ADVERTISEMENT

ಹಿಂಸಾತ್ಮಕ ಘಟನೆಗೆ ಸಚಿವರೇ ಹೊಣೆ

ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌ ಆರೋಪ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 4:34 IST
Last Updated 19 ಆಗಸ್ಟ್ 2022, 4:34 IST
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಯುಕ್ತ ಹೋರಾಟ ಕುರಿತು ಸಭೆ ನಡೆಸಿದ ವಿವಿಧ ಸಂಘಟನೆಯ ಮುಖಂಡರು
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಯುಕ್ತ ಹೋರಾಟ ಕುರಿತು ಸಭೆ ನಡೆಸಿದ ವಿವಿಧ ಸಂಘಟನೆಯ ಮುಖಂಡರು   

ದೇವನಹಳ್ಳಿ: ಪಟ್ಟಣದಲ್ಲಿ ನಡೆದ ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಹಿಂಸಾತ್ಮಕ ಘಟನೆ ನಡೆದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್‌ ಹಾಗೂ ಜಿಲ್ಲಾಡಳಿತವೇ ನೇರ ಹೊಣೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌ ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸಂಯುಕ್ತ ಹೋರಾಟ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಚನ್ನರಾಯಪಟ್ಟಣದಲ್ಲಿ ರೈತರು ಧರಣಿ ನಡೆಸುತ್ತಿದ್ದಾರೆ. ಈ ಹೋರಾಟ ಕುರಿತು ಜಿಲ್ಲಾಡಳಿತಕ್ಕೂ ಗೊತ್ತಿದೆ. ಅಹಿಂಸಾತ್ಮಕ, ಪ್ರಜಾಸತ್ತಾತ್ಮಕವಾಗಿ ನಡೆಯುತ್ತಿದ್ದ ಹೋರಾಟಕ್ಕೆ ಹಿಂಸೆಯ ರೂಪ ನೀಡಿ ಯಾವುದೇ ವಾರೆಂಟ್‌ ಇಲ್ಲದೆ ಹಲವಾರು ನಾಯಕರನ್ನು ಬಂಧಿಸಿ 70ಕ್ಕೂ ಹೆಚ್ಚಿನ ರೈತರನ್ನು ಬಂಧಿಸಿ ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ದೂರಿದರು.

ADVERTISEMENT

ಹೋರಾಟದಲ್ಲಿ ಭಾಗಿಯಾಗಿರುವವರನ್ನು ಅಮಾನುಷವಾಗಿ ಎಳೆದೊಯ್ದಿದ್ದಾರೆ. ಒಟ್ಟಾರೆ ದಮನಕಾರಿ ಪ್ರವೃತ್ತಿಯನ್ನು ಸರ್ಕಾರ ರೈತರ ಮೇಲೆ ಪ್ರಯೋಗ ಮಾಡಿದೆ. ಮುಖ್ಯಮಂತ್ರಿ ಅವರು ಈ ಕುರಿತು ಸಮಗ್ರ ವರದಿ ತರಿಸಿಕೊಂಡು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಜಿ.ಸಿ. ಬೈಯಾರೆಡ್ಡಿ ಮಾತನಾಡಿ, ‘ಜಿಲ್ಲೆಯಲ್ಲಿ ರೈತಾಪಿ ವರ್ಗ ಉಳಿಯಬೇಕೇ ಅಥವಾ ಕಾರ್ಪೋರೇಟ್‌ ಸಂಸ್ಥೆ ಸ್ಥಾಪನೆಯಾಗಬೇಕೆಂಬ ಸಂಘರ್ಷದಲ್ಲಿದ್ದೇವೆ. ಕೋಮುವಾದಿ ರಾಜಕೀಯ ಪಕ್ಷವು ಕಾರ್ಪೋರೇಟ್‌ ಕಂಪನಿಗಳ ಮನವೊಲಿಸಲು ರೈತರ ಮೇಲೆ ಹಿಂಸೆ ಮಾಡುತ್ತಿದೆ. ಇದಕ್ಕೆ ನೇರವಾಗಿ ಸುಧಾಕರ್‌ ಕಾರಣರಾಗಿದ್ದಾರೆ ಎಂದು ಟೀಕಿಸಿದರು.

ಮನೆಗಳ ಮೇಲೆ ಬಾವುಟ ಹಾರಿಸಿದರೆ ಅದು ರಾಷ್ಟ್ರ ಪ್ರೇಮವಲ್ಲ. ಹಸಿದ ಹೊಟ್ಟೆಗೆ ಅನ್ನ ನೀಡುವುದು ನಿಜವಾದ ದೇಶಪ್ರೇಮ. ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದು ಪೊಲೀಸರು ಎಂದು ಹೇಳಿದರು.

ನಿರಾಣಿ ಎಂಬ ವ್ಯಾಪಾರಿ ಕೈಗಾರಿಕಾ ಮಂತ್ರಿಯಾದ ಮೇಲೆ ಕೆಐಎಡಿಬಿ ರಿಯಲ್‌ ಎಸ್ಟೇಟ್‌ ಸಂಸ್ಥೆಯಾಗಿ ಮಾರ್ಪಟ್ಟಿದೆ. ರಾಜ್ಯದಾದ್ಯಂತ ಭೂ ಸ್ವಾಧೀನಗೊಂಡಿರುವ ಎಲ್ಲಾ ರೈತರು ಹೋರಾಟಗಾರರನ್ನು ಸಂಪರ್ಕಿಸುತ್ತಿದ್ದಾರೆ. ಜಮೀನು ವಶಪಡಿಸಿಕೊಳ್ಳುವಾಗ ಕಾನೂನು ಪ್ರಕ್ರಿಯೆ ಅನುಸರಣೆಯಾಗುತ್ತಿಲ್ಲ ಎಂದು ಶಾಶ್ವತ ಹೋರಾಟ ಸಮಿತಿಯ ಮುಖಂಡ ಅಂಜನರೆಡ್ಡಿ ತಿಳಿಸಿದರು.

ವಕೀಲ ಪರಿಷತ್ ಮುಖಂಡರಾದ ಅರೀಂದ್ರ, ಪ್ರಾಂತ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಚಂದ್ರತೇಜಸ್ವಿ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ನಂಜಪ್ಪ, ಅಶ್ವತ್ಥ್, ಮಾರೇಗೌಡ, ಮುಕುಂದ, ಪ್ರಮೋದ್‌ ಗೌಡ, ಮೋಹನ್‌, ವೆಂಕಟರಮಣ್ಣಪ್ಪ, ರಮೇಶ್‌, ನರಸಪ್ಪ, ಮುನೇಗೌಡ, ಎಚ್‌.ಕೆ. ವೆಂಕಟೇಶಪ್ಪ, ರವಿಚಂದ್ರ, ನಂಜೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.