ADVERTISEMENT

ದೇಶಪ್ರೇಮಕ್ಕೆ ಸ್ಕೌಟ್ಸ್, ಗೈಡ್ಸ್: ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್.ರಾಮಮೂರ್ತಿ

ಬೆಂಗಳೂರು ಪೂರ್ವ ಜಿಲ್ಲೆಯ ವಾರ್ಷಿಕ ಮಹಾಸಭೆಯಲ್ಲಿ ಅಭಿಮತ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 2:44 IST
Last Updated 24 ಸೆಪ್ಟೆಂಬರ್ 2020, 2:44 IST
ಆನೇಕಲ್‌ನಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಬೆಂಗಳೂರು ಪೂರ್ವ ಜಿಲ್ಲೆಯ ವಾರ್ಷಿಕ ಮಹಾಸಭೆಯಲ್ಲಿ ಸ್ಕೌಟ್ಸ್ ಸಂಸ್ಥೆಯ ಕೇಂದ್ರ ಸ್ಥಾನಿಕ ಆಯುಕ್ತ ಚಿನ್ನಸ್ವಾಮಿರೆಡ್ಡಿ ಮಾತನಾಡಿದರು
ಆನೇಕಲ್‌ನಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಬೆಂಗಳೂರು ಪೂರ್ವ ಜಿಲ್ಲೆಯ ವಾರ್ಷಿಕ ಮಹಾಸಭೆಯಲ್ಲಿ ಸ್ಕೌಟ್ಸ್ ಸಂಸ್ಥೆಯ ಕೇಂದ್ರ ಸ್ಥಾನಿಕ ಆಯುಕ್ತ ಚಿನ್ನಸ್ವಾಮಿರೆಡ್ಡಿ ಮಾತನಾಡಿದರು   

ಆನೇಕಲ್: ‘ಸ್ಕೌಟ್ಸ್‌ಮತ್ತು ಗೈಡ್ಸ್ ಶಿಕ್ಷಣ ಇಲಾಖೆಯ ಅವಿಭಾಜ್ಯ ಅಂಗವಾಗಿದೆ. ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮತ್ತು ನಾಯಕತ್ವ, ಶಿಸ್ತು ಬೆಳೆಯಲು ಸೂಕ್ತ ವೇದಿಕೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್.ರಾಮಮೂರ್ತಿ ತಿಳಿಸಿದರು.

ಅವರು ಪಟ್ಟಣದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನ ಬೆಂಗಳೂರು ಪೂರ್ವ ಜಿಲ್ಲೆಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

‘ಸ್ಕೌಟ್ಸ್ ಮತ್ತು ಗೈಡ್ಸ್ ಸದಾಕಾಲ ಸೇವಾ ಚಟುವಟಿಕೆಗಳಲ್ಲಿ ಭಾಗಿಗಳಾಗಿರುತ್ತಾರೆ. ಕೋವಿಡ್ ಸಂದರ್ಭದಲ್ಲಿ ಪೊಲೀಸರೊಂದಿಗೆ ಹಗಲಿರುಳು ಶ್ರಮಿಸಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವು ಸೇವಾ ಕಾರ್ಯಗಳ ಮೂಲಕ ಆನೇಕಲ್ ಸ್ಕೌಟ್ಸ್‌ ಮತ್ತು ಗೈಡ್ಸ್ ಸಂಸ್ಥೆಯು ಮಾದರಿಯಾಗಿದೆ. ಎಲ್ಲಾ ಶಾಲೆಗಳಲ್ಲಿ ಘಟಕಗಳನ್ನು ತೆರೆಯುವ ನಿಟ್ಟಿನಲ್ಲಿ ಶಿಕ್ಷಕರಿಗೆ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ADVERTISEMENT

ಸ್ಕೌಟ್ಸ್ ಸಂಸ್ಥೆಯ ಕೇಂದ್ರ ಸ್ಥಾನಿಕ ಆಯುಕ್ತ ಚಿನ್ನಸ್ವಾಮಿರೆಡ್ಡಿ ಮಾತನಾಡಿ, ‘ಸ್ಕೌಟ್ಸ್‌ ಮತ್ತು ಗೈಡ್ಸ್‌ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು ಯುವಕರಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರೋವರ್ ಮತ್ತು ರೇಂಜರ್ ಘಟಕಗಳ ಮೂಲಕ ವಿದ್ಯಾರ್ಥಿಗಳಲ್ಲದವರು ಸಂಸ್ಥೆಯೊಂದಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸಿದೆ. ಆನೇಕಲ್‌ನ್ನು ಪೂರ್ವ ಜಿಲ್ಲೆಯೆಂದು ಸ್ಕೌಟ್ಸ್ ಸಂಸ್ಥೆ ಎರಡು ವರ್ಷಗಳ ಹಿಂದೆ ಘೋಷಿಸಿದ್ದು ಸ್ಥಳೀಯ ಘಟಕಗಳ ಮೂಲಕ ಪರಿಸರ ಸಂರಕ್ಷಣೆ, ಶ್ರಮದಾನ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

ಜಿಲ್ಲಾ ಕಾರ್ಯದರ್ಶಿ ಎ.ಎನ್.ನರೇಂದ್ರಕುಮಾರ್ ಮಾತನಾಡಿ, ‘ಸ್ಕೌಟ್ಸ್ ವತಿಯಿಂದ ಆನ್‌ಲೈನ್‌ನಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಸಂಪನ್ಮೂಲ ವ್ಯಕ್ತಿಗ ಳಿಂದ ವಿಪತ್ತು ನಿರ್ವಹಣೆ, ಸಂಕಲ್ಪ, ಪ್ರೇರಣಾ ತರಬೇತಿಗಳನ್ನು ಆನ್‌ಲೈನ್‌ ಮೂಲಕ ನೀಡಲಾಗುತ್ತಿದೆ’ ಎಂದರು.

ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಡಿ.ಮುನಿರಾಜು, ಕಾರ್ಯದರ್ಶಿ ಬಿ.ಎಲ್.ಶೇಖರ್, ಶಾಂತಿನಿಕೇತನ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎ.ವಿ.ರಂಗರಾಜು, ದೈಹಿಕ ಶಿಕ್ಷಣ ಪರಿವೀಕ್ಷಕ ಡಿ.ಎನ್.ವೀರಭದ್ರಪ್ಪ, ಅಕ್ಷರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವೀಣಾ, ಸ್ಕೌಟ್ಸ್ ಸಂಸ್ಥೆಯ ಖಜಾಂಚಿ ಲಕ್ಷ್ಮೀಕಾಂತರಾಜು, ತರಬೇತಿ ಆಯುಕ್ತ ಮಂಜುನಾಥ್, ಸಹಾಯಕ ಜಿಲ್ಲಾ ಆಯುಕ್ತ ರಾಹುಲ್ ಆಚಾರ್ಯ, ಸಹಕಾರ್ಯದರ್ಶಿ ಜಿ.ನಾಗರಾಜು, ಬ್ಯಾಡ್ಜ್ ಕಾರ್ಯದರ್ಶಿ ಮುನಿಕೃಷ್ಣಪ್ಪ, ಜಿಲ್ಲಾ ಸಂಘಟಕ ಕೆ.ಟಿ.ಮಲ್ಲೇಶಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.