ಹೊಸಕೋಟೆ: ತಾಲ್ಲೂಕಿನ ಸೂಲಿಬೆಲೆ ಹೋಬಳಿಯ ಹಲವು ಗ್ರಾಮಗಳ ರಸ್ತೆಗಳು ಡಾಂಬರು ಕಂಡಿಲ್ಲ. ಡಾಂಬರೀಕರಣಗೊಂಡಿರುವ ಕೆಲವು ರಸ್ತೆ ಗುಂಡಿಮಯವಾಗಿದ್ದು, ರಸ್ತೆ ಸಂಚಾರ ದುಸ್ತರವಾಗಿದೆ. ಡಾಂಬರು ಕಾರಣದ ಕಚ್ಚಾರಸ್ತೆಗಳು ಮಳೆಗಾಲದಲ್ಲಿ ಕೆಸರುಮಯವಾಗಿ, ಬೇಸಿಗೆಯಲ್ಲಿ ವಾಹನ ಸವಾರರಿಗೆ ಧೂಳಿನ ಮಜ್ಜನ ಮಾಡಿಸುತ್ತಿವೆ.
ಸೂಲಿಬೆಲೆ ಹೋಬಳಿಗೆ ಸೇರಿದ ಲಕ್ಕೊಂಡಹಳ್ಳಿ ಮತ್ತು ಕಂಬಳಿಪುರ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಹಸಿಗಾಳದಿಂದ, ಸೊಣ್ಣಹಳ್ಳಿಪುರ, ಕೆಂಪಾಪುರ, ಕಂಬಳಿಪುರ ಇತರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ರಸ್ತೆ ಎಂದು ಕರೆಯುವ ಯೋಗ್ಯತೆ ಉಳಿಸಿಕೊಂಡಿಲ್ಲ. 3.5ಮೀ ಅಗಲದ ಹದಗೆಟ್ಟ ರಸ್ತೆಗಳಲ್ಲಿ ಸಂಚರಿಸುವುದೆಂದರೆ ಸರ್ಕಸ್ ಮಾಡಿದಂತೆ. ಸೊಣ್ಣಹಳ್ಳಿಪುರ ಮತ್ತು ಕಂಬಳಿಪುರ ರಸ್ತೆಗಳು ಡಾಂಬರು ಕಂಡು ದಶಕಗಳೇ ಕಳೆದಿದೆ.
ಇಂತಹ ರಸ್ತೆಗಳಲ್ಲಿ ಪ್ರತಿನಿತ್ಯ ಶಾಲಾ–ಕಾಲೇಜು ವಿದ್ಯಾರ್ಥಿಗಳು , ಕಾರ್ಮಿಕರು, ರೈತರು, ಶಾಲಾ ವಾಹನ, ಬಿಎಂಟಿಸಿ ಬಸ್ ಚಾಲಕರು ಸಾಹಸ ಮಾಡುತ್ತಲೇ ಗಾಡಿ ಚಲಾಯಿಸುತ್ತಾರೆ.
ಪ್ರಸಿದ್ಧ ಕಂಬಳಿಪುರದ ಕಾಟೆರಮ್ಮ ದೇವಸ್ಥಾನ, ಸೊಣ್ಣಹಳ್ಳಿಪುರದ ಕೆನಾರ ಬ್ಯಾಂಕ್‌ನಲ್ಲಿ ಸಾವಿರಾರು ಮಹಿಳೆಯರು ತರಬೇತಿ ಪಡೆಯುವ ಕೇಂದ್ರ, ವೇರ್‌ಹೌಸ್‌ಗಳಿಗೆ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಹಾಗೂ ಶಾಲಾ ವಾಹನ ವಾಹನಗಳು ಓಡಾಡುವುದಕ್ಕೆ ಇರುವುದೊಂದು ರಸ್ತೆ. ಅದೂ ಕೂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹದಗೆಟ್ಟಿದೆ. ವಾಹನಗಳ ಸಂಚಾರ ಯೋಗ್ಯತೆ ಕಳೆದುಕೊಂಡರೂ, ಬೇರೆ ದಾರಿ ಇಲ್ಲದೆ ಇದೇ ರಸ್ತೆಯಲ್ಲಿ ಸಂಚರಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಕಾಟೆರಮ್ಮ ದೇವಾಲಯಕ್ಕೆ ಬರುವ ಸಾವಿರಾರು ಜನರಿಂದಲೇ ಲಕ್ಷ ಲಕ್ಷ ಆದಾಯ ಕಂಬಳಿಪುರ ಗ್ರಾಮ ಪಂಚಾಯತಿಗೆ ಬರುತ್ತಿದೆ. ಆದರೆ ಮೂಲ ಸೌಕರ್ಯ ಮಾತ್ರ ಶೂನ್ಯ. ಕಾಟಾಚಾರಕ್ಕೆ ಕಂಬಳಿಪುರ ಪಂಚಾಯತಿಯಿಂದ ಕಂಬಳಿಪುರದಲ್ಲಿ ಮಾತ್ರ ಹದಗೆಟ್ಟ ರಸ್ತೆಗೆ ಜಲ್ಲಿ ಸುರಿದು ಕೈ ತೊಳೆದುಕೊಳ್ಳಲಾಗಿದೆ. ಡಾಂಬರು ಹಾಕದ ಕಾರಣ ಜಲ್ಲಿಗಳು ಎದ್ದು ರಸ್ತೆಯ ಸಂಚಾರ ಸಂಕಷ್ಟ ತಂದಿದೆ. ಇಂತಹ ರಸ್ತೆಗಳಿಗೆ ಸಂಬಂದಪಟ್ಟ ಸಚಿವರ ಹೆಸರು ನಾಮಕಾರಣ ಮಾಡಬೇಕು ಎಂದು ಹಸಿಗಾಳ ನಿವಾಸಿ ಮಹೇಶ್ ಆಕ್ರೋಶ ಹೊರಹಾಕಿದರು.
ತಮಟೆ ಚಳುವಳಿ ಎಚ್ಚರಿಕೆ: ಸೂಲಿಬೆಲೆ ಹೋಬಳಿಯಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಹೊಸದಾಗಿ ನಿರ್ಮಿಸಬೇಕು. ಅಲ್ಲಿಯವರೆಗೆ ದುರಸ್ತಿಗೊಳಿಸಬೇಕು. ಈ ಕಾರ್ಯ ಅತಿ ತುರ್ತುಯಾಗಿ ಆಗಬೇಕು. ಸುರಕ್ಷಿತ ರಸ್ತೆ ನಿರ್ಮಿಸದಿದ್ದರೆ ಭೀಮ್ ಸೇವಾ ಸಮಿತಿಯಿಂದ ಸಂಬಂಧಿಸಿದ ಇಲಾಖೆಗಳ ಮುಂಭಾಗ ತಮಟೆ ಚಳುವಳಿ ನಡೆಸಲಾಗುವುದು ಎಂದು ಜೈ ಭೀಮ್ ಸಮಿತಿ ಮುಖಂಡರು ಎಚ್ಚರಿಸಿದ್ದಾರೆ.
ಹೂ ಸಾಗಾಟದ ಸಂಕಷ್ಟ
ಕಂಬಳಿಪುರ ಸುತ್ತಮುತ್ತಲ ಹಳ್ಳಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೇಮಂತಿ ಗುಲಾಬಿ ಸೇರಿದಂತೆ ಪುಷ್ಪಕೃಷಿ ಮಾಡುತ್ತಾರೆ. ಪ್ರತಿನಿತ್ಯ ಹೊಸಕೋಟೆ ಹೂ ಮಂಡಿಗೆ ಮಾರಾಟ ಮಾಡಲು ದ್ವಿಚಕ್ರ ವಾಹನಗಳಲ್ಲಿ ಮುಂಜಾನೆಯೇ ತೇರಳಬೇಕು. ಆದರೆ ಕಂಬಳಿಪುರರದ ಜ್ಞಾನಗಂಗೋತ್ರಿ ಶಾಲೆಯ ಬಳಿ ರಸ್ತೆ ಗುಂಡಿಮಯವಾಗಿರುವುದರಿಂದ ಎಚ್ಚರಿಕೆಯಿಂದಲೇ ಸಂಚರಿಸಬೇಕು. ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ. ಸುತ್ತಿಬಳಸಿ ಸಂಚಾರ: ಮಳೆ ಬಂದರೆ ರಸ್ತೆಯೋ ಕೆರೆಯೋ ಎನ್ನುವ ಸ್ಥಿತಿ ನಿರ್ಮಾಣವಾಗುತ್ತೆ. ಸಾಕಷ್ಟು ಬಾರಿ ರೈತರು ಬೈಕ್‌ನಲ್ಲಿ ಜಾರಿ ಬಿದ್ದ ಉದಾಹರಣೆಗಳಿವೆ. ಮಳೆಬಂದಾಗ ಬೈಕ್ ಸವಾರರು ಸುತ್ತಿ ಬಳಸಿ ಎಂ.ಸತ್ಯವಾರ ಇಲ್ಲವೇ ಸಮೀಪದ ರಸ್ತೆ ಮೂಲಕ ಹೊಸಕೋಟೆ ತಲುಪುತ್ತೇವೆ ಎಂದು ಎನ್ನುತ್ತಾರೆ ಕೆಂಪಾಪುರದ ರೈತ ರಾಮಂಜಿ.
ಕಂಬಳಿಪುರದ ಕಾಟೆರಮ್ಮ ದೇವಸ್ಥಾನಕ್ಕೆ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ವಾಹನ ನಿಲುಗಡೆಯಿಂದಲೇ ದಿನಕ್ಕೆ ಲಕ್ಷಕ್ಕೂ ಅಧಿಕ ಆದಾಯ ಪಂಚಾಯಿತಿಗೆ ಬರುತ್ತದೆ. ಆದರೆ ರಸ್ತೆ ಹಾಗೂ ಅಭಿವೃದ್ಧಿ ಕಾರ್ಯ ಮಾತ್ರ ಶೂನ್ಯ.–ಶ್ರೀಕಾಂತ್ ರಾವಣ್, ಅಧ್ಯಕ್ಷ ಭೀಮ್ ಸೇವಾ ಸಮಿತಿ
ಸೊಣ್ಣಹಳ್ಳಿಪುರ ಮತ್ತು ಕೆಂಪಾಪುರ ರಸ್ತೆಯಲ್ಲಿ ದೊಡ್ಡ ಅಳ್ಳಗಳು ಬಿದ್ದಿದೆ. ಮಳೆ ಬಂದಾಗ ಇಲ್ಲಿನ ರಸ್ತೆಗಳಲ್ಲಿ ವಾಹನ ಸವಾರಿ ಮಾಡುವುದು ಕೆರೆ ಕುಂಟೆಗಳಲ್ಲಿ ಸವಾರಿ ಮಾಡಿದಂತಹ ಅನುಭವ ಆಗುತ್ತದೆ.–ಪೃಥ್ವಿ, ಕಂಬಳಿಪುರ ನಿವಾಸಿ
ಗರ್ಭಿಣಿಯರು ಹೆರಿಗೆ ನೋವು ಬಂದಾಗ ಅವರು ವಾಹನದಲ್ಲಿ ಸೂಲಿಬೆಲೆ ರಸ್ತೆಗಳಲ್ಲಿ ಸಂಚರಿಸಿದರೆ ಖರ್ಚಿಲ್ಲದೆ ಇಲ್ಲೇ ಹೆರಿಗೆ ಆಗುತ್ತೆ ಎಂದರೆ ನೀವೇ ಯೋಚಿಸಿ ರಸ್ತೆ ಎಷ್ಟೊಂದು ಹದಗೆಟ್ಟಿದೆ.–ಉಮೇಶ್, ಸೊಣ್ಣಹಳ್ಳಿಪುರ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.