ADVERTISEMENT

ಜೆಡಿಎಸ್‌ ಸೇರ್ಪಡೆ ಬಗ್ಗೆ ಇನ್ನು ನಿರ್ಧಾರವಾಗಿಲ್ಲ: ಜಾಲಪ್ಪ ಪುತ್ರ ನರಸಿಂಹಸ್ವಾಮಿ

ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 7:04 IST
Last Updated 6 ಏಪ್ರಿಲ್ 2021, 7:04 IST
ಬಿಜೆಪಿ ಮುಖಂಡ, ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಸೋಮವಾರ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು
ಬಿಜೆಪಿ ಮುಖಂಡ, ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಸೋಮವಾರ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು   

ದೊಡ್ಡಬಳ್ಳಾಪುರ: ಆಪರೇಷನ್‌ ಕಮಲದ ಮೂಲಕ 2009ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಶಾಸಕರಾಗಿ ಆಯ್ಕೆಯಾಗಿದ್ದ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಸೋಮವಾರ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ತಾಲ್ಲೂಕಿನಲ್ಲಿ ತೀವ್ರ ಚೆರ್ಚೆಗೆ ಕಾರಣವಾಗಿದೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಜೆ.ನರಸಿಂಹಸ್ವಾಮಿ ‘ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಕುರಿತಂತೆ ಚರ್ಚಿಸಲು ಕುಮಾರಸ್ವಾಮಿ ಅವರು ಆಹ್ವಾನಿಸಿದ್ದರು. ಜೆಡಿಎಸ್‌ ಪಕ್ಷ ಸೇರುವಂತೆಯು ಆಹ್ವಾನ ನೀಡಿದ್ದಾರೆ. ಆದರೆ ಕ್ಷೇತ್ರದಲ್ಲಿನ ನಮ್ಮ ಹಿಂಬಾಲಕರೊಂದಿಗೆ ಚರ್ಚಿಸಿದ ನಂತರವಷ್ಟೇ ನಿರ್ಧಾರ ತಿಳಿಸುವುದಾಗಿ ಹೇಳಿದ್ದೇನೆ. ಸದ್ಯಕ್ಕೆ ನಾನು ಬಿಜೆಪಿಯಲ್ಲೇ ಇದ್ದೇನೆ’ ಎಂದರು.

ಕುಮಾರಸ್ವಾಮಿ ಅವರ ಭೇಟಿ ಸಂದರ್ಭದಲ್ಲಿ ಹಾಜರಿದ್ದ ಜೆಡಿಎಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಅಪ್ಪಯ್ಯ ಮಾಹಿತಿ ನೀಡಿ, ‘ಜೆಡಿಎಸ್‌ ಪಕ್ಷ ಸೇರುವ ಕುರಿತಂತೆ ಈಗಾಗಲೇ ಮೊದಲ ಸುತ್ತಿನ ಮಾತುಕತೆ ಮುಗಿದಿವೆ. ನರಸಿಂಹಸ್ವಾಮಿ ಅವರನ್ನು ಪಕ್ಷಕ್ಕೆ ಸೇರ್ಪಡೆಮಾಡಿಕೊಳ್ಳುವ ಕುರಿತಂತೆ ನಮ್ಮ ಅಭಿಪ್ರಾಯವನ್ನು ಕುಮಾರಸ್ವಾಮಿ ಅವರು ಕೇಳಿದ್ದಾರೆ. ಪಕ್ಷ ಸಂಘಟನೆಗೆ ಯಾರು ಬಂದರು ಸಹ ನಾವು ಸ್ವಾಗತಿಸುತ್ತೇವೆ’ ಎಂದರು.

ADVERTISEMENT

ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಆರ್.ಎಲ್.ಜಾಲಪ್ಪ ಅವರ ಪುತ್ರ ನರಸಿಂಹಸ್ವಾಮಿ, ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆ ಯಾಗಿದ್ದರು. ನಂತರ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭ ದಲ್ಲಿ ಜಾಲಪ್ಪ ಅವರ ವಿರೋಧದ ನಡುವೆಯೂ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿ ಕೊಳಚೆ ನಿರ್ಮೂಲನೆ ಮಂಡಳಿ ಅಧ್ಯಕ್ಷರಾಗಿದ್ದರು.

2018ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ವೇಳೆ ಮತದಾನದ ಹಿಂದಿನ ರಾತ್ರಿ ತಟಸ್ಥರಾಗಿ ಉಳಿದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣರಾಗಿದ್ದರು. ಇತ್ತೀಚೆಗೆ ತಾಲ್ಲೂಕಿನ ಯಾವುದೇ ಬಿಜೆಪಿ ಕಾರ್ಯಕ್ರಮಗಳ ವೇದಿಕೆಯಲ್ಲೂ ನರಸಿಂಹಸ್ವಾಮಿ ಅವರು ಕಾಣಿಸಿಕೊಳ್ಳದೆ ಅಂತರ ಕಾಯ್ದು ಕೊಂಡಿದ್ದರು.

ಜೆಡಿಎಸ್ ಮೂಲಗಳ ಪ್ರಕಾರ ಯುಗಾದಿ ನಂತರ ದೊಡ್ಡಬಳ್ಳಾಪುರದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸುವ ಮೂಲಕ ಜೆಡಿಎಸ್‌ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.