ADVERTISEMENT

ದೇವನಹಳ್ಳಿ: ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಶಿಕ್ಷಣ ಅದಾಲತ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 3:52 IST
Last Updated 20 ಜನವರಿ 2021, 3:52 IST
ಶಿಕ್ಷಣ ಅದಾಲತ್ ನಲ್ಲಿ ಗಂಗಮಾರೇಗೌಡ ಭಾಗವಹಿಸಿದ್ದರು
ಶಿಕ್ಷಣ ಅದಾಲತ್ ನಲ್ಲಿ ಗಂಗಮಾರೇಗೌಡ ಭಾಗವಹಿಸಿದ್ದರು   

ದೇವನಹಳ್ಳಿ: ಶಿಕ್ಷಕರು ಸಮಸ್ಯೆಯನ್ನು ಮುಕ್ತವಾಗಿ ಹೇಳಿಕೊಂಡು ಬಗೆಹರಿಸಿಕೊಳ್ಳಲು ಶಿಕ್ಷಣ ಅದಾಲತ್ ಸಹಕಾರಿಯಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ ಹೇಳಿದರು.

ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ನಡೆದ ಶಿಕ್ಷಕರ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಕರ ವೇತನ ಹಿಂಬಾಕಿ (ಅರಿಯರ್ಸ್), ಮೂಲ ವೇತನದಲ್ಲಿ ವ್ಯತ್ಯಾಸ, ವೈದ್ಯಕೀಯ ವೆಚ್ಚ ಮರುಪಾವತಿ, ಕುಟುಂಬ ಯೋಜನೆ ಭತ್ಯೆ, ಟಿ.ಜಿ.ಪಿ ಶಿಕ್ಷಕರ ಮೂಲ ವೇತನದಲ್ಲಿ ಏರುಪೇರು ಸೇರಿದಂತೆ ಸಮಸ್ಯೆಗಳಿದ್ದು ನಿವಾರಣೆಯಾದರೆ ನೆಮ್ಮದಿಯಾಗಿ ಬೋಧನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇಲ್ಲದಿದ್ದರೆ ಒಲ್ಲದ ಮನಸ್ಸಿನಿಂದ ಪಾಠ ಮಾಡಬೇಕಾದ ಸ್ಥಿತಿ ಇದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥನಾರಾಯಣ ಮಾತನಾಡಿ, ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರಿಗೆ ಶಿಕ್ಷಣ ಅದಾಲತ್ ಉತ್ತಮ ವೇದಿಕೆಯಾಗಿದೆ. ಇದು ರಾಜ್ಯದಾದ್ಯಂತ ಇಲಾಖೆ
ಸ್ವಯಂ ಪ್ರೇರಿತವಾಗಿ ನಡೆಸಿದರೆ ಲಕ್ಷಾಂತರ ಶಿಕ್ಷಕರ ಸಮಸ್ಯೆ ಬಗೆಹರಿಯಲಿದೆ. ಇಲ್ಲದಿದ್ದರೆ ಶಾಲೆ ಬಿಟ್ಟು ಕಚೇರಿಗೆ ಅಲೆದಾಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ ಎಂದು ಹೇಳಿದರು.

ADVERTISEMENT

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಅಧ್ಯಕ್ಷ ಬಿ.ಆದರ್ಶ್ ಮಾತನಾಡಿ, ಸಂಘ ಮೊದಲ ಬಾರಿಗೆ ಶಿಕ್ಷಕರಿಗಾಗಿ ಆನ್‌ಲೈನ್‌ಲ್ಲಿ ವಿಮೆ ಪಾವತಿಸುವ ಕಾರ್ಯಾಗಾರ ನಡೆಸಿತ್ತು. ಪ್ರಸ್ತುತ ಶೈಕ್ಷಣಿಕ ಸಾಲಿನ ಮನ್ವಂತರದ ಎರಡನೇ ಕಾರ್ಯಕ್ರಮ ಶಿಕ್ಷಣ ಅದಾಲತ್ ನಲ್ಲಿ 120 ಶಿಕ್ಷಕರು ನೋಂದಾಯಿಸಿ ಕೊಂಡಿರುವುದು ಸಂತಸವಾದರೂ ಸಮಸ್ಯೆಗಳ ಪರಿಹಾರಕ್ಕೆ ಉತ್ತಮ ಪ್ರಯತ್ನವಾಗಿದೆ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ, ಉಪಕಾರ್ಯದರ್ಶಿ ಜಾಯ್, ಖಜಾಂಚಿ ಎಲ್.ಎಸ್.ಯತೀಸ್ ಕುಮಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.