ADVERTISEMENT

ತಂತ್ರಜ್ಞಾನ, ಸುಜ್ಞಾನದ ಜತೆಗಿರುವ ವಿಜ್ಞಾನ: ಎಸ್.ಮಲ್ಲಿಕಾರ್ಜುನ್

ವಿಜಯಪುರ ಸರ್ಕಾರಿ ಮಾದರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ವಿಜ್ಞಾನ ಮೇಳ’

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 12:31 IST
Last Updated 31 ಜನವರಿ 2020, 12:31 IST
ವಿಜಯಪುರದ ಸರ್ಕಾರಿ ಮಾದರಿ ಹೆಣ್ಣು ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿಗಳು ಸೂರ್ಯಗ್ರಹಣದ ಕುರಿತು ವಿವರಿಸಿದರು
ವಿಜಯಪುರದ ಸರ್ಕಾರಿ ಮಾದರಿ ಹೆಣ್ಣು ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿಗಳು ಸೂರ್ಯಗ್ರಹಣದ ಕುರಿತು ವಿವರಿಸಿದರು   

ವಿಜಯಪುರ: ಯುವಶಕ್ತಿ ಸದಾ ಜ್ಞಾನದಾಹ ಹೊಂದಿರಬೇಕು. ದಿನ ನಿತ್ಯದ ಎಲ್ಲಾ ಚಟುವಟಿಕೆಗಳಲ್ಲಿ ವೈಜ್ಞಾನಿಕ ತತ್ವ ಸಿದ್ಧಾಂತಗಳು ಅಡಗಿವೆ. ತತ್ವಜ್ಞಾನವನ್ನು ಒಳಗೊಂಡ ತಂತ್ರಜ್ಞಾನ ಮತ್ತು ಸುಜ್ಞಾನದೊಂದಿಗೆ ಇರುವ ವಿಜ್ಞಾನವು ದೇಶದ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿ ಪರಿಣಮಿಸುತ್ತದೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಎಸ್.ಮಲ್ಲಿಕಾರ್ಜುನ್ ಹೇಳಿದರು.

ಇಲ್ಲಿನ ಸರ್ಕಾರಿ ಮಾದರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ‘ವಿಜ್ಞಾನ ಮೇಳ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ದೈನಂದಿನ ಜೀವನದಲ್ಲಿ ಬಳಸುವ ನಾನಾ ರೀತಿಯ ವಸ್ತುಗಳಿಗೆ ವೈಜ್ಞಾನಿಕ ಆವಿಷ್ಕಾರಗಳೇ ಕಾರಣ. ಹಿಂದೆ ಹಳ್ಳಿಯ ಮಕ್ಕಳು ತೆಂಗಿನ ಸೋಗೆಯನ್ನು ಬಳಸಿ ಗಿರಿಗಿಟ್ ಎನ್ನುವ ವಸ್ತು ತಯಾರಿಸುತ್ತಿದ್ದರು. ಈಗ ವಿದ್ಯುತ್ತಿನ ಅನ್ವೇಷಣೆಯಿಂದಾಗಿ ಅದನ್ನೇ ನಾವು ಇಂದು ಫ್ಯಾನ್ ರೂಪದಲ್ಲಿ ಬಳಸುತ್ತಿದ್ದೇವೆ’ ಎಂದರು.

‘ನಮ್ಮ ಆವಿಷ್ಕಾರಗಳಲ್ಲಿ ಕೆಡುಕು ಕಡಿಮೆಯಿದ್ದು, ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕು. ವಿವೇಕಾನಂದರು ದೇಶದ ಒಳಿತಿಗೆ ಯುವಶಕ್ತಿಯು ಅನಿವಾರ್ಯವಾಗಿದೆ ಎಂದಿದ್ದರು. ಅಂತೆಯೇ ದೇಶವು ಯುವ ವಿಜ್ಞಾನಿಗಳನ್ನು ಹೊಂದಿದಾಗ ವಿಶ್ವ ಮಟ್ಟದಲ್ಲಿಯೇ ಅಗ್ರಮಾನ್ಯ ಶಕ್ತಿಶಾಲಿ ರಾಷ್ಟ್ರ ಎನಿಸಿಕೊಳ್ಳುವುದು’ ಎಂದು ಹೇಳಿದರು.

ADVERTISEMENT

ಮುಖ್ಯಶಿಕ್ಷಕ ಮನೋಹರ್ ಮಾತನಾಡಿ, ‘ನಾವು ಮಾಡುವ ಪ್ರತಿಯೊಂದು ಚಟುವಟಿಕೆಗಳೂ ಅನ್ವೇಷಣೆಗೆ ಕಾರಣವಾಗುತ್ತವೆ. ವಿದ್ಯಾರ್ಥಿಗಳು ಜ್ಞಾನಾರ್ಜನೆಯೊಂದಿಗೆ ಕ್ರಿಯಾಶೀಲತೆ, ಸಂವಹನ ಕಲೆ, ವೈಜ್ಞಾನಿಕ ದೃಷ್ಟಿಕೋನ ಮುಂತಾದವನ್ನು ಅಳವಡಿಸಿಕೊಂಡಾಗ ಅಭಿವೃದ್ಧಿ ಕಡೆ ಸಾಗಬಹುದು’ ಎಂದರು.

‘ನಮ್ಮ ಎಲ್ಲ ಚಟುವಟಿಕೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಹಾಸುಹೊಕ್ಕಾಗಿ ನಿಂತಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಿಂದ ರಚನಾತ್ಮಕ ರೀತಿಯಲ್ಲಿ ಕೆಲಸ ಮಾಡುವ ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌ಗಳು ಹುಟ್ಟುತ್ತಾ ಸಾಗಿದಾಗ ದೇಶವು ಸಮಗ್ರ ಬೆಳವಣಿಗೆಯನ್ನು ಸಾಧಿಸಬಹುದು’ ಎಂದರು.

ಶಾಲೆಯಲ್ಲಿ ಮಕ್ಕಳು, ತುಂತುರು ನೀರಾವರಿ ಪದ್ಧತಿ, ಮಳೆನೀರು ಸಂಗ್ರಹ ವ್ಯವಸ್ಥೆ, ಸಾವಯವ ಆಹಾರ ಧಾನ್ಯಗಳ ಬೆಳವಣಿಗೆ, ಕೃಷಿ, ತೋಟಗಾರಿಕೆ, ಸೌರಮಂಡಲದಲ್ಲಿ ನಡೆಯುವ ಚಂದ್ರಗ್ರಹಣ, ಸೂರ್ಯಗ್ರಹಣ, ಬೆಳಕಿನ ಪ್ರತಿಫಲನ, ತ್ಯಾಜ್ಯ ವಸ್ತುಗಳಿಂದ ವಸ್ತುಗಳ ತಯಾರಿಕೆ, ಪವಾಡ ಬಯಲು ಮಾಡುವುದು, ದೂರದರ್ಶಕಗಳ ಮೂಲಕ ಅಸ್ಥಿಪಂಜರ, ನರಮಂಡಲ ರಚನೆ, ಆಹಾರದ ಗಿಡಗಳು, ಆಯಸ್ಕಾಂತಗಳ ಕಾರ್ಯ, ಸ್ವಚ್ಚ ಭಾರತ ಅಭಿಯಾನ, ಟೆಲಿಸ್ಕೋಪ್, ಸೇರಿದಂತೆ ವಿವಿಧ ಬಗೆಯ ವಿಜ್ಞಾನ ಮಾದರಿಗಳನ್ನು ಮಕ್ಕಳು ತಯಾರಿಸಿದ್ದರು.

ವಿವಿಧ ಶಾಲೆಗಳ ಮಕ್ಕಳು ವಿಜ್ಞಾನ ಮೇಳಕ್ಕೆ ಬಂದು ಮಕ್ಕಳು ತಯಾರಿಸಿದ್ದ ಮಾದರಿಗಳನ್ನು ವೀಕ್ಷಿಸಿ ವಿವರ ಪಡೆದುಕೊಂಡರು. ಶಾಲೆಯ ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.