ADVERTISEMENT

ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆ ಗುರಿ: ಧೀರಜ್ ಮುನಿರಾಜ್

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2023, 13:35 IST
Last Updated 6 ಸೆಪ್ಟೆಂಬರ್ 2023, 13:35 IST
ದೊಡ್ಡಬಳ್ಳಾಪುರದಲ್ಲಿ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು
ದೊಡ್ಡಬಳ್ಳಾಪುರದಲ್ಲಿ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು   

ದೊಡ್ಡಬಳ್ಳಾಪುರ: ನಗರದ ಕೆ.ಎಂ.ಎಚ್ ಹಾಲ್‌ನಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿ ಪ್ರಯುಕ್ತ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ನಡೆಯಿತು. 

ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ‘ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಓದಿ ಉನ್ನತ ಶಿಕ್ಷಣ ಪಡೆಯುವ ಎಲ್ಲ ವರ್ಗದ ವಿದ್ಯಾರ್ಥಿಗಳಿಗು ಶುಲ್ಕ ರಹಿತ ಶಿಕ್ಷಣ ಯೋಜನೆ ಜಾರಿಗೆ ತರುವಂತೆ ಅಧಿವೇಶನದಲ್ಲಿ ಆಗ್ರಹಿಸಲಾಗುವುದು’ ತಿಳಿಸಿದರು. 

‘ತಾಲ್ಲೂಕಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆ ತರುವ ಗುರಿ ಇದೆ. ಶಿಥಿಲಾವಸ್ಥೆಯಲ್ಲಿರುವ ಹಾಗೂ ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಈಗಾಗಲೇ ಪಟ್ಟಿಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ತಾವು ಕಲಿಸಿದ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರಿದಾಗ ಶಿಕ್ಷಕರು ಸಹ ಪೋಷಕರಷ್ಟೇ ಸಂತಸಪಡುತ್ತಾರೆ. ಗುರುವನ್ನು ಪೂಜ್ಯನೀಯ ಸ್ಥಾನದಲ್ಲಿ ಕಾಣುವ ಸಮಾಜ ನಮ್ಮದು’ ಎಂದರು.

ADVERTISEMENT

ಸಮಾರಂಭದಲ್ಲಿ ಆಶೀರ್ವಚನ ನೀಡಿದ ತಪಸೀಹಳ್ಳಿಯ ಪುಷ್ಪಾಂಡಜ ಮಹರ್ಷಿ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ, ತತ್ವಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರು ತಮ್ಮ ಪ್ರತಿಭೆ ಹಾಗೂ ಜ್ಞಾನದಿಂದ ಶಿಕ್ಷಕ ವೃತ್ತಿಯಿಂದ ರಾಷ್ಟ್ರಪತಿ ಹುದ್ದೆಗೇರಿದ ಮಹಾನ್ ಸಾಧಕ. ಜ್ಞಾನವಂತರಿಗೆ ಎಲ್ಲೆಡೆ ಗೌರವ, ಮನ್ನಣೆ ದೊರೆಯುತ್ತದೆ ಎನ್ನುವುದಕ್ಕೆ ರಾಧಾಕೃಷ್ಣನ್‌ ನಿದರ್ಶನರಾಗಿದ್ದಾರೆ. ಇವತ್ತಿನ ಶಿಕ್ಷಕರಿಗೆ ವಿದ್ಯಾರ್ಥಿಗಳ ಮುಂದೆ ನಿಂತು ಪಾಠ ಮಾಡುವುದು ದೊಡ್ಡ ಸವಾಲಾಗಿದೆ. ಎಲ್ಲ ಮಾಹಿತಿಯು ಅಂಗೈಯಲ್ಲೇ ಸಿಗುತ್ತಿದೆ. ಆದರೆ ಇದನ್ನು ಮೀರಿ ಮಕ್ಕಳಿಗೆ ವಿದ್ಯೆ ಕಲಿಸುವ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ಅಭಿಪ್ರಾಯಪಟ್ಟರು.

ಇವತ್ತಿನ ವೇಗದ ಬದುಕಿನಲ್ಲಿ ಶಿಕ್ಷಕರಿಗೆ ಆಧ್ಯಾತ್ಮವು ಮುಖ್ಯವಾಗಿದೆ. ಮನಸ್ಸಿನ ಏಕಾಗ್ರತೆ, ನೆಮ್ಮದಿ ಬದುಕಿಗೆ ಧ್ಯಾನ ಬಹುಮುಖ್ಯ. ಧ್ಯಾನ ಯಾವುದೇ ಒಂದು ಧರ್ಮ, ಜಾತಿಗೆ ಸೀಮತವಾಗಿಲ್ಲ. ಮನಸ್ಸಿನ ಆರೋಗ್ಯಕ್ಕಾಗಿ ಎಲ್ಲರೂ ಧ್ಯಾನದ ಮೊರೆ ಹೋಗುತ್ತಾರೆ ಎಂದರು. 

ಸಮಾರಂಭದಲ್ಲಿ ತಹಶೀಲ್ದಾರ್‌ ವಿಭಾ ವಿದ್ಯಾ ರಾಥೋಡ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎನ್‌.ಮುನಿರಾಜ್‌, ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ರಂಗಪ್ಪ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಟಿ.ವಿ.ಲಕ್ಷ್ಮಿನಾರಾಯಣ್‌, ಟಿಎಪಿಸಿಎಂಸ್ ಅಧ್ಯಕ್ಷ ವಿ.ಆಂಜನೇಗೌಡ, ಕೆಸ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್‌, ಬಿ.ಸಿ.ನಾರಾಯಣಸ್ವಾಮಿ, ಅಶ್ವತ್ಥನಾರಾಯಣಗೌಡ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಎಚ್‌.ಎನ್‌.ದಾಕ್ಷಾಯಿಣಿ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಯು.ಸುನಿಲ್‌ ನಾಯ್ಕ್‌, ಪ್ರಭಾರ ಕ್ಷೇತ್ರ ಸಮನ್ವಯ ಅಧಿಕಾರಿ ಜಿ.ಆರ್‌.ಹನುಮಂತರಾಯಪ್ಪ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎನ್‌.ಲಕ್ಷ್ಮಿನರಸಿಂಹಯ್ಯ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಜೈಕುಮಾರ್‌ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.