ಹೊಸಕೋಟೆ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೂಗಳತೆ ದೂರದಲ್ಲಿರುವ ಸೂಲಿಬೆಲೆ ಹೋಬಳಿ ಕೇಂದ್ರ ಅಭಿವೃದ್ಧಿ ಇಲ್ಲದೆ ಸೊರಗಿದೆ.
ಸೂಲಿಬೆಲೆಯ ಎಲ್ಲಿ ನೋಡಿದರೂ ಕಸ ಕಾಣುತ್ತದೆ. ಕೆರೆ ದಂಡೆ, ಬಸ್ ನಿಲ್ದಾಣ, ಅಂಗಡಿಗಳ ಮುಂದೆ ಬಿದ್ದಿರುವ ಕಸ ಕೊಳೆತು ಅದರಿಂದ ಹೊರ ಸೂಸುವ ದುರ್ನಾತ ಮೂಗಿಗೆ ರಾಚುತ್ತದೆ. ಹೀಗಾಗಿ ನಗರದಲ್ಲಿ ಎಲ್ಲರೂ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಪಂಚಾಯತಿ ಒಣ ಕಸ ಮತ್ತು ಹಸಿ ಕಸ ವಿಂಗಡಿಸಿ ವಿಲೇವಾರಿ ಮಾಡುತ್ತಿಲ್ಲ. ಬದಲಾಗಿ ಟ್ರ್ಯಾಕ್ಟರ್‌ನಲ್ಲಿ ಎಲ್ಲ ಕಸವನ್ನೂ ಒಟ್ಟಿಗೆ ತುಂಬಿಕೊಂಡು ಖಾಲಿ ಜಾಗದಲ್ಲಿ ಸುರಿಯುತ್ತಾರೆ. ಪಂಚಾಯತಿಗೆ ತನ್ನದೇ ಆದ ಸ್ವಂತ ಕಸ ಸುರಿಯುವ ಜಾಗ ಇಲ್ಲ.
ಮಳೆ ನೀರು ಸರಾಗವಾಗಿ ಹರಿದು ಹೋಗಲು ಒಳ ಚರಂಡಿ ಇಲ್ಲ. ಪಾರ್ಕಿಂಗ್ ವ್ಯವಸ್ಥೆ ದೂರದ ಮಾತು. ಕೆಲವು ಓಣಿ ಹೊರತು ಪಡಿಸಿದರೆ ಉಳಿದಂತೆ ಎಲ್ಲಿಯೂ ಸಿ.ಸಿ ರಸ್ತೆ ಇಲ್ಲ.
ಸೂಲಿಬೆಲೆಯಿಂದ ಹೊಸಕೋಟೆ, ದೇವನಹಳ್ಳಿ ಮತ್ತು ಬೆಂಡಿಗಾನಹಳ್ಳಿ ಮುಖ್ಯ ರಸ್ತೆಗಳು ಮಳೆ ಬಂದರೆ ಹೊಳೆಯಂತಾಗುತ್ತವೆ. ಒಳ ಚರಂಡಿಗಳು ಕಸ, ಹೂಳು ತುಂಬಿಕೊಂಡು ಇದ್ದೂ ಇಲ್ಲದಂತಾಗಿವೆ. ಮನೆಗಳಿಂದ ಬರುವ ಕೊಳಚೆ ನೀರು ಚರಂಡಿಗಳಲ್ಲಿ ಹರಿಯದೆ ಕಟ್ಟಿಕೊಂಡು ಗಬ್ಬು ವಾಸನೆ ಹರಡುತ್ತದೆ.
ಹೆಸರಿಗೆ ಮಾತ್ರ ರಸ್ತೆಗಳು ವಿಶಾಲವಾಗಿವೆ. ಯಾವ ರಸ್ತೆಗಳಿಗೂ ಫುಟ್‌ಪಾತ್‌ಗಳಿಲ್ಲ. ಹಾಗಾಗಿ ಮಕ್ಕಳು,ವೃದ್ಧರು,ಮಹಿಳೆಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾರೆ.
ವಾಹನ ನಿಲುಗಡೆಗೆ ನಿಗದಿತ ಸ್ಥಳಗಳಿಲ್ಲದ ಕಾರಣ ರಸ್ತೆಗಳಲ್ಲಿಯೇ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಾರೆ. ಅಂಗಡಿ, ಕಚೇರಿಗಳಿಗೆ ಬರುವವರು ಸಹ ರಸ್ತೆಗಳಲ್ಲೇ ವಾಹನ ನಿಲ್ಲಿಸುತ್ತಾರೆ. ಇದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಜನರು ಓಡಾಡಲೂ ಅಡ್ಡಿಯಾಗಿದೆ.
ಸೂಲಿಬೆಲೆ ಹೋಬಳಿ ಕಸ ವಿಳೇವಾರಿಗೆ ನಿಗದಿತ ಸ್ಥಳ ಇಲ್ಲದ ಕಾರಣ ತಾಲ್ಲೂಕು ಉಪ ತಹಶೀಲ್ದಾರ್‌ರಿಂದ ಭತ್ತಿಗಾನಹಳ್ಳಿ ಬಳಿ ಎರಡು ಎಕರೆ ಜಮೀನು ಮಂಜೂರು ಕುರಿತು ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಕಸಮುಕ್ತ ಹೋಬಳಿ ಮಾಡುವ ಗುರಿ ಇದೆ.– ನರಸಿಂಹಮೂರ್ತಿ ಗ್ರಾಮ ಪಂಚಾಯತಿ ಸದಸ್ಯರು ಸೂಲಿಬೆಲೆ
ಸೂಲಿಬೆಲೆ ಹೋಬಳಿಯ ಜನ ಒಂದೇ ಕುಟುಂಬಕ್ಕೆ ಸೇರಿದ ಮೂರು ತಲೆ ಮಾರಿನ ವ್ಯಕ್ತಿಗಳನ್ನು ಸತತವಾಗಿ ಆಯ್ಕೆ ಮಾಡಿದ್ದಾರೆ. ಆದರೆ ಅವರಿಂದ ನಿರೀಕ್ಷಿಸಿದ ಮಟ್ಟದಲ್ಲಿ ಅಭಿವೃದ್ದಿ ಆಗಿಲ್ಲ. ಇವರು ಮನಸ್ಸು ಮಾಡಿದ್ದರೆ ಸೂಲಿಬೆಲೆಯನ್ನು ಮಾದರಿ ಹೋಬಳಿಯನ್ನಾಗಿ ಮಾಡಬಹುದಿತ್ತು–ನೊಂದ ನಾಗರಿಕರು ಸೂಲಿಬೆಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.