ADVERTISEMENT

ಕುಂಬಾರನಹಳ್ಳಿಯಲ್ಲಿ ಸುಗ್ಗಿ ಸಂಭ್ರಮ; ಗಮನ ಸೆಳೆದ ರಾಸುಗಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2025, 14:24 IST
Last Updated 27 ಜನವರಿ 2025, 14:24 IST
ಆನೇಕಲ್ ತಾಲ್ಲೂಕಿನ ಕುಂಬಾರನಹಳ್ಳಿಯಲ್ಲಿ ಕರ್ನಾಟಕ ಪ್ರದೇಶ ಭಾರತೀಯ ಕಿಸಾನ್ ಸಂಘ ಆಯೋಜಿಸಿದ್ದ ಸುಗ್ಗಿ ಹಬ್ಬದಲ್ಲಿ ಮಹಿಳೆಯರು ದವಸ ಧಾನ್ಯಗಳಿಗೆ ಪೂಜೆ ಸಲ್ಲಿಸಿದರು
ಆನೇಕಲ್ ತಾಲ್ಲೂಕಿನ ಕುಂಬಾರನಹಳ್ಳಿಯಲ್ಲಿ ಕರ್ನಾಟಕ ಪ್ರದೇಶ ಭಾರತೀಯ ಕಿಸಾನ್ ಸಂಘ ಆಯೋಜಿಸಿದ್ದ ಸುಗ್ಗಿ ಹಬ್ಬದಲ್ಲಿ ಮಹಿಳೆಯರು ದವಸ ಧಾನ್ಯಗಳಿಗೆ ಪೂಜೆ ಸಲ್ಲಿಸಿದರು   

ಆನೇಕಲ್: ಕರ್ನಾಟಕ ಪ್ರದೇಶ ಭಾರತೀಯ ಕಿಸಾನ್‌ ಸಂಘ ತಾಲ್ಲೂಕಿನ ಹಾರಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರನಹಳ್ಳಿಯಲ್ಲಿ ಭಾನುವಾರ ಸುಗ್ಗಿ ಹಬ್ಬ ಸಂಭ್ರಮ ಆಯೋಜಿಸಿತ್ತು.

ಗೋಪೂಜೆ ಮತ್ತು ಧಾನ್ಯದ ರಾಶಿ ಪೂಜೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ರಾಸುಗಳಿಗೆ ಪೂಜೆ ಮಾಡುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ರೈತ ಸಮಾಜದ ಸಾಂಸ್ಕೃತಿಕ ಉತ್ಸವ ಹಬ್ಬಕ್ಕೆ ಮೆರಗು ನೀಡಿತು. ತಾಲ್ಲೂಕಿನ ವಿವಿಧ ಭಾಗದ ರೈತರು ರಾಸು ಮೆರವಣಿಗೆ ಮತ್ತು ಗ್ರಾಮೀಣ ಕ್ರೀಡೆಗಳಲ್ಲಿ ಸಂಭ್ರಮದಿಂದ ಪಾಲ್ಗೊಂಡರು.

ADVERTISEMENT

ಗೋಪೂಜೆ, ರಾಶಿ ಪೂಜೆ, ಕೋಲಾಟ, ಭಜನೆ, ಗ್ರಾಮೀಣ ಕ್ರೀಡೆ, ರಂಗೋಲಿ ಸ್ಪರ್ಧೆ ಮತ್ತು ಎತ್ತುಗಳ ಮೆರವಣಿಗೆ ಸುಗ್ಗಿ ಸಂಭ್ರವನ್ನು ಹೆಚ್ಚಿಸಿತು. ಪರಸ್ಪರ ಎಳ್ಳು ಬೆಲ್ಲ ಮತ್ತು ಶುಭಾಶಯ ವಿನಿಮಯ ಮಾಡಿಕೊಂಡರು.

ಕುಂಬಾರನಹಳ್ಳಿಯ ಪ್ರಮುಖ ಬೀದಿಗಳಲ್ಲಿ ನಡೆದ ರಾಸುಗಳ ಮೆರವಣಿಗೆ ಗಮನ ಸೆಳೆಯಿತು. 50ಕ್ಕೂ ಹೆಚ್ಚು ಜೊತೆ ರಾಸುಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

‘ಸುಗ್ಗಿ ಹಬ್ಬದ ಮೂಲಕ ನಮ್ಮ ಸಂಸ್ಕೃತಿ ಮತ್ತು ಆಚರಣೆಯನ್ನು ಯುವಕರಿಗೆ ತಿಳಿಸುವ ಅವಶ್ಯಕತೆ ಇದೆ. ನಗರೀಕರಣ ಪ್ರಭಾವದಿಂದ ಹಬ್ಬಗಳ ಆಚರಣೆ ಕಡಿಮೆಯಾಗುತ್ತಿರುವ ಸಮಯದಲ್ಲಿ ಈ ಸುಗ್ಗಿ ಹಬ್ಬ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಭಾರತೀಯ ಕಿಸಾನ್‌ ಸಂಘದ ದಕ್ಷಿಣ ಪ್ರಾಂತ್ಯ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ ತಿಳಿಸಿದರು.

ಭೂಮಿ ತಾಯಿ ಆಶೀರ್ವಾದದಿಂದ ರೈತರು ಮಾನವ ಸಂಕುಲಕ್ಕೆ ಅನ್ನ ನೀಡುವ ಶಕ್ತಿ ಪಡೆದಿದ್ದಾರೆ. ಹಾಗಾಗಿ ಭೂತಾಯಿಗೆ ನಮನ ಸಲ್ಲಿಸಬೇಕಾದುದ್ದು ನಮ್ಮ ಜವಾಬ್ದಾರಿ. ರೈತರು ಗುಣಮಟ್ಟದ ತರಕಾರಿ, ಹಣ್ಣು, ಧಾನ್ಯಗಳನ್ನು ಬೆಳೆಯುವ ಮೂಲಕ ಆರೋಗ್ಯಯುಕ್ತ ಸಮಾಜದ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದ್ದಾರೆ. ರೈತರ ನಡುವೆ ಸಾಮರಸ್ಯ ಮೂಡಿಸುವ ಸಲುವಾಗಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥ್‌ ಹೇಳಿದರು.

ಭಾರತೀಯ ಕಿಸಾನ್‌ ಸಂಘದ ರಾಜ್ಯ ಖಜಾಂಚಿ ಜವರಾಯಿಗೌಡರು, ತಾಲ್ಲೂಕು ಕಾರ್ಯದರ್ಶಿ ಕೆ.ಎನ್‌.ಮಂಜುನಾಥ, ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ್‌ ರೆಡ್ಡಿ, ಪದಾಧಿಕಾರಿಗಳಾದ ಪುಟ್ಟಮ್ಮ, ಅಮೃತಮ ಸುಬ್ರಮಣಿ, ಅಶ್ವಿನ್‌, ಸ್ವರೂಪ್‌, ಶಿವಕುಮಾರ್‌, ಅಶೋಕ್‌, ಮಂಜುನಾಥರೆಡ್ಡಿ, ವೆಂಕಟಸ್ವಾಮಿರೆಡ್ಡಿ, ಬಾಬು ಇದ್ದರು.

ಸುಗ್ಗಿ ಹಬ್ಬದಲ್ಲಿ ಮಕ್ಕಳಿಂದ ಕೋಲಾಟ
ಸುಗ್ಗಿ ಹಬ್ಬ ಪ್ರಯುಕ್ತ ರಾಸುಗಳ ಮೆರವಣಿಗೆ ನಡೆಯಿತು
ಸುಗ್ಗಿ ಹಬ್ಬ ಪ್ರಯುಕ್ತ ರಂಗೋಲಿ ಬಿಡಿಸುವಲ್ಲಿ ನಿರತರಾಗಿರುವ ಮಹಿಳೆಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.