ADVERTISEMENT

ರಂಗೇರಿದ ಟಿಎಪಿಎಂಸಿಎಸ್‌ ಚುನಾವಣೆ: ‘ಕೈ’ ಶಕ್ತಿ ಪ್ರದರ್ಶನ

ಬೃಹತ್‌ ಮೆರವಣಿಗೆ ನಡೆಸಿದ ಕಾಂಗ್ರೆಸ್‌ । ನಾಮಪತ್ರ ಸಲ್ಲಿಕೆ ಮುಕ್ತಾಯ । ಒಟ್ಟು 58 ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 3:27 IST
Last Updated 26 ಅಕ್ಟೋಬರ್ 2025, 3:27 IST
ದೊಡ್ಡಬಳ್ಳಾಪುರದಲ್ಲಿ ಶನಿವಾರ ಟಿಎಪಿಎಂಸಿಎಸ್‌ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಬೃಹತ್‌ ಮೆರವಣಿಗೆ ನಡೆಸುವ ಮೂಲಕ ಆಗಮಿಸಿದರು
ದೊಡ್ಡಬಳ್ಳಾಪುರದಲ್ಲಿ ಶನಿವಾರ ಟಿಎಪಿಎಂಸಿಎಸ್‌ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಬೃಹತ್‌ ಮೆರವಣಿಗೆ ನಡೆಸುವ ಮೂಲಕ ಆಗಮಿಸಿದರು   

ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಎಂಸಿಎಸ್‌) ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಶನಿವಾರ ಕಾಂಗ್ರೆಸ್‌ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಬೃಹತ್‌ ಮೆರವಣಿಗೆ ನಡೆಸುವ ಮೂಲಕ ಶಕ್ತಿ ಪ್ರದರ್ಶಿಸಿ, ನಾಮಪತ್ರ ಸಲ್ಲಿಸಿದರು. ಹಾಗೆಯೇ ರಾಜ್ಯ ರೈತ ಸಂಘದ ಕಾರ್ಯಕರ್ತರು ಸಹ ತಮಟೆಯೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ಪರಿಶಿಷ್ಟ ಪಂಗಡ ಮೀಸಲು ಒಂದು ಸ್ಥಾನಕ್ಕೆ ತಿಮ್ಮಯ್ಯ ಅವರು ನಾಮ ಪತ್ರ ಸಲ್ಲಿಸಿದರು.

13 ನಿರ್ದೇಶಕ ಸ್ಥಾನಗಳಿಗೆ ಇಲ್ಲಿಯವರೆಗೆ ‘ಎ’ ತರಗತಿಯಿಂದ 13 ಹಾಗೂ ‘ಬಿ’ ತರಗತಿಯಿಂದ 45 ಜನ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಇದೇ ಪ್ರಥಮ ಬಾರಿಗೆ ಟಿಎಪಿಎಂಸಿಎಸ್‌ ಚುನಾವಣಾ ಕಣ ವಿಧಾನಸಭಾ ಚುನಾವಣೆಯಂತೆ ರಂಗೇರಿದ್ದು, ನಾಮಪತ್ರ ಸಲ್ಲಿಕೆಗೂ ಬೃಹತ್‌ ಮೆರವಣಿಗೆ ನಡೆಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿದೆ.

ಈಗಾಗಲೇ ಬಿಜೆಪಿ, ಜೆಡಿಎಸ್‌ ಬೆಂಬಲಿತ ಮೈತ್ರಿ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದು, ತೂಬಗೆರೆ ಹೋಬಳಿಯ ಸಾಧುಮಠದಿಂದ ಅಧಿಕೃತವಾಗಿ ಪ್ರಚಾರ ಆರಂಭಿಸಿದ್ದಾರೆ.

ADVERTISEMENT

ನಾಮಪತ್ರ ಸಲ್ಲಿಕೆ ನಂತರ ನಡೆದ ಸಭೆಯಲ್ಲಿ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, 80ರ ದಶಕದಲ್ಲಿ ರಾಮೇಗೌಡರಿಂದ ಆರಂಭವಾಗಿರುವ ಟಿಎಪಿಎಂಸಿಎಸ್‌ ಸಂಸ್ಥೆಯ ಬೆಳವಣಿಗೆಗೆ 10 ವರ್ಷಗಳ ಅವಧಿಯಲ್ಲಿ ಶಾಸಕರ ಅನುಧಾನ ಹಾಗೂ ಮಾಜಿ ಕೇಂದ್ರ ಸಚಿವ ವೀರಪ್ಪಮೊಯ್ಲಿ ಅವರ ಅನುದಾನದಲ್ಲಿ ಸಾಕಷ್ಟು ಕೆಲಸ ಮಾಡಿಸಲಾಗಿದೆ. ಟಿಎಪಿಎಂಸಿಎಸ್‌ ವತಿಯಿಂದ ನಡೆಯುತ್ತಿರುವ ಜನತಾ ಬಜಾರ್‌ಗಳನ್ನು ಹೋಬಳಿ ಕೇಂದ್ರಗಳಲ್ಲೂ ಸ್ಥಾಪನೆ ಮಾಡುವ ಮೂಲಕ ತಾಲ್ಲೂಕಿನ ಜನರಿಗೆ ದಿನಬಳಕೆಗೆ ಗುಣಮಟ್ಟದ ವಸ್ತುಗಳು ದೊರೆಯುವಂತೆ ಮಾಡಲಾಗುವುದು ಎಂದರು.

ದೊಡ್ಡಬಳ್ಳಾಪುರದಲ್ಲಿ ಶನಿವಾರ ಟಿಎಪಿಎಂಸಿಎಸ್‌ ಚುನಾವಣೆಗೆ ರಾಜ್ಯ ರೈತ ಸಂಘದ ಕಾರ್ಯಕರ್ತರು ನಾಮ ಪತ್ರ ಸಲ್ಲಿಕೆ ಆಗಮಿಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನಿನ ಸಾಧುಮಠದಲ್ಲಿ ಪೂಜೆ ಸಲ್ಲಿಸುವ ಮೂಲಕ ಟಿಎಪಿಎಂಸಿಎಸ್‌ (ಬಿಜೆಪಿಜೆಡಿಎಸ್‌) ಚುನಾವಣಯ ಪ್ರಚಾರಕ್ಕೆ ಎನ್‌ಡಿಎ ಬೆಂಬಲಿತ ಅರ್ಭ್ಯರ್ಥಿಗಳು ಚಾಲನೆ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.