ADVERTISEMENT

ಆನೇಕಲ್ | ರೈತರ ನಿರ್ಲಕ್ಷ್ಯ: ಭುಗಿಲೆದ್ದ ಆಕ್ರೋಶ

ತಾಲ್ಲೂಕು ಕಚೇರಿ ಮುಂಭಾಗದಲ್ಲಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 1:56 IST
Last Updated 2 ಸೆಪ್ಟೆಂಬರ್ 2025, 1:56 IST
ಆನೇಕಲ್‌ನ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಭಾರತೀಯ ಕಿಸಾನ್ ಸಂಘ ಪ್ರತಿಭಟನೆ ನಡೆಸಿತು
ಆನೇಕಲ್‌ನ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಭಾರತೀಯ ಕಿಸಾನ್ ಸಂಘ ಪ್ರತಿಭಟನೆ ನಡೆಸಿತು   

ಆನೇಕಲ್: ತಾಲ್ಲೂಕು ಕಚೇರಿಯಲ್ಲಿ ರೈತರ ಕೆಲಸ ಆಗುತ್ತಿಲ್ಲ ಎಂಬ ಕಾರಣಕ್ಕೆ ರೈತರು, ಭಾರತೀಯ ಕಿಸಾನ್‌ ಸಂಘ ಮತ್ತು ಪೊಲೀಸರು ನಡುವೆ ವಾಗ್ವಾದ ನಡೆದ ಘಟನೆ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ನಡೆಯಿತು.

ಬೆಳಗ್ಗೆ 9ರಿಂದಲೂ 100ಕ್ಕೂ ಹೆಚ್ಚು ರೈತರು ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಹಸಿರು ಶಾಲು ಹೊದ್ದು ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು. ರೈತರು ಸಮಾಧಾನಪಡಿಸಲು ಪೊಲೀಸರು ಹರಸಾಹಸಪಟ್ಟರು.

ತಾಲ್ಲೂಕು ಕಚೇರಿಯಲ್ಲಿ ರೈತರು ಹಸಿರು ಶಾಲು‌ ಹೊದ್ದು ತಮ್ಮ ಅರ್ಜಿ ಕೈಯಲ್ಲಿಡಿದು ಕೆಲಸಗಳಿಗಾಗಿ ಅಲೆದಾಡಿಸುತ್ತಿರುವ ತಾಲ್ಲೂಕು ಕಚೇರಿ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದರು. ತಹಶೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಲು ರೈತರು ಪ್ರಯತ್ನಿಸಿದಾಗ ರೈತರು ಮತ್ತು ಪೊಲೀಸರು ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ರೈತರನ್ನು ತಹಶೀಲ್ದಾರ್‌ ಕಚೇರಿಯಿಂದ ತಾಲ್ಲೂಕು ಕಚೇರಿ ಮುಂಭಾಗದವರೆಗೆ ಕರೆತರಲು ಹರಸಾಹಸಪಟ್ಟರು.

ADVERTISEMENT

ಭಾರತೀಯ ಕಿಸಾನ್‌ ಸಂಘದ ಕಾರ್ಯದರ್ಶಿ ಮಂಜುನಾಥ್‌ ಮಾತನಾಡಿ, ತಾಲ್ಲೂಕು ಕಚೇರಿಯಲ್ಲಿ ರೈತರ ಕೆಲಸ ಆಗುತ್ತಿಲ್ಲ. ರಿಯಲ್‌ ಎಸ್ಟೇಟ್‌, ಡೆವಲಪರ್‌ಗಳ ಕೆಲಸಗಳಿಗೆ ಆದ್ಯತೆ ನೀಡಲಾಗುತ್ತಿದೆ. ಜನಸಾಮಾನ್ಯರು ಮತ್ತು ರೈತರು ಕೆಲಸ ನಿರ್ಲಕ್ಷ್ಯ ಮಾಡಲಾಗುತ್ತಿದೆ. ವಿವಿಧ ಕಾರಣಗಳಿಗಾಗಿ ತಾಲ್ಲೂಕು ಕಚೇರಿಯಲ್ಲಿ ಸಲ್ಲಿಸಿರುವ ಅರ್ಜಿಗಳ ಸಂಖ್ಯೆ 1ಲಕ್ಷ ದಾಟಿದೆ. ಆದರೆ, ಅರ್ಜಿಗಳನ್ನು ವಿಲೇ ಮಾಡದೆ ತಾಲ್ಲೂಕು ಕಚೇರಿ ಸಿಬ್ಬಂದಿ ಮೀನಮೇಷ ಎಣಿಸುತ್ತಿದ್ದಾರೆ. ರೆಕಾರ್ಡ್‌ ರೂಂನ ಡಿಜಿಟಲೀಕರಣ ವ್ಯವಸ್ಥೆ ಕೂಡ ತಾಲ್ಲೂಕು ಕಚೇರಿಯಲ್ಲಿ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದಾಗಿ ಪ್ರತಿನಿತ್ಯ ರೈತರಿಗೆ ತೊಂದರೆಯಾಗುತ್ತಿದೆ ಎಂದರು.

ಖಾತೆ ಮಾಡಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ಲಂಚ ಕೇಳುತ್ತಿದ್ದಾರೆ. ಇ–ಖಾತೆ ಮಾಡಿಸಲು ರೈತರು ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ಕುಂಬಾರನಹಳ್ಳಿಯಲ್ಲಿ ಸ್ಮಶಾನ ವ್ಯವಸ್ಥೆಯಿಲ್ಲ. ಯಾರಾದರೂ ಸತ್ತರೇ ಎಲ್ಲಿ ಕಾರ್ಯ ಮಾಡಬೇಕು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಸ್ಮಶಾನಕ್ಕೆ ಜಾಗ ನೀಡಿ ಎಂದು ಹಲವು ಗ್ರಾಮ ಸಭೆಗಳಲ್ಲಿ ಕೋರಿದರೂ ಯಾವುದೇ ಉಪಯೋಗವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಿಸಾನ್‌ ಸಂಘದ ಸಹ ಕಾರ್ಯದರ್ಶಿ ಸುಬ್ರಮಣಿ, ತಾಲ್ಲೂಕಿನ ವ್ಯಾಪ್ತಿಯಲ್ಲಿ ಹಲವು ರಾಜಕಾಲುವೆಗಳು ಒತ್ತುವರಿಯಾಗಿದೆ. ಕೆರೆಗಳಿಗೆ ತ್ಯಾಜ್ಯ ನೀರು ಹರಿಯುತ್ತಿದೆ. ಆದರೆ, ತಾಲ್ಲೂಕು ಕಚೇರಿ ಮತ್ತು ತಾಲ್ಲೂಕು ಪಂಚಾಯಿತಿ ಈ ಬಗ್ಗೆ ಗಮನ ವಹಿಸುತ್ತಿಲ್ಲ. ರೈತರಿಗೆ ತೊಂದರೆಯಾಗದಂತೆ ತಾಲ್ಲೂಕು ಆಡಳಿತ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು.

ಭಾರತೀಯ ಕಿಸಾನ್‌ ಸಂಘದ ಉಪಾಧ್ಯಕ್ಷ ರಾಜಗೋಪಾಲ್‌, ಸಹಕಾರ್ಯದರ್ಶಿ ಅಶ್ವಿನ್‌, ಸ್ವರೂಪ್‌, ಮುಖಂಡರಾದ ವೆಂಕಟಸ್ವಾಮಿರೆಡ್ಡಿ, ಪ್ರವೀಣ್‌, ಸತೀಶ್‌ ಬಾಬು, ಸುರೇಶ್, ರಮೇಶ್‌ ರೆಡ್ಡಿ, ಮೇಡಹಳ್ಳಿ ಮುರುಗೇಶ್‌, ಬಳ್ಳೂರು ಪ್ರಸನ್ನ ಇದ್ದರು.

ಆನೇಕಲ್‌ನ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ರೈತರು ತಮ್ಮ ಅರ್ಜಿ ಹಿಡಿದು ಕಾಯುತ್ತಿರುವುದು

ವಿಷ ಕುಡಿಯುವೆ 

‘ನಮ್ಮ ಜಮೀನಿನ ದಾಖಲೆ ಸಂಗ್ರಹಿಸಲು ನಾವೇ ಪರದಾಡಬೇಕಾಗಿದೆ. ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಆದೇಶ ನಮ್ಮ ಪರವಾಗಿ ಬಂದಿದೆ. ಈ ಬಗ್ಗೆ ತಾಲ್ಲೂಕು ಆಡಳಿತ ಕ್ರಮ ವಹಿಸಿ ನ್ಯಾಯಪರವಾಗಿರಬೇಕು. ಮೂರನೇ ವ್ಯಕ್ತಿ ಪ್ರಭಾವದಿಂದಾಗಿ ನಮಗೆ ಅನ್ಯಾಯವಾದರೆ ವಿಷ ಕುಡಿಯುವುದಾಗಿ’ ರೈತ ಕೊಡಲಿಪುರ ಪುಟ್ಟರಾಜು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.