ADVERTISEMENT

ದೇವನಹಳ್ಳಿ: 22ಕ್ಕೆ ಕೇಂದ್ರದ ವಿರುದ್ಧ ಹೋರಾಟ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 3:47 IST
Last Updated 18 ಮಾರ್ಚ್ 2021, 3:47 IST
ಪತ್ರಿಕಾಗೋಷ್ಠಿಯಲ್ಲಿ ವೀರಣ್ಣ, ಹನುಮಂತರಾಯಪ್ಪ ಉಪಸ್ಥಿತರಿದ್ದರು
ಪತ್ರಿಕಾಗೋಷ್ಠಿಯಲ್ಲಿ ವೀರಣ್ಣ, ಹನುಮಂತರಾಯಪ್ಪ ಉಪಸ್ಥಿತರಿದ್ದರು   

ದೇವನಹಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಜನ ವಿರೋಧಿ ಕಾಯ್ದೆ ವಿರೋಧಿಸಿ ಮಾರ್ಚ್‌ 22ರಂದು ಮೆರವಣಿಗೆ ಮೂಲಕ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್. ವೀರಣ್ಣ ಹೇಳಿದರು.

ಇಲ್ಲಿನ ಪ್ರಾಂತ ರೈತ ಸಂಘದ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ, ಕಾರ್ಮಿಕ ವಿರೋಧಿ ಕೃಷಿ ಕಾಯ್ದೆಗಳು ಹಾಗೂ ಕಾರ್ಮಿಕ ಸಂಹಿತೆಗಳ ರದ್ದತಿಗೆ ಆಗ್ರಹಿಸಲಾಗುವುದು. ಆಹಾರ, ಉದ್ಯೋಗ, ಭೂ ಹಕ್ಕು ರಕ್ಷಣೆ, ಬೆಲೆ ಏರಿಕೆ ಹಾಗೂ ಖಾಸಗೀಕರಣದಿಂದಾಗಿರುವ ದುಷ್ಪರಿಣಾಮಗಳನ್ನು ವಿರೋಧಿಸಿ ವಿಧಾನಸೌಧ ಚಲೋ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರಗಳು ಒಂದೆಡೆ ಜನಸಾಮಾನ್ಯರ ಆಶಯಗಳಿಗೆ ವಿರುದ್ಧವಾದ ಕಾನೂನು ಜಾರಿ ಮಾಡುತ್ತಿವೆ. ಮತ್ತೊಂದೆಡೆ ಜನರ ಸಂವಿಧಾನಾತ್ಮಕ ಹಕ್ಕುಗಳನ್ನು ಧಮನಿಸುತ್ತಿವೆ. ರಾಜರ ಆಡಳಿತದಲ್ಲಿ ರೈತರ ಭೂಮಿ ಕಸಿದು ರಾಜಪರಿವಾರಗಳಿಗೆ ನೀಡುತ್ತಿದ್ದರು. ಇಂದಿನ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಭೂಮಿಯನ್ನು ಅಂಬಾನಿ, ಅದಾನಿ ಸೇರಿದಂತೆ ವಿದೇಶಿಯ ಕಂಪನಿಗಳ ಕೈಗೆ ನೀಡುತ್ತಿದೆ ಎಂದು ದೂರಿದರು.

ADVERTISEMENT

ಆರ್ಥಿಕ ಮುಗ್ಗಟ್ಟು ಹಾಗೂ ಲಾಕ್‌ಡೌನ್ ಸಂಕಷ್ಟಗಳಿಗೆ ಸಿಲುಕಿರುವ ಜನತೆಯ ಮೇಲೆ ಅಪಾರವಾದ ತೆರಿಗೆ ಭಾರ ಹೊರಿಸಿ ಜೀವಂತ ಶವವನ್ನಾಗಿ ಮಾಡಲಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್, ದಿನಸಿ, ಸಾರಿಗೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಖಾಸಗಿ ಕಂಪನಿಗಳಿಗೆ ಸುಲಿಗೆ ಮಾಡಲು ಅವಕಾಶ ಮಾಡಿಕೊಟ್ಟ ಪರಿಣಾಮ ಆದಾಯ ಪ್ರಮಾಣ ಕುಸಿಯುತ್ತಿದೆ. ಹೀಗಾದರೆ ಜನಸಾಮಾನ್ಯರು ಜೀವನ ನಡೆಸುವುದಾದರು ಹೇಗೆ, ಒಗ್ಗಟ್ಟಿನಿಂದ ಹೋರಾಡಿ ನಮ್ಮ ಬದುಕನ್ನು ಉತ್ತಮ ಪಡಿಸುವ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಗಳ ಮೇಲೆ ಒತ್ತಡ ಹೇರಬೇಕಾಗಿದೆ ಎಂದರು.

ಪ್ರಾಂತ ರೈತ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಹನುಮಂತರಾಯಪ್ಪ, ಕಾರ್ಯದರ್ಶಿ ಗುರುಲಿಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.