ADVERTISEMENT

ಸ್ವಾಮೀಜಿ ಶಿವನ ಸಾಕ್ಷಾತ್ ಪ್ರತಿರೂಪ: ಶಾಸಕ ನಿಸರ್ಗ ನಾರಾಯಣಸ್ವಾಮಿ

ದೇವನಹಳ್ಳಿಯ ಶತಾಯುಷಿ ಶಿವಕುಮಾರ ಸ್ವಾಮಿ ವೃತ್ತದಲ್ಲಿ ಪುಷ್ಪ ನಮನ

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 13:01 IST
Last Updated 22 ಜನವರಿ 2019, 13:01 IST
ಸಂತಾಪ ಸೂಚಕ ಸಭೆಯಲ್ಲಿ ಗಣ್ಯರು ಪಾಲ್ಗೊಂಡಿದ್ದರು
ಸಂತಾಪ ಸೂಚಕ ಸಭೆಯಲ್ಲಿ ಗಣ್ಯರು ಪಾಲ್ಗೊಂಡಿದ್ದರು   

ದೇವನಹಳ್ಳಿ: ಪ್ರತ್ಯಕ್ಷ ದೇವರ ಸಾಮಾಜಿಕ ಸೇವೆಗಳು ವಿಶ್ವ ಮೆಚ್ಚುವಂತದ್ದು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

ಶಿವಕುಮಾರಸ್ವಾಮಿ ಭಾವಚಿತ್ರಕ್ಕೆ ಇಲ್ಲಿನ ಶತಾಯುಷಿ ಶಿವಕುಮಾರ ಸ್ವಾಮಿ ವೃತ್ತದಲ್ಲಿ ಪುಷ್ಪ ನಮನದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿವನ ಸಾಕ್ಷಾತ್ ಪ್ರತಿರೂಪವೇ ಶಿವಕುಮಾರಸ್ವಾಮಿ, ಜಾತ್ಯತೀತ ಭಾವನೆಯ ಪರಿಕಲ್ಪನೆಗೆ ಅಡಿಗಲ್ಲು ಹಾಕಿದ ಮಹಾ ಚೇತನ, ಸಮಾನತೆಯ ಹರಿಕಾರ ಬಸವಣ್ಣ ಅವರಂತೆ ಕಾಯಕ ಯೋಗಿಯಾಗಿ ತೊಡಗಿಸಿಕೊಂಡಿದ್ದರು ಎಂದು ಹೇಳಿದರು.

ADVERTISEMENT

‘ನಡೆದಾಡುವ ದೇವರು, ಅಭಿನವ ಬಸವಣ್ಣ, ತ್ರಿವಿಧ ದಾಸೋಹಿ ಎಂದು ಖ್ಯಾತಿ ಹೊಂದಿದ್ದ ಶ್ರೀಗಳು ಇಹಲೋಕ ತ್ಯಜಿಸಿದ್ದಾರೆ. ಅದರೂ ಅವರ ಪರಿಶುದ್ಧ ಅತ್ಮ ಹಸಿವು, ಶಿಕ್ಷಣ, ಜ್ಞಾನ ನೀಡುವ ಕೆಲಸ ಮಾಡುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದ ಪ್ರಕಾರ ನನಗಿದೆ’ ಎಂದರು.

ನಡೆದಾಡುವ ದೇವರು ಹಳ್ಳಿ ಹಳ್ಳಿಗೆ ನಡೆದಾಡಿಕೊಂಡೇ ದವಸ ಧಾನ್ಯ ಸಂಗ್ರಹಿಸಿ ಅನೇಕ ಬಡವರ ನಿರ್ಗತಿಕರ ಹಸಿವನ್ನು ನೀಗಿಸಿ ತಲೆಯಲ್ಲಿ ಅಕ್ಷರವೆಂಬ ಜ್ಞಾನದ ಅರಿವು ಮೂಡಿಸಿದ್ದಾರೆ. ಅವರು ದೈಹಿಕವಾಗಿ ಮಾನವರಂತೆ ಕಂಡರೂ ಅವರಲ್ಲಿದ್ದ ಆಧ್ಯಾತ್ಮಿಕ ಅದ್ವಿತೀಯ ಶಕ್ತಿ ದೇವರನ್ನು ಮೀರಿಸುವಂತಹದ್ದು ಎಂದರು.

ವೀರಶೈವ ಲಿಂಗಾಯತ ಸಮಾಜ ತಾಲ್ಲೂಕು ಘಟಕ ಅಧ್ಯಕ್ಷ ರಮೇಶ್ ಮಾತನಾಡಿ, ವಿಶ್ವಕಂಡ ಅಪ್ರತಿಮ ತ್ರಿವಿಧ ದಾಸೋಹಿ ಶ್ರೀಗಳ ವ್ಯಕ್ತಿತ್ವ ಎಂತಹ ಅಸಾಮಾನ್ಯ ಎಂಬುದು ದರ್ಶನ ಪಡೆಯುತ್ತಿರುವ ಶಿಷ್ಯ ಕೋಟಿಯಿಂದ ಅರ್ಥವಾಗಿದೆ ಎಂದರು.

ಜಿಲ್ಲಾ ಜೆಡಿಎಸ್ ಘಟಕ ಅಧ್ಯಕ್ಷ ಬಿ. ಮುನೇಗೌಡ ಮತ್ತು ಬೈಯಾಪ ಮಾಜಿ ಅಧ್ಯಕ್ಷ ಅಶ್ವಥನಾರಾಯಣ ಮಾತನಾಡಿ, ಕಾಣದ ದೇವರು ತಪ್ಪು ಮಾಡಿರಬಹುದು. ಪ್ರತ್ಯಕ್ಷ ದೇವರಾಗಿದ್ದ ಶ್ರೀಗಳು ಒಂದೂ ತಪ್ಪು ಮಾಡಿದ ಸಂದರ್ಭಗಳಿಲ್ಲ ಎಂದರು.

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಬಿ.ರಾಜಣ್ಣ ಮತ್ತು ಪುರಸಭೆ ಅಧ್ಯಕ್ಷ ಎಂ. ಮೂರ್ತಿ ಮಾತನಾಡಿ, ಶ್ರೀಗಳನ್ನು ಕಳೆದುಕೊಂಡಿದ್ದೇವೆ. ಆದರೆ, ಅವರು ಇಟ್ಟಿರುವ ಹೆಜ್ಜೆಗುರುತು ಶಾಶ್ವತವಾಗಲಿದೆ. ಅವರ ಆಗಲಿಕೆ ತುಂಬಲಾರದ ನಷ್ಟ, ಮರಣೋತ್ತರವಾಗಿ ಭಾರತ ರತ್ನ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪತ್ರ ಚಳವಳಿ ಮೂಲಕ ಒತ್ತಾಯಿಸಲಾಗುವುದು ಎಂದರು.

ತಹಶೀಲ್ದಾರ್ ಎಂ. ರಾಜಣ್ಣ ಮಾತನಾಡಿದರು. ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕ ರಾಜ್ಯ ಉಪಾಧ್ಯಕ್ಷ ಸಿ.ಜಗನ್ನಾಥ್, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ದೇ.ಸು ನಾಗರಾಜ್, ಜೆಡಿಎಸ್ ತಾಲ್ಲೂಕು ಘಟಕ ಕಾರ್ಯಾಧ್ಯಕ್ಷ ಆರ್.ಮುನೇಗೌಡ, ಪ್ರಧಾನ ಕಾರ್ಯದರ್ಶಿ ರವೀಂದ್ರ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು ಭಾಗವಹಿಸಿದ್ದರು.

ಟಿ.ಎ.ಪಿ.ಎಂ.ಸಿ.ಎಸ್ ಅಧ್ಯಕ್ಷ ಶ್ರೀರಾಮಯ್ಯ, ನಿರ್ದೇಶಕ ಮಂಡಿಬೆಲೆ ರಾಜಣ್ಣ, ಎ.ಪಿ.ಎಂ.ಸಿ ಅಧ್ಯಕ್ಷ ಕೆ.ವಿ. ಮಂಜುನಾಥ್, ಪುರಸಭೆ ಸದಸ್ಯ ವೈ.ಸಿ. ಸತೀಶ್, ಜೆಡಿಎಸ್ ನಗರ ಘಟಕ ಅಧ್ಯಕ್ಷ ಮುನಿನಂಜಪ್ಪ, ವೀರಶೈವ ಲಿಂಗಾಯಿತ ಸಮಾಜ ತಾಲ್ಲೂಕು ಘಟಕ ಉಪಾಧ್ಯಕ್ಷ ನಾಗಭೂಷಣ್, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಖಜಾಂಚಿ ನಾಗೇಶ್ ಮುಖಂಡರಾದ ವೀರಭದ್ರಪ್ಪ, ಕಾಂತರಾಜು, ಉಮೇಶ್, ಗೀತಾ ಜಗದೇವ್, ಉಷಾ ಪೂರ್ಣಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.