ದೊಡ್ಡಬಳ್ಳಾಪುರ: ಲೇಖಕ ವಸುಧೇಂದ್ರ ಅವರ ‘ತೇಜೋ ತುಂಗಭದ್ರಾ’ ಕಾದಂಬರಿಯಲ್ಲಿ ಚಾರಿತ್ರಿಕ ಘಟನೆ, ಸಾಮಾಜಿಕ ಆಚರಣೆಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ ಎಂದು ಡಾ.ನಾ. ಸೋಮೇಶ್ವರ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ’ಅಂಗಳದಲ್ಲಿ ತಿಂಗಳ ಪುಸ್ತಕ ಯೋಜನೆ’ ಮಾಲಿಕೆ ಅಡಿ ದೇವರಾಜ ಅರಸು ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚರಿತ್ರೆ, ಪ್ರೀತಿ, ಕ್ರೌರ್ಯ, ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಒಳನೋಟ ಸೇರಿದಂತೆ ಅನೇಕ ಮುಖಗಳನ್ನು ಅನಾವರಣ ಮಾಡಿದ್ದಾರೆ. ಈ ಕಾದಂಬರಿ 20 ಮುದ್ರಣ ಕಂಡಿರುವುದು ಕನ್ನಡ ಸಾಹಿತ್ಯದ ಮಟ್ಟಿಗೆ ದಾಖಲೆ ಎಂದರು.
ತೇಜೋ ತುಂಗಭದ್ರಾ ಕಾದಂಬರಿ ಇಂಗ್ಲಿಷ್, ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಪ್ರಕಟಗೊಂಡಿದೆ. ಇತರ ಭಾರತೀಯ ಭಾಷೆಗಳಲ್ಲಿಯೂ ಅನುವಾದಿಸಲು ಅನುಮತಿ ಕೋರಿದ್ದಾರೆ ಎಂದು ಕಾದಂಬರಿಕಾರ ವಸುಧೇಂದ್ರ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ, ತೇಜೋ ತುಂಗಭದ್ರಾ ಅನೇಕ ಕಾರಣಗಳಿಗಾಗಿ ಕನ್ನಡ ಸಾಹಿತ್ಯದಲ್ಲಿ ಬಹು ಮುಖ್ಯ ಸಾಹಿತ್ಯ ಕೃತಿಯಾಗಿ ನಿಲ್ಲುತ್ತದೆ ಎಂದರು.
ದೇವರಾಜ ಅರಸು ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಜೆ.ರಾಜೇಂದ್ರ, ಪ್ರಾಂಶುಪಾಲ ಡಾ. ಎಂ.ಎಸ್.ಗೌರಪ್ಪ, ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.