ADVERTISEMENT

ಕಾರ್ಮಿಕ ಸಂಘಟನೆಗಳ ಬೆಂಬಲ

ರಾಜ್ಯ, ಕೇಂದ್ರ ವಿರುದ್ಧ ನ.26ರಂದು ಸಾರ್ವಜನಿಕ ಮುಷ್ಕರ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 5:17 IST
Last Updated 22 ನವೆಂಬರ್ 2020, 5:17 IST
ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ಸೂಚಿಲು ನಡೆದ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು
ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ಸೂಚಿಲು ನಡೆದ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು   

ದೊಡ್ಡಬಳ್ಳಾಪುರ: ಕೇಂದ್ರ, ರಾಜ್ಯ ಸರ್ಕಾರದ ಜನವಿರೋಧಿ, ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ರಾಷ್ಟ್ರ ವಿರೋಧಿ ನೀತಿಗಳ ವಿರುದ್ಧ ವಿವಿಧ ಕೇಂದ್ರ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನ.26ರಂದು 20ನೇ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ನಗರದ ಸಿಪಿಐಎಂ ಕಚೇರಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಸಿಪಿಐಎಂ ಕಾರ್ಯದರ್ಶಿ ಆರ್‌.ಚಂದ್ರತೇಜಸ್ವಿ,ಕೇಂದ್ರ,ರಾಜ್ಯ ಸರ್ಕಾರಗಳ ವಿಫಲ ಕ್ರಮಗಳಿಂದ ‘ಕೋವಿಡ್ ಜನ ಸಮೂಹದ ನಡುವೆ ವ್ಯಾಪಕವಾಗಿ ವಿಸ್ತರಿಸುತ್ತಿದೆ. ಕೋವಿಡ್ ಪರಿಹಾರ ಕಾರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳದ ಪರಿಣಾಮ ದುಡಿಯುವ ಜನರು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ ಎಂದರು.

ಬಂಡವಾಳಗಾರರಿಗೆ ಕೋವಿಡ್ ರಿಯಾಯಿತಿ ಪ್ರಕಟಿಸಿದ ಕೇಂದ್ರ, ರಾಜ್ಯ ಸರ್ಕಾರ ಲಾಕ್‌ಡೌನ್‌ನಿಂದಾಗಿ ಸಂತ್ರಸ್ತರಾದ ವಲಸೆ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಕೆಲಸ ಕಳೆದುಕೊಂಡ ಕೈಗಾರಿಕಾ ಕಾರ್ಮಿಕರು, ಕೋವಿಡ್ ವಾರಿಯರ್ಸ್‍ಗಳಾಗಿ ಕೆಲಸ ಮಾಡುತ್ತಿರುವ ಸ್ಕೀಂ ನೌಕರರು, ಪಂಚಾಯಿತಿ, ಮುನ್ಸಿಪಲ್ ಕಾರ್ಮಿಕರು, ಆರೋಗ್ಯ ಕಾರ್ಯಕರ್ತರ ಬದುಕಿನ ರಕ್ಷಣೆಗೆ ನಿಲ್ಲಲಿಲ್ಲ. ಇದರಿಂದ ದೇಶದಲ್ಲಿ ಲಾಕ್‌ಡೌನ್‌ ನಂತರ ಸಂಘಟಿತ ಅಸಂಘಟಿತ ವಲಯದ 14ಕೋಟಿ ಕಾರ್ಮಿಕರಿಗೆ ಉದ್ಯೋಗ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸಂಕಷ್ಟ ಪರಿಸ್ಥಿತಿಯಲ್ಲಿ ದೇಶದ ಜನರ ರಕ್ಷಣೆಗೆ ನಿಲ್ಲಬೇಕಾದ ಕೇಂದ್ರ ಸರ್ಕಾರ ಕೋವಿಡ್ ಸಂದರ್ಭಬಳಸಿ ವೇಗವಾಗಿ ತನ್ನ ‘ನವ ಉದಾರವಾದಿ ಆರ್ಥಿಕ ನೀತಿಗಳ’ ಮೂಲಕ ಕೃಷಿ, ಶಿಕ್ಷಣ, ಸಾರ್ವಜನಿಕ ಕ್ಷೇತ್ರದ ಉದ್ದಿಮೆ ಮತ್ತು ಸೇವೆಗಳನ್ನು ಕಾರ್ಪೊರೇಟ್ ಬಂಡವಾಳಗಾರರ ಲಾಭಕ್ಕೆ ಖಾಸಗೀಕರಣ ಮಾಡುತ್ತಿದೆ ಎಂದು ದೂರಿದರು.

ಕಾರ್ಮಿಕ, ರೈತ ವಿರೋಧಿ ನೀತಿಗಳನ್ನು ವಿರುದ್ಧ ನಡೆಯುತ್ತಿರುವ ಮುಷ್ಕರಕ್ಕೆ ಬೆಂಬಲ ಸೂಚಿಸಲು ನಡೆದ ಸಭೆಯಲ್ಲಿ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮೇಗೌಡ, ಪ್ರಾಂತರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಸಿ.ರಾಮಕೃಷ್ಣ, ಸಿಪಿಐಎಂ ಕಾರ್ಯದರ್ಶಿ ಪಿ.ಎ.ವೆಂಕಟೇಶ್, ಶಿವಾರೆಡ್ಡಿ, ತಾಲ್ಲೂಕು ಕನ್ನಡ ಪಕ್ಷದ ಅಧ್ಯಕ್ಷ ಸಂಜೀವನಾಯ್ಕ್, ಕರ್ನಾಟಕ ರಾಜ್ಯ ನೇಕಾರರ ಹಿತ ರಕ್ಷಣಾ ಸಮಿತಿ ಮಲ್ಲೇಶ್, ಎಐಟಿಯುಸಿಯ ಚಂದ್ರಕಾಂತ್, ಸಿಐಟಿಯು ತಾಲ್ಲೂಕು ಸಂಚಾಲಕರಾದ ರೇಣುಕಾರಾದ್ಯ, ಕಾಂಗ್ರೆಸ್ ಕಾರ್ಮಿಕ ಘಟಕದ ತಾಲ್ಲೂಕು ಅಧ್ಯಕ್ಷ ಶಂಕರ್, ದಲಿತ ಸಂಘಟನೆಯ ಜಿಲ್ಲಾ ಸಂಚಾಲಕ ರಾಜುಸಣ್ಣಕ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.