವು’ ಎಂದು ತರಾಟೆಗೆ ತೆಗೆದುಕೊಂಡರು.

'ಭೂಮಿ ತಂಟೆಗೆ ಬಂದ ಯಾವ ಸರ್ಕಾರಗಳೂ ಉಳಿದಿಲ್ಲ ಉಳಿಯಲ್ಲ. ಜನರ ಬದುಕು ಮತ್ತು ಪರಿಸರ ಹಾಳು ಮಾಡುವ ನಿಮ್ಮ ಯೋಜನೆಗಳಿಗೆ ನಮ್ಮ ವಿರೋಧವಿದೆ' ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಗುಡುಗಿದರು.

'ಭೂಸ್ವಾಧೀನ ಅಧಿಸೂಚನೆ ರದ್ದು ಮಾಡಿದರೆ ನಾವು ಊರಿನಲ್ಲಿ ಇರುತ್ತೇವೆ. ಇಲ್ಲದಿದ್ದರೇ ಜೈಲಲ್ಲಿ ಇರುತ್ತೇವೆ. ಸಾಮಾನ್ಯ ಜನರು ಕಟ್ಟಿರುವ ಹೋರಾಟವಿದು. ಒಂದು ವೇಳೆ ಈ ಹೋರಾಟ ಸೋತರೆ ಈ ನಾಡಿನ ರೈತಕಾರ್ಮಿಕ ದಲಿತ ಚಳವಳಿ ಮಹಿಳೆಯರ ಮತ್ತು ದುಡಿಯುವ ವರ್ಗದ ಸೋಲಾದಂತೆ ಎಂದು ದಸಂಸ ಮುಖಂಡ ಕಾರಹಳ್ಳಿ ಶ್ರೀನಿವಾಸ್ ಕಳವಳ ವ್ಯಕ್ತಪಡಿಸಿದರು.

‘ದೇವನಹಳ್ಳಿ ಚಲೋ’ದಲ್ಲಿ ಭಾಗವಹಿಸಿದ್ದ ಹೋರಾಟಗಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.