ADVERTISEMENT

ಬೇಸಿಗೆ: ಹಸಿರು ಮೇವು ಕೊರತೆ ಹಾಲು ಉತ್ಪಾದನೆ ಕುಸಿತ ಆತಂಕ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2023, 6:17 IST
Last Updated 14 ಏಪ್ರಿಲ್ 2023, 6:17 IST
ವಿಜಯಪುರದಲ್ಲಿ ಜೋಳದ ಕಡ್ಡಿಗಳ ಖರೀದಿಯಲ್ಲಿ ತೊಡಗಿರುವ ರೈತರು
ವಿಜಯಪುರದಲ್ಲಿ ಜೋಳದ ಕಡ್ಡಿಗಳ ಖರೀದಿಯಲ್ಲಿ ತೊಡಗಿರುವ ರೈತರು   

ವಿಜಯಪುರ(ದೇವನಹಳ್ಳಿ): ಬೇಸಿಗೆ ರಣಬಿಸಿಲು ದಿನದಿಂದ ದಿನಕ್ಕೆ ತೀವ್ರವಾಗತೊಡಗಿದ್ದು, ರಾಸುಗಳ ಹಸಿರು ಮೇವಿಗೆ ಕೊರತೆ ಉಂಟಾಗಿದೆ. ಇದರಿಂದ ಹಾಲು ಉತ್ಪಾದನೆ ಕುಸಿಯವ ಆತಂಕ ರೈತರಲ್ಲಿ ಮನೆ ಮಾಡಿದೆ.

ಕೃಷಿಗೆ ನೀರಿನ ಕೊರತೆ ಹಾಗೂ ಬಯಲಿನಲ್ಲಿ ಹುಲ್ಲು ಬೆಳೆಯದ ಕಾರಣ ಹಸಿರು ಮೇವಿನ ಕೊರತೆ ಕಾಡುತ್ತಿದೆ. ರಾಸುಗಳಿಗೆ ಹಸಿರು ಮೇವು ಹಾಕದ ಕಾರಣ, ಅವು ಹಾಲು ಕಡಿಮೆ ಕರೆಯುತ್ತಿವೆ ಎಂದು ರೈತ ಕೃಷ್ಣಪ್ಪ ಹೇಳಿದರು.

ಕೆರೆ, ಕುಂಟೆಗಳು ಕೋಡಿ ಹರಿದರೂ ಕೂಡಾ ಕೇವಲ ನಾಲ್ಕು ತಿಂಗಳಲ್ಲೇ ನೀರಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ. ಸಾಲ ಮಾಡಿ ಕೊರೆಸಿರುವ ಕೊಳವೆಬಾವಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೀರು ಬರುತ್ತಿಲ್ಲ. ಇದರಿಂದ ಕೃಷಿ ಚಟುವಟಿಕೆ ಕುಟಿಂತವಾಗಿದ್ದು, ಹಸಿರು ಮೇವು ಸಿಗುತ್ತಿಲ್ಲ. ರಾಸುಗಳಿಗೆ ಹಸಿರು ಮೇವು ಪೂರೈಕೆ ಮಾಡುವುದೇ ದೊಡ್ಡ ಸವಾಲಾಗಿದೆ ಎಂದು ರೈತ ನರಸಿಂಹಪ್ಪ ತಿಳಿಸಿದರು.

ADVERTISEMENT

‘ತೋಟಗಳಲ್ಲಿ ನೀರಾವರಿ ಸೌಲಭ್ಯವಿರುವವರು ಜೋಳದಕಡ್ಡಿ ಬೆಳೆದಿದ್ದು, ಅವರು ಮೇವಿಗೆ ದುಬಾರಿ ಬೆಲೆ ಹೇಳುತ್ತಿದ್ದಾರೆ. ಒಂದು ಕಡ್ಡಿಯ ಬೆಲೆ ₹3 ಹೇಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಖರೀದಿ ಮಾಡೋಣವೆಂದರೆ, ಒಂದು ಕಡ್ಡಿಗೆ ಖರ್ಚು ಸೇರಿಸಿ, ₹5 ವೆಚ್ಚ ತಗಲುತ್ತದೆ. ಒಂದು ಕಡೆ ಪಶುಗಳ ಆಹಾರದ ಬೆಲೆ ಏರಿಕೆಯಾಗಿದೆ. ಮತ್ತೊಂದು ಕಡೆ ಹಸಿರು ಮೇವಿನ ಬೆಲೆಯೂ ಜಾಸ್ತಿಯಾಗಿದೆ. ಈ ಮಧ್ಯೆ ಸಾಲ ಮಾಡಿ, ಹಸಿರು ಮೇವು ಖರೀದಿ ಮಾಡಿಕೊಂಡು ಬರುವಂತಾಗಿದೆ. ಹಾಲು ಉತ್ಪಾದನೆ ಹೆಚ್ಚಿಸದಿದ್ದರೆ ಸಂಸಾರ ನೀಗಿಸುವುದು ತುಂಬಾ ಕಷ್ಟವಾಗುತ್ತದೆ’ ಎಂದು ರೈತ ಸೀನಪ್ಪ ತಮ್ಮ ಅಳಲು ತೋಡಿಕೊಂಡರು.

ಹೈನುಗಾರಿಕೆ ದುಬಾರಿ: ‘ಒಂದು ಹಸುವಿಗೆ ದಿನಕ್ಕೆ 30 ಕೆ.ಜಿ.ಯಷ್ಟು ಹಸಿರು ಮೇವು ಕೊಡಬೇಕು. 6 ಕೆ.ಜಿ.ಒಣಮೇವು, 1 ಲೀಟರ್ ಹಾಲಿನ ಉತ್ಪಾದನೆಗೆ ಸಮತೋಲನ ಆಹಾರ 3 ಕೆ.ಜಿ.ಕೊಡಬೇಕು. ಒಂದು ಲೀಟರ್ ಹಾಲು ಉತ್ಪಾದನೆಗೆ ₹28 ಖರ್ಚಾಗುತ್ತದೆ. 30 ಲೀಟರ್‌ನಷ್ಟು ನೀರು ಕುಡಿಯಲು ಕೊಡಬೇಕು. ಅವುಗಳಿಗೆ ಸಾಕಾಗುವಷ್ಟು ಕುಡಿಯುವ ನೀರು ಕೊಡಲಿಕ್ಕೂ ಕಷ್ಟವಾಗುತ್ತಿದೆ. ಇಷ್ಟು ಬಂಡವಾಳ ಹೂಡಿ ಹಾಲು ಉತ್ಪಾದನೆ ಮಾಡಬೇಕಾದರೆ ಸಾಮಾನ್ಯ ರೈತರ ಪಾಲಿಗೆ ಹೈನುಗಾರಿಕೆ ಉದ್ಯಮ ದುಬಾರಿಯಾಗುತ್ತಿದೆ’ ಎಂದು ಈ ಭಾಗದ ರೈತರು ಅಳಲು ತೋಡಿಕೊಂಡಿದ್ದಾರೆ.

ಲಾಭವಿಲ್ಲದ ಮೇವಿನ ವ್ಯಾಪಾರ: ‘ದೊಡ್ಡ ರೈತರು ಅವರೇ ಹೋಗಿ ತೋಟಗಳಲ್ಲಿ ಮೇವು ಖರೀದಿ ಮಾಡುತ್ತಾರೆ. ನಾವು ಕೂಲಿ ಕಾರ್ಮಿಕರನ್ನು ಕರೆದುಕೊಂಡು ಬಾಡಿಗೆಗೆ ವಾಹನ ಮಾಡಿಕೊಂಡು ಹೋಗಿ ಮೇವು ಕಟಾವು ಮಾಡಿಕೊಂಡು ಬಂದು ಮಾರಾಟ ಮಾಡಬೇಕು. ಕೆಲವು ರೈತರು ಸಾಲ ಇಟ್ಟು ಹೋಗುತ್ತಾರೆ. ಹಾಲಿನ ಬಿಲ್ಲು ಬಂದಾಗ ಹಣ ತಂದು ಕೊಡುತ್ತಾರೆ. ಪೂರ್ತಿ ಹಣವು ಕೊಡಲ್ಲ. ಆದರೂ ಕೈಯಿಂದ ಬಂಡವಾಳ ಹೂಡಿಕೆ ಮಾಡಿ, ತಂದು ಮಾರಾಟ ಮಾಡುತ್ತಿದ್ದೇವೆ. ಇದರಿಂದ ಲಾಭವೇನು ಇಲ್ಲ’ ಎನ್ನುತ್ತಾರೆ ಜೋಳದ ಕಡ್ಡಿಗಳ ವ್ಯಾಪಾರಸ್ಥ ಅಂಬರೀಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.