ADVERTISEMENT

‘ಪುಸ್ತಕ ಓದುವಂತೆ ಮಾಡುವ ಹೊಣೆ ನಿರ್ವಹಿಸಿ’

ನೆಲ್ಲುಕುಂಟೆ ಗ್ರಾಮದಲ್ಲಿ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಮೇ 2019, 13:49 IST
Last Updated 18 ಮೇ 2019, 13:49 IST
ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ಮಾತನಾಡಿದರು
ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ಮಾತನಾಡಿದರು   

ದೊಡ್ಡಬಳ್ಳಾಪುರ: ಆಧುನಿಕ ಕಾಲದ ಎಲ್ಲ ಸಮಸ್ಯೆಗಳು ನಗರಗಳನ್ನು ಮಾತ್ರವಲ್ಲ ಹಳ್ಳಿಗಳನ್ನೂ ಕಾಡುತ್ತಿವೆ. ಆದರೆ ಬಹುತೇಕ ನಾಗರಿಕ ಸೌಲಭ್ಯಗಳು ನಗರಗಳಿಗೆ ಸೀಮಿತವಾಗಿರುವುದು ಗ್ರಾಮಗಳು ಹಿಂದುಳಿಯಲು ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ಹೇಳಿದರು.

ಅವರು ತಾಲ್ಲೂಕಿನ ನೆಲ್ಲುಕುಂಟೆ ಗ್ರಾಮದಲ್ಲಿ ಆಂಜನೇಯ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ನಡೆದ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಟಿ.ವಿ ಮತ್ತು ಮೊಬೈಲ್ ಫೋನ್‌ಗಳು ಎಲ್ಲರ ಕೈಯಲ್ಲಿ ನಲಿದಾಡುತ್ತಿದ್ದು ಗ್ರಾಮ ಸಂಸ್ಕೃತಿ ಕಣ್ಮರೆಯಾಗಿದೆ. ಜನಪದ ಕಲೆಗಳಾದ ಹಸೆ, ಹಾಡು, ಕೋಲಾಟ, ಯಕ್ಷಗಾನ, ಮೂಡಲಪಾಯ ನಾಟಕಗಳು ಗ್ರಾಮೀಣ ಜನರ ಮನಸ್ಸಿನಿಂದ ಮರೆಯಾಗುತ್ತಿರುವುದು ವಿಷಾದದ ಸಂಗತಿ ಎಂದರು.

ADVERTISEMENT

‘ಆದರೂ ಕೆಲವು ಗ್ರಾಮಗಳಲ್ಲಿ ಪೌರಾಣಿಕ ನಾಟಕ ನೋಡಲು ಜನರು ಸೇರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಕಲಾ ಪೋಷಕರಾದ ಪ್ರೇಕ್ಷಕರಿದ್ದರೇ ಕಲೆ, ಕಲಾವಿದರು ಉಳಿಯುವುದು. ರಾಮಾಯಣ, ಮಹಾಭಾರತ ಮುಂತಾದ ನಾಟಕಗಳು ಬರಿ ಮನರಂಜನೆ ಮಾತ್ರ ನೀಡುವುದಿಲ್ಲ. ಅವು ನಮ್ಮ ಮಕ್ಕಳಲ್ಲಿ ಪುರಾಣ ಪ್ರಜ್ಞೆಯನ್ನೂ, ಮೌಲ್ಯಪ್ರಜ್ಞೆಯನ್ನೂ ಬೆಳೆಸುವ ಶ್ರೇಷ್ಠ ಕೃತಿಗಳು. ಮಕ್ಕಳಿಗೆ ಇವೆಲ್ಲ ತೀರಾ ಅಗತ್ಯ’ ಎಂದರು.

ಕೆಎಎಸ್ ಅಧಿಕಾರಿ ವೆಂಕಟೇಶಯ್ಯ ಮಾತನಾಡಿ, ನೆಲ್ಲುಕುಂಟೆ ಗ್ರಾಮ ಹಾಗೂ ಸುತ್ತಲಿನ ಗ್ರಾಮಗಳು ಹಿಂದಿನಿಂದಲೂ ನಾಟಕ ಪ್ರದರ್ಶನಕ್ಕೆ ಪ್ರಸಿದ್ಧಿ ಪಡೆದಿವೆ. ಈ ಪರಂಪರೆಯನ್ನು ಈಗಲೂ ಮುಂದುವರಿಸಿರುವುದು ಹಾಗೂ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿರುವುದು ಶುಭಸೂಚನೆ ಎಂದರು.

ಮಕ್ಕಳಿಗೆ ಸಾಧ್ಯವಾದಷ್ಟೂ ಇಂತಹ ಜನಪದ ಕಲೆಗಳನ್ನು ಪರಿಚಯಿಸುವ ಅಗತ್ಯವಿದೆ. ಪುಸ್ತಕ ಓದುವಂತೆ ಮಾಡಬೇಕಿದೆ. ಮನುಷ್ಯರು ಮನುಷ್ಯರೊಂದಿಗೆ ಮಾತನಾಡಬೇಕೇ ವಿನಹ ಯಂತ್ರಗಳೊಂದಿಗಲ್ಲ. ಜನರು ಹೀಗೆ ಒಟ್ಟಾಗಿ ಬೆರೆಯಬೇಕು. ಅದಕ್ಕೆ ನಾಟಕ, ಜನಪದ ಕಲೆಗಳು ಬೇಕು. ಸಾಹಿತ್ಯ ಕಲೆಗಳು ಮನುಷ್ಯರಲ್ಲಿ ಉದಾತ್ತ ಭಾವನೆಗಳನ್ನು ಬೆಳೆಸುತ್ತವೆ. ಕಲೆಗಳು ಉಳಿಯುವುದೇ ಹೃದಯವಂತ ಪ್ರೇಕ್ಷಕರಿಂದ ಎಂದು ತಿಳಿಸಿದರು.

ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಕಲಾವಿದರು ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.