ADVERTISEMENT

ಹೂವು ಬೆಳೆಗಾರರ ಸಾಲದ ಮೇಲಿನ ಬಡ್ಡಿ ಮನ್ನಾ ಕೇಂದ್ರ ಹಣಕಾಸು ಸಚಿವರ ಗಮನಕ್ಕೆ

ದೊಡ್ಡಬಳ್ಳಾಪುರ: ಮನವಿ ಸ್ವೀಕರಿಸಿ ಸಂಸತ್‌ ಸದಸ್ಯ ತೇಜಸ್ವಿ ಸೂರ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 5:40 IST
Last Updated 16 ಏಪ್ರಿಲ್ 2020, 5:40 IST
ಹಸಿರು ಮನೆ ಹೂವು ಬೆಳೆಗಾರರ ಸಂಘದ ವತಿಯಿಂದ ಸಚಿವ ಆರ್‌.ಅಶೋಕ್‌, ಸಂಸತ್‌ ಸದಸ್ಯ ತೇಜಸ್ವಿ ಸೂರ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು
ಹಸಿರು ಮನೆ ಹೂವು ಬೆಳೆಗಾರರ ಸಂಘದ ವತಿಯಿಂದ ಸಚಿವ ಆರ್‌.ಅಶೋಕ್‌, ಸಂಸತ್‌ ಸದಸ್ಯ ತೇಜಸ್ವಿ ಸೂರ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು   

ದೊಡ್ಡಬಳ್ಳಾಪುರ: ‘ಹೂವು ಬೆಳೆಗಾರರರು ಪಾಲಿಹೌಸ್‌ ನಿರ್ಮಾಣಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಪಡೆದಿರುವ ಸಾಲದ ಮೇಲಿನ ಬಡ್ಡಿ ಮನ್ನಾ ಹಾಗೂ ಇಎಂಐ ಕಂತು ಪಾವತಿ ಮುಂದೂಡುವಂತೆ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡುವಂತೆ ಕೇಂದ್ರದ ಹಣಕಾಸು ಸಚಿವರಿಗೆ ಮನವಿ ಮಾಡಲಾಗುವುದು’ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸತ್‌ ಸದಸ್ಯ ತೇಜಸ್ವಿ ಸೂರ್ಯ ಹೇಳಿದರು.

ಅವರು ನಗರದ ಎಪಿಎಂಸಿ ಸಭಾಂಗಣದಲ್ಲಿ ಬುಧವಾರ ಹೂವು ಬೆಳೆಗಾರರಿಂದ, ‘ಮನವಿ ಸ್ವೀಕರಿಸಿ ಮಾತನಾಡಿ, ‘ಈಗಾಗಲೇ ಮನೆ ಸಾಲ, ವಿಮಾ ಕಂಪನಿಗಳು ಸೇರಿದಂತೆ ವಿವಿಧ ವಲಯಗಳಿಗೆ ಇಎಂಐ ಪಾವತಿಗೆ ಮೂರು ತಿಂಗಳ ಕಾಲ ಸಮಯಾವಕಾಶ ನೀಡಲಾಗಿದೆ. ಹಣ್ಣು, ತರಕಾರಿ ಬೆಳೆಗಾರರಿಗಿಂತಲೂ ಹೂವು ಬೆಳೆಯುವ ರೈತರು ಸಾಕಷ್ಟು ನಷ್ಟಕ್ಕೆ ಸಿಲುಕಿದ್ದಾರೆ. ಸದ್ಯಕ್ಕೆ ಹೂವು ಬೆಳೆಗಾರರಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಸಾಧ್ಯವೇ ಇಲ್ಲದಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವಂತೆ, ಇಎಂಐ ಕಂತಿನ ಹಣ ಪಾವತಿಗೆ ಅವಕಾಶ ನೀಡುವಂತೆ ಕೇಳುತ್ತಿರುವುದು ನ್ಯಾಯಸಮ್ಮತವಾಗಿದೆ. ಹಣಕಾಸು ಸಚಿವರಿಗೆ ಹೂವು ಬೆಳೆಗಾರರ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗುವುದು’ ಎಂದರು.

ಕೊರೊನಾ 10 ಜನರ ಮಾದರಿಗಳು ನೆಗೆಟಿವ್‌:‘ತಾಲ್ಲೂಕಿನ ಕೋಡಿಪಾಳ್ಯ ಗ್ರಾಮದಲ್ಲಿ 39 ವರ್ಷದ ವ್ಯಕ್ತಿಯೊಬ್ಬರಿಗೆ ಕೋವಿಡ್‌-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆ ವ್ಯಕ್ತಿಯೊಂದಿಗೆ ಪ್ರಾಥಮಿಕ ಹಂತದ ಸಂಪರ್ಕದಲ್ಲಿದ್ದ 10 ಜನರ ಗಂಟಲ ದ್ರವ, ರಕ್ತದ ಮಾದರಿಗಳ ಫಲಿತಾಂಶ ನೆಗೆಟಿವ್‌ ಬಂದಿದ್ದು ಸದ್ಯಕ್ಕೆ ಸೋಂಕು ಯಾರಿಗೂ ಹರಡಿಲ್ಲ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಹೇಳಿದರು.

ADVERTISEMENT

ವಲಸೆ ಕಾರ್ಮಿಕರು ಸ್ವಗ್ರಾಮಗಳಿಗೆ ಹೋಗುವಂತಿಲ್ಲ:ಕಂದಾಯ ಸಚಿವ ಆರ್‌.ಅಶೋಕ್‌ ಮಾತನಾಡಿ, ‘ವಲಸೆ ಕಾರ್ಮಿಕರನ್ನು ಕೈಗಾರಿಕೆಗಳವರು ಹೊರ ಹೋಗುವಂತೆ ಕಳುಹಿಸಿ ಕಾರ್ಮಿಕರು ಬೀದಿಗೆ ಬರುವಂತೆ ಮಾಡಿದರೆ ಕಾರ್ಖಾನೆ ಮಾಲೀಕರ ವಿರುದ್ದ 2005ರ ಪ್ರಕೃತಿ ವಿಕೋಪ ನಿರ್ವಹಣಾ ಕಾಯಿದೆ ಅಡಿಯಲ್ಲಿ ದೂರು ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ನಮ್ಮಲ್ಲಿ ಯಾವುದೇ ಕಾರಣಕ್ಕೂ ವಲಸೆ ಕಾರ್ಮಿಕರು ಈಗ ಇರುವ ಸ್ಥಳದಿಂದ ತಮ್ಮ ಸ್ವಗ್ರಾಮಗಳಿಗೆ
ತೆರಳಲು ಅವಕಾಶವೇ ಇಲ್ಲ. ಕಾರ್ಮಿಕರಿಗೆ ಅಗತ್ಯ ಇರುವ ಸೌಲಭ್ಯ ನೀಡುವುದರಲ್ಲಿ ಕೈಗಾರಿಕೆಗಳ ಮಾಲೀಕರ ಜವಾಬ್ದಾರಿಯೂ ಇದೆ. ಇಷ್ಟು ವರ್ಷಗಳ ಕಾಲ ದುಡಿಸಿಕೊಂಡಿರುವ ಮಾಲೀಕರು ಕಷ್ಟದ ಸಮಯದಲ್ಲಿ ಕಾರ್ಮಿಕರನ್ನು ಬೀದಿಗೆ ತಳ್ಳುವುದು ಮಾನವೀಯತೆ ಅಲ್ಲ. ಈ ಸಮಯದಲ್ಲಿ ಯಾರನ್ನು ಸಹ ಕೆಲಸದಿಂದ ತೆಗೆಯುವಂತೆಯೂ ಇಲ್ಲ ಎಂದು ಹೇಳಿದರು. ಸರ್ಕಾರವು ಸಹ ವಲಸೆ ಕಾರ್ಮಿಕರಿಗೆ ಅಗತ್ಯ ಇರುವ ಎಲ್ಲಾ ರೀತಿಯ ಸೌಲಭ್ಯವನ್ನು ಕಾರ್ಮಿಕ ಇಲಾಖೆ ಮೂಲಕ ನೀಡಲಾಗುತ್ತಿದೆ’ ಎಂದರು.

ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ‘ಪಾಲಿಹೌಸ್‌ಗಳು ಮಳೆ, ಬಿರುಗಾಳಿಗೆ ಹಾಳಾದಾಗ ಪರಿಹಾರ ನೀಡಲು ಕ್ರಮ ವಹಿಸಬೇಕು’ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಎಪಿಎಂಸಿ ಅಧ್ಯಕ್ಷ ಮಂಜುನಾಥ್‌, ಉಪಾಧ್ಯಕ್ಷ ಸುಧಾಕರ್‌, ನಿರ್ದೇಶಕರಾದ ವಿಶ್ವನಾಥರೆಡ್ಡಿ, ಮಂಜುನಾಥ್‌, ಬಿ.ವಿ.ಲೋಕೇಶ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್‌, ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಚುಂಚೇಗೌಡ, ಹೂವು ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಎಸ್‌.ಚನ್ನರಾಮಯ್ಯ, ಖಜಾಂಚಿ ವೆಂಕಟೇಶ್‌, ಕಾರ್ಯದರ್ಶಿ ಶ್ಯಾಮಸುಂದರ್‌, ಸಿ.ಡಿ.ಸತ್ಯನಾರಾಯಣಗೌಡ ಇದ್ದರು.

ಮನವಿಯಲ್ಲೇನಿದೆ?
ಸಂಸದರಿಗೆ ಸಲ್ಲಿಸಿದ ಮನವಿಯಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಹಸಿರು ಮನೆ ನಿರ್ಮಾಣಕ್ಕೆ ಪಡೆದಿರುವ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು. ಕೊರೊನಾ ಹಿನ್ನೆಲೆಯಲ್ಲಿ ಹೂವಿನ ಮಾರುಕಟ್ಟೆ ಸುಧಾರಣೆಯಾಗಲು ಸಾಕಷ್ಟು ಸಮಯವಾಗಲಿದೆ. ಹೀಗಾಗಿ ಆರು ತಿಂಗಳ ಮಟ್ಟಿಗೆ ಸಾಲದ ಕಂತಿನ (ಇಎಂಐ) ಮುಂದೂಡಬೇಕು. ಹಸಿರು ಮನೆಯಲ್ಲಿನ ಹೂವು ಬೆಳೆಗೆ ವಿದ್ಯುತ್ ಬಳಕೆಗೆ ವಿಧಿಸಲಾಗುತ್ತಿರುವ ವಿದ್ಯುತ್ ಶುಲ್ಕವನ್ನು ಆರು ತಿಂಗಳ ಮಟ್ಟಿಗೆ ಮನ್ನಾ ಮಾಡಬೇಕು. ಹೂವು ಮಾರಾಟಕ್ಕೆ ಇಡೀ ರಾಜ್ಯದಲ್ಲಿ ಎಲ್ಲಿಯೂ ಮಾರುಕಟ್ಟೆ ಇಲ್ಲ. ಬೆಂಗಳೂರಿನ ಹೆಬ್ಬಾಳದಲ್ಲಿ ಕೇವಲ ಗುಲಾಬಿ ಹೂವು ಮಾರಾಟಕ್ಕೆ ಮಾತ್ರ ಮಾರುಕಟ್ಟೆ ಇದೆ. ಹೀಗಾಗಿ ಶೇ 70ರಷ್ಟು ರೈತರು ಬೆಳೆಯುವ ಜರ್ಬೆರ, ಕಾರ್ನಿಷನ್ ಮುಂತಾದ ರಫ್ತು ಗುಣಮಟ್ಟದ ಹೂವುಗಳ ಮಾರಾಟಕ್ಕೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪ ಹೂವು ಮಾರಾಟ ಮಾಡಲು ಸುಸಜ್ಜಿತ ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.