ADVERTISEMENT

ಹೊಸಕೋಟೆ: ನಿಲ್ಲದ ಕ್ಯಾಟ್ ಫಿಷ್ ದಂಧೆ

ಸೂಕ್ತ ಕ್ರಮದ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 14:04 IST
Last Updated 3 ಜನವರಿ 2020, 14:04 IST
ನಿಷೇಧಿತ ಆಫ್ರಿಕನ್ ಕ್ಯಾಟ್ ಫಿಷ್
ನಿಷೇಧಿತ ಆಫ್ರಿಕನ್ ಕ್ಯಾಟ್ ಫಿಷ್   

ಹೊಸಕೋಟೆ: ರಾಜ್ಯ ಹೈಕೋರ್ಟ್ ಕಟ್ಟುನಿಟ್ಟಿನ ಎಚ್ಚರಿಕೆ ನಡುವೆಯೂ ಸೂಲಿಬೆಲೆ ಹಾಗೂ ನಂದಗುಡಿ ಹೋಬಳಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಆಫ್ರಿಕನ್ ಕ್ಯಾಟ್‌ಫಿಷ್ ಸಾಕಾಣಿಕೆ ಹಾವಳಿ ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಕೆಲ ದಿನಗಳ ಹಿಂದೆ ಅಧಿಕಾರಿಗಳ ಶಿಸ್ತು ಕ್ರಮದಿಂದ ದಂಧೆಗೆ ಕಡಿವಾಣ ಬಿದ್ದರೂ ಮತ್ತೆ ತಲೆಯೆತ್ತಿದೆ.

ವಿದೇಶದಿಂದ ಅಕ್ರಮವಾಗಿ ಆಮದಾಗುವ ಈ ಕ್ಯಾಟ್‌ಫಿಷ್ ಮರಿಗಳನ್ನು ಪಶ್ಚಿಮ ಬಂಗಾಳದ ಮೂಲಕ ರಾಜ್ಯಕ್ಕೆ ತಂದು ಅದನ್ನು ರೈತರ ಜಮೀನುಗಳನ್ನು ಬಾಡಿಗೆಗೆ ಪಡೆದು ಹೊಂಡ ತೋಡಿ ಸಾಕಲಾಗುತ್ತಿದೆ. ಬಾಡಿಗೆಗೆ ಆಸೆಪಟ್ಟು ರೈತರು ತಮ್ಮ ಜಮೀನು ಇಂತಹ ಕೃತ್ಯಕ್ಕೆ ನೀಡುತ್ತಿದ್ದಾರೆ. ಆಗಾಗ್ಗೆ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಪೊಲೀಸರ ಸಹಾಯದಿಂದ ದಾಳಿ ನಡೆಸಿದರೂ ಅದು ನೆಪಮಾತ್ರವಾಗಿದೆ ಎಂಬುದು ಕೆಲವರ ಆರೋಪ.

ನಿಷೇಧ ಏಕೆ

ADVERTISEMENT

ಈ ಮೀನುಗಳಿಗೆ ಆಹಾರ ರೇಷ್ಮೆಹುಳು ಹಾಗೂ ಪ್ರಾಣಿಗಳ ತ್ಯಾಜ್ಯ. ಕೆಲವು ಬಾರಿ ಬೀದಿ ನಾಯಿಗಳು ಇವಕ್ಕೆ ಆಹಾರ. ಹೊಂಡದಿಂದ ಬರುವ ದುರ್ವಾಸನೆ ಕಿಲೋಮೀಟರ್ ಗಟ್ಟಲೆ ಹರಡುತ್ತದೆ. ಈ ಹೊಂಡಗಳಲ್ಲಿ ಉತ್ಪತ್ತಿಯಾಗುವ ಸೊಳ್ಳೆ, ನೊಣಗಳಿಂದ ಸಾಂಕ್ರಾಮಿಕ ರೋಗ ಹರಡುತ್ತದೆ. ಈ ಮೀನು ಸೇವನೆಯಿಂದ ಮನುಷ್ಯರಿಗೆ ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆ ಬರುವ ಸಾಧ್ಯತೆ ಇದೆ. ಈ ಮೀನಿನ ಸಾಕಾಣಿಕೆ ಹಾಗೂ ಮಾರಾಟವನ್ನು ಸರ್ಕಾರ ನಿಷೇಧಿಸಿದೆ. ಕೆಲವು ಬಾರಿ ಇಂತಹ ಹೊಂಡಗಳನ್ನು ಅಧಿಕಾರಿಗಳು ನಾಶ ಮಾಡಿದರೂ ಅವರ ವಿರುದ್ಧ ದೂರು ದಾಖಲಿಸಿಕೊಳ್ಳಲು ಪ್ರಭಾವಿಗಳ ಒತ್ತಡವಿದೆ.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ನಿಷೇಧಿತ ಕ್ಯಾಟ್‌ಫಿಷ್ ಹೊಂಡಗಳನ್ನು ನಾಶ ಮಾಡಿ ಕ್ರಿಮಿನಲ್ ಪ್ರಕರಣ ದಾಖಲಾಗಿಸುವುದು. ಕ್ಯಾಟ್‌ಫಿಷ್ ಸಾಕದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕನ್ನು ಕ್ಯಾಟ್‌ಫಿಷ್ ದಂಧೆಯಿಂದ ಮುಕ್ತಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.